ಕಲಬುರಗಿ | ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರಿಗೆ ಮಾದರಿಯಾದ ‘ಖಣದಾಳ ಸರ್ಕಾರಿ ಪ್ರೌಢಶಾಲೆ’

Date:

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರಿಗೆ ಖಣದಾಳದ ಪ್ರೌಢಶಾಲೆ ಶಾಲೆ ಮಾದರಿ ಶಾಲೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಜನರಿಗೆ ಏನೋ ಒಂದು ಭಾವನೆ. ಅಂಥದ್ದರಲ್ಲಿ ಈ ಶಾಲೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಖಣದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಈಗ ನೋಡುವವರಿಗೆ ಆಕರ್ಷಣೀಯ ಕೇಂದ್ರಬಿಂದುವಾಗಿದೆ.

ಶಾಲೆಯ ಶಿಕ್ಷಕರು ಪ್ರತಿ ವಿದ್ಯಾರ್ಥಿಗಳಿಗೆ ಸಸಿ ನೀಡಿ ಅದನ್ನು ಬೆಳೆಸುವ ಜವಾಬ್ದಾರಿ ನೀಡಿ, ಪರಿಸರದ ಮಹತ್ವ ತಿಳಿಸುವ ಜೊತೆಗೆ ಶಾಲೆಯ ಪರಿಸರವನ್ನೇ ಬದಲಾಯಿಸಿದ್ದಾರೆ. ಮಕ್ಕಳ ಕಲಿಕೆಗೆ ಬೇಕಾಗುವಂತಹ ಪಠ್ಯಪೂರಕ ವಾತಾವರಣವನ್ನು ಸೃಷ್ಠಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಶಾಲೆಯ ಗೋಡೆಗಳನ್ನು ಪುಸ್ತಕದ ಹಾಳೆಗಳಂತೆ ಪರಿವರ್ತಿಸಿದ್ದು, ಪ್ರಪಂಚದ ಬಹುಮುಖ್ಯ ವಿಷಯಗಳು ವಿಜ್ಞಾನ ವಿಷಯಗಳ ಕುರಿತು ಮಾಹಿತಿ ನೀಡುವ ಚಿತ್ರಗಳನ್ನು ಶಾಲೆಯ ಗೋಡೆಗಳ ಮೇಲೆ ಬರೆಸಿದ್ದಾರೆ. ಇದರಿಂದ ಸುಲಭ ರೀತಿಯಲ್ಲಿ ವಿಷಯ ತಿಳಿದುಕೊಳ್ಳಲು ಸಹಾಯವಾಗುವಂತೆ ಮಾಡಿದ್ದಾರೆ.

ಖಣದಾಳ ಶಾಲೆ

ಅಫಜಲಪುರ ತಾಲೂಕು ಖಣದಾಳ ಗ್ರಾಮ ಸರ್ಕಾರಿ ಪ್ರೌಢಶಾಲೆ 1991ರಲ್ಲಿ ಆರಂಭವಾಗಿದ್ದು‌, 8ರಿಂದ 10ನೇ ತರಗತಿಯವರೆಗೆ ಕಲಿಯಲು ಅವಕಾಶವಿದೆ. ಶಾಲೆಯಲ್ಲಿ 445 ವಿದ್ಯಾರ್ಥಿಗಳಿದ್ದಾರೆ. ಒಟ್ಟಾರೆಯಾಗಿ 3 ಎಕರೆ 8 ಗುಂಟೆ ಭೂಮಿಯಲ್ಲಿರುವ ಈ ಶಾಲಾ ಆವರಣದಲ್ಲಿ, ಕಬಡ್ಡಿ , ವಾಲಿಬಾಲ್, ಖೋ ಖೋ, ಗುಂಡು ಎಸೆತ, ಎತ್ತರ ಜಿಗಿತ, ಉದ್ದ ಜಿಗಿತ ಕ್ರೀಡೆಗಳಿಗಾಗಿ ಪ್ರತಿಯೊಂದಕ್ಕೂ ವ್ಯವಸ್ಥಿತವಾಗಿ ಅಂಕಣ ಬೋರ್ಡ್ ಅಳವಡಿಸಲಾಗಿದೆ.

ಉಳಿದ ಜಾಗದಲ್ಲಿ ಗಿಡಗಳನ್ನು ನೆಟ್ಟಿದ್ದು, ಗಾರ್ಡನ್‌ನಲ್ಲಿ ಕುಳಿತುಕೊಳ್ಳಲು ಬೆಂಚ್ ನಿರ್ಮಾಣ ಮಾಡಿದ್ದಾರೆ. ಜತೆಗೆ ಬಯಲು ರಂಗಮಂದಿರ, ಸಂಗೀತಾ ಕ್ಲಾಸ್ ಸ್ಮಾರ್ಟ್ ಕ್ಲಾಸ್, ಗ್ರಂಥಾಲಯ, ಅಟಲ್ ಟಿಂಕರಿಂಗ್ ಲ್ಯಾಬ್, ಕ್ರೀಡೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಶುದ್ಧ ಕುಡಿಯುವ ನೀರಿನ ಘಟಕ, ಸ್ವಚ್ಛವಾದ ಶೌಚಾಲಯದ ವ್ಯವಸ್ಥೆಯ ಜೊತೆಗೆ ಒಳ್ಳೆಯ ಕಲಿಕೆಯೂ ಕೂಡ ನೀಡಲಾಗುತ್ತಿದೆ.

ಈ ಶಾಲೆಯು ತಾಲೂಕಿನಲ್ಲಿಯೇ ವಿಭಿನ್ನವಾದ ಶಾಲೆಯಾಗಿ ಕಾಣಿಸಿಕೊಳ್ಳುತ್ತಿದೆ. ಸರ್ಕಾರಿ ಶಾಲೆಗಳೆಂದರೆ ಸರಿಯಾದ ಸಮಯಕ್ಕೆ ಶಿಕ್ಷಕರು ಶಾಲೆಗೆ ಬರುವುದಿಲ್ಲ, ಬಂದರೂ ನೆಟ್ಟಗೆ ಅಕ್ಷರ ಅಭ್ಯಾಸ ಮಾಡಿಸುವುದಿಲ್ಲ ಎಂದು ಹಳ್ಳಿಗಳಲ್ಲಿ ಸರ್ವೆ ಸಾಮಾನ್ಯವಾಗಿ ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ. ಆದರೆ ಖಣದಾಳ ಶಾಲೆ ಅಕ್ಷರ ಅಭ್ಯಾಸಕ್ಕೂ ಸೈ, ಕಂಪ್ಯೂಟರ್ ಕಲಿಕೆಗೂ ಸೈ ಎನಿಸಿಕೊಂಡಿದೆ.

ಮಕ್ಕಳಿಗೆ ಅ ಚಿತ್ರಗಳ ಬಗ್ಗೆ ಬರೆದಿರುವ ಅಕ್ಷರಗಳ ಬಗ್ಗೆ ಕೇಳಿದರೆ ಸಾಕು ಥಟ್ ಅಂತ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಶಾಲೆಯ ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜ್ಞಾನವನ್ನು ನೀಡುತ್ತಿದ್ದಾರೆ. ಅಲ್ಲದೇ, ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲ ಪರಿಸರ ಕಾಳಜಿ, ಆಟಪಾಠಗಳ ಬಗ್ಗೆಯೂ ಇಲ್ಲಿ ಅರಿವು ಮೂಡಿಸಲಾಗುತ್ತಿದೆ. ಶಾಲೆಯ ಆವರಣದಲ್ಲಿ ಸಣ್ಣ ಸಸಿ ಹಿಡಿದು ದೊಡ್ಡ ಮರಗಳು ಸೇರಿ 3 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಕೆಲವೊಮ್ಮೆ ಶಿಕ್ಷಕರು ಮಕ್ಕಳಿಗೆ ಗಿಡಗಳ ನೆರಳಿನಲ್ಲಿ ಕುಳಿಸಿಕೊಂಡು ಪಾಠ ಮಾಡುತ್ತಾರೆ ಇದು ಒಂದು ರೀತಿಯಲ್ಲಿ ಮಕ್ಕಳ ಕಲಿಕೆಗೆ ಖುಷಿ ನೀಡುತ್ತದೆ.

ಮುಖ್ಯ ಶಿಕ್ಷಕ ರಮೇಶ್ ಕುಮಾರ್ ಈ ದಿನ. ಕಾಮ್‌ನೊಂದಿಗೆ ಮಾತನಾಡಿ, “ಮಕ್ಕಳ ದಾಖಲಾತಿ ಸಂಖ್ಯೆ 445ರಷ್ಟಿದ್ದು, ಹತ್ತನ್ನೆರೆಡು ಹಳ್ಳಿಗಳಿಂದ ಮಕ್ಕಳು ಶಾಲೆಗೆ ಬರುತ್ತಾರೆ. ಸರ್ಕಾರದ ನಿಯಮ ಪ್ರಕಾರ ಎಷ್ಟು ಶಿಕ್ಷಕರು ಇರಬೇಕು ಅಷ್ಟು ಜನ ನಮ್ಮ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ತಿಳಿಸಿದರು.

“ವಿಜ್ಞಾನ ವಿಷಯದ ಪ್ರಯೋಗಾಲಯವಿದೆ. ಗ್ರಂಥಾಲಯದಲ್ಲಿ ಹಲವು ತರಹದ ಪುಸ್ತಕದ ಜತೆಗೆ ಪಠ್ಯಪುಸ್ತಕ ಇರಿಸಲಾಗಿದೆ. ಸಂಗೀತಾ ಕ್ಲಾಸ್ ಕೂಡ ನಡೆಸಲಾಗುತ್ತಿದೆ. ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿಯಿದ್ದು, ಮಕ್ಕಳಿಗೆ ಬೇಸಿಕ್ ಕಲಿಸಿ ಕೊಡಲಾಗುತ್ತದೆ. ಆಟದಲ್ಲಿ ನಮ್ಮ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದು, ರಾಜ್ಯ ಮಟ್ಟದಲ್ಲೂ ಮಿಂಚಿದ್ದಾರೆ” ಎಂದರು.

“ಆರೋಗ್ಯ ಇಲಾಖೆಯವರು ಆನೆಕಾಲು ರೋಗ ಕುರಿತು ಪೊಲೀಸ್ ಇಲಾಖೆಯವರು ಪೋಕ್ಸೊ ಕಾಯ್ದೆ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ಕಾನೂನಿನ ತರಬೇತಿ ನೀಡುವುದಕ್ಕೆ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಮಕ್ಕಳನ್ನು ಒಂದೇ ಕಡೆ ಸೇರಿಸಿ ತರಬೇತಿ ನೀಡುವಂತಹ ವ್ಯವಸ್ಥೆ ಮಾಡಲಾಗಿದೆ” ಎಂದರು.

“1991ರಲ್ಲಿ ಶಾಲೆ ಪ್ರಾರಂಭವಾಗಿದ್ದು, ಹೊಸಭಾಗ ಹಳೆಭಾಗ ಒಟ್ಟು ಸೇರಿಕೊಂಡು ನಮ್ಮ ಶಾಲೆ 3 ಎಕರೆ 8 ಗುಂಟೆ ಜಾಗ ಹೊಂದಿದೆ. ಈ ಪೈಕಿ ಆಟದ ಮೈದಾನಕ್ಕೆ ಬೇಕಾದಷ್ಟು ಜಾಗ ಬಿಟ್ಟು ಉಳಿದ ಭೂಮಿಯಲ್ಲಿ ನಾವು ಗಾರ್ಡನ್ ಮಾಡಿದ್ದೇವೆ. ಗಾರ್ಡನ್‌ಗೆ ಪೈಪ್ ವ್ಯವಸ್ಥೆ ಮಾಡಲಾಗಿದೆ. ಒಂದೇ ಬೋರ್‌ವೆಲ್ ಇರುವುದರಿಂದ ನೀರು ಸಾಕಾಗುತ್ತಿಲ್ಲ. ಆದರಿಂದ ಇನ್ನೊಂದು ಬೋರ್‌ವೆಲ್ ವ್ಯವಸ್ಥೆಯಾದರೆ ತುಂಬಾ ಅನುಕೂಲವಾಗುತ್ತದೆ” ಎಂದು ತಿಳಿಸಿದರು.

“ಶಾಲೆಯಲ್ಲಿ ಎಲ್ಲ ವಿಷಯವಾರು ಶಿಕ್ಷಕರು ಸಂಪೂರ್ಣ ಕರ್ತವ್ಯ ನಿರ್ವಹಿಸುತ್ತಿದ್ದು, ವಿಶೇಷ ಸೌಲಭ್ಯಗಳಿವೆ. ಕೇಂದ್ರ ಸರ್ಕಾರದಿಂದ ಅಟಲ್ ಟಿಂಕರಿಂಗ್ ಲ್ಯಾಬ್‌ಗೆ ₹10 ಲಕ್ಷ ಖರ್ಚು ಮಾಡಿ ಮಕ್ಕಳಿಗೆ ಎಲ್ಲ ರೀತಿಯ ವಿಜ್ಞಾನ ಸಲಕರಣೆಗಳನ್ನು ಒದಗಿಸಲಾಗಿದೆ” ಎಂದು ಆಂಗ್ಲ ಭಾಷಾ ಶಿಕ್ಷಕ ಮಹೇಶ್ ಹೂಗಾರ ಹೇಳಿದರು.

“ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಇದ್ದು, ಮಕ್ಕಳ ಸಂಖ್ಯೆ ಜಾಸ್ತಿ ಇರುವುದರಿಂದ ಇನ್ನೊಂದು ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ. ಕಂಪ್ಯೂಟರ್ ಲ್ಯಾಬ್ ಇದೆ. ವಿದ್ಯಾರ್ಥಿಗಳಿಗೆ ಸಿಗುವ ಎಲ್ಲ ಸೌಲಭ್ಯಗಳ ವ್ಯವಸ್ಥೆ ಹೊಂದಿದ್ದು, ಜತೆಗೆ ಸರ್ಕಾರದಿಂದ ಸಿಗುವ ಉಚಿತ ಸಮವಸ್ತ್ರ ಬಟ್ಟೆ, ಶೂ, ಸಾಕ್ಸ್, ಬಿಸಿಯೂಟ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳನ್ನೂ ಮಕ್ಕಳಿಗೆ ವಿತರಣೆ ಮಾಡಿದ್ದೇವೆ. ಮಕ್ಕಳು ಅತ್ಯಂತ ಶ್ರದ್ಧೆಯಿಂದ ಶಿಸ್ತು ಬದ್ಧವಾಗಿ ಶಾಲೆಗೆ ಬರುತ್ತಾರೆ” ಎಂದರು.

“ಎಲ್ಲ ತರಗತಿಗಳಿಗೆ ಎ, ಬಿ ಸೆಕ್ಷನ್ ತರಹದಲ್ಲಿ ಕೋಣೆಗಳನ್ನು ನಿರ್ಮಿಸಿ ಆ ಒಂದು ವ್ಯವಸ್ಥೆಯಲ್ಲಿ ಬೋಧನೆ ಮಾಡಲಾಗುತ್ತಿದೆ. ಮಕ್ಕಳಿಗೆ ತಕ್ಕಂತೆ ಪೂರಕ ಚಟುವಟಿಕೆಗಳನ್ನು ಮಾಡುವುದಕ್ಕೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಈ ಶಾಲೆ ಕಲಬುರಗಿ ನಗರಕ್ಕೆ ಹತ್ತಿರ ಇದ್ದರೂ ಕೂಡ ಮಕ್ಕಳು ಶಾಲೆಗೆ ನಗರಕ್ಕೆ ಹೋಗದೆ ನಮ್ಮ ಶಾಲೆಯಲ್ಲಿ ದಾಖಲಾತಿ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಸಿಗುತ್ತಿದೆ. ಶಿಕ್ಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ” ಎಂದು ತಿಳಿಸಿದರು.

ಶಾಲೆಯ ವಿದ್ಯಾರ್ಥಿನಿ ರಂಜಿತ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಶಾಲೆಯ ವಾತಾವರಣ ನೋಡಿದರೆ ನಮಗೆ ತುಂಬಾ ಖುಷಿಯಾಗುತ್ತದೆ. ನಮ್ಮ ಈ ಶಾಲೆಯಲ್ಲಿ ನಾವು ತುಂಬಾ ಆಸಕ್ತಿಯಿಂದ ಕಲಿಯುತ್ತಿದ್ದೇವೆ. ಅಲ್ಲದೆ ವಿದ್ಯಾಭ್ಯಾಸದ ಜೊತೆ ಜೊತೆಗೆ ಪರಿಸರ ಬೆಳೆಸುವ ಜವಾಬ್ದಾರಿಯನ್ನು ನಮ್ಮ ಶಿಕ್ಷಕರು ನಮಗೆ ಕಲಿಸಿಕೊಟ್ಟಿದ್ದಾರೆ” ಎಂದು ಹೇಳಿದರು.

“ನಮಗೆ ಪಾಠ ಮಾಡಿದಾಗ ಕೆಲವೊಂದು ವಿಷಯದ ಬಗ್ಗೆ ಅರ್ಥ ಆಗದೇ ಇರುವ ವಿಷಯಗಳನ್ನು ಸ್ಮಾರ್ಟ್ ಕ್ಲಾಸ್‌ನಲ್ಲಿ ತೋರಿಸಿ ಅರ್ಥ ಆಗುವ ರೀತಿಯಲ್ಲಿ ಬೋಧನೆ ಮಾಡುತ್ತಾರೆ” ಎಂದು ಹೇಳಿದರು.

ವಿದ್ಯಾರ್ಥಿ ಹುಂಚೆರಾಯ ಮಾತನಾಡಿ, “ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ನಾವು ಅನೇಕ ಬಗೆಯ ಪ್ರಯೋಗಗಳನ್ನು ಮಾಡಿದ್ದೇವೆ. ಮನೆಯಲ್ಲಿ ದೊರೆಯುವ ಕಡಿಮೆ ಖರ್ಚಿನ ವಸ್ತುಗಳನ್ನು ಬಳಸಿಕೊಂಡು ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುಲ್ಲು ಕತ್ತರಿಸುವ ಯಂತ್ರ, ನಗರಗಳಲ್ಲಿ ಜಾಸ್ತಿ ಅಂತಸ್ತಿನ ಮನೆಗಳು, ಸಿಂಟೆಕ್ಸ್ ತುಂಬಿ ನೀರು ವೇಸ್ಟ್ ಆಗುವುದು ತಡೆಗಟ್ಟುವುದಕ್ಕೆ ಸಿಂಟೆಕ್ಸ್ ತುಂಬಿದ ತಕ್ಷಣ ಸೌಂಡ್ ಆಗುವ ಹಾಗೆ ಪ್ರಯೋಗ ಮಾಡಿದ್ದೀವೆ. ಕಳ್ಳರನ್ನು ಹಿಡಿಯುವ ಪ್ರಯೋಗ ಮಾಡಿದ್ದೇವೆ. ಹೀಗೆ ಹೊಸ ಹೊಸ ರೀತಿಯ ಪ್ರಯೋಗಗಳು ನಮ್ಮ ಶಾಲೆಯಲ್ಲಿ ಕಲಿಸಲಾಗುತ್ತದೆ. ವಿದ್ಯಾಭ್ಯಾಸ ಮಾಡಲು ಒಳೆಯ ವಾತಾವರಣ ಹೊಂದಿರುವುದರಿಂದ ಖುಷಿ ಆಗುತ್ತದೆ” ಎಂದು ಸಂತಸ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಗಡಿ ತಾಲೂಕಿನಲ್ಲೊಂದು ಕಣ್ಮನ ಸೆಳೆಯುವ ಮಾದರಿ ಅಂಗನವಾಡಿ ಕೇಂದ್ರ

ಸಂಗೀತಾ ಶಿಕ್ಷಕರಾದ ವಿರೇಶ್ ಹೂಗಾರ್ ಮಾತನಾಡಿ, “8, 9, 10ನೇ ತರಗತಿಗಳ ಮಕ್ಕಳಿಗೆ ನಾನು ಸಂಗೀತಾ ಕ್ಲಾಸ್ ತೆಗೆದುಕೊಳ್ಳುತ್ತೇನೆ. ನಮ್ಮ ಶಾಲೆಯಲ್ಲಿ ಸಂಗೀತಾ ಕಲಿಸುವುದಕ್ಕೆ ವಿಶೇಷವಾಗಿ ಕೋಣೆಯ ವ್ಯವಸ್ಥೆ ಇದೆ. ಸಂಗೀತಾ ಕ್ಲಾಸ್‌ನಲ್ಲಿ ಸರಳಿ ಸ್ವರ, ಜಂಟಿ ಸ್ವರ ಸೇರಿದಂತೆ ಏಳು ಸ್ವರಗಳನ್ನು ಕಲಿಸಲಾಗುತ್ತದೆ. ನಾಡಗೀತೆ, ರಾಷ್ಟ್ರಗೀತೆ, ಭಾವಗೀತೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಸಂಗೀತಾ ಪರೀಕ್ಷೆ ಕೂಡ ಕೊಡಿಸಿದ್ದೇವೆ” ಎಂದರು.

“ಪ್ರತಿ ವರ್ಷ ನಾಡಹಬ್ಬಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡುವುದಕ್ಕೆ ಸರ್ಕಾರದಿಂದ ಜಿಲ್ಲಾಧಿಕಾರಿಗಳು, ಡಿಡಿಪಿಐ ಅವರು ಆದೇಶ ಮಾಡುತ್ತಾರೆ” ಎಂದು ಹೇಳಿದರು.

ಗೀತಾ ಹೊಸಮನಿ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಇಬ್ಬರ ಬಂಧನ

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ ಉಗಾರ ರಸ್ತೆಗೆ ಹೊಂದಿಕೊಂಡ...

ಬೆಂ.ಗ್ರಾಮಾಂತರ | ಕೃಷಿ ಹೊಂಡಕ್ಕೆ ಜಾರಿ ಬಿದ್ದ ಮಗಳು; ರಕ್ಷಿಸಲು ಹೋದ ಪೋಷಕರೂ ಸಾವು

ಕೃಷಿ ಹೊಂಡದಲ್ಲಿ ಕೈತೊಳೆಯಲು ಹೋಗಿ ಜಾರಿ ಬಿದ್ದ ಮಗಳನ್ನು ರಕ್ಷಿಸಲು ಹೋದ...

ಉಡುಪಿ | ಸರ್ಕಾರ ಒಪ್ಪದೆ ಜಾತಿಗಣತಿ ವರದಿಯ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ: ಜಯಪ್ರಕಾಶ್ ಹೆಗ್ಡೆ

"ರಾಜ್ಯದ 5.98 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆ ಮಾಡಿದ ಸಾಮಾಜಿಕ ಶೈಕ್ಷಣಿಕ ಜನಗಣತಿ...

ದಾವಣಗೆರೆ | ಹೊಸಬರಿಗೆ ಅವಕಾಶ ಕೇಳಿದ್ದರಲ್ಲಿ ತಪ್ಪೇನಿದೆ: ಮಾಜಿ ಸಚಿವ ರೇಣುಕಾಚಾರ್ಯ

ಮುಂಬರುವ ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವಾಗ ಹೊಸಮುಖಗಳಿಗೆ...