ಮಂಗಳೂರಿನ ಸೈಂಟ್ ಜರೋಜಾ ಶಾಲೆಯ ಶಿಕ್ಷಕಿ ಹಿಂದು ಧರ್ಮ ನಿಂದನೆ ಮಾಡಿದ್ದರೆ ಅವರ ಮೇಲೆ ಕಾನೂನಾತ್ಮಕವಾಗಿ ಕ್ರಮ ಆಗಲಿ, ಶಿಕ್ಷೆಯೂ ಆಗಲಿ. ಅದಕ್ಕೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರದ್ದೇ ಕ್ರಮ, ನಿಯಮಗಳಿವೆ ಎಂದು ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿದ್ದಾರೆ.
ಸೈಂಟ್ ಜರೋಜಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗ ಪಾಠ ಮಾಡಿದ್ದ ಶಿಕ್ಷಕಿ ರಾಮಾಯಣ, ಮಹಾಭಾರತ ಕಾಲ್ಪನಿಕವೆಂದು ಹೇಳಿದ್ದರು. ಇದು ಹಿಂದು ಧರ್ಮೀಯರ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ಶಾಲೆಗೆ ಮುತ್ತಿಗೆ ಹಾಕಿ ಗೂಂಡಾಗಿರಿ ನಡೆಸಿದ್ದಾರೆ. ಶಾಸಕರ ವರ್ತನೆಯನ್ನು ಖಂಡಿಸಿ ಮುನೀರ್ ಕಾಟಿಪಳ್ಳ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ಯಾವುದೇ ಆರೋಪಗಳ ಕುರಿತು ನಿಯಮಗಳ ಪ್ರಕಾರ ತನಿಖೆ ನಡೆದು ಅಪರಾಧ ಸಾಬೀತಾದರೆ ಶಿಕ್ಷೆ ವಿಧಿಸುವುದು ಸರಿಯಾದ ವಿಧಾನ. ʼಬೀದಿ ನ್ಯಾಯʼ ವಿಧಿಸಲು ಇದು ಅರಾಜಕ ದೇಶ ಅಲ್ಲ, ಸರ್ವಾಧಿಕಾರಿಗಳ ನಾಡೂ ಅಲ್ಲ. ಶಾಸಕರಾದವರಿಗೆ ಈ ಜ್ಞಾನ ಇರಬೇಕು” ಎಂದಿದ್ದಾರೆ.
“ಪ್ರಾಥಮಿಕ ಶಾಲೆಯ ಮುಗ್ಧ ವಿದ್ಯಾರ್ಥಿಗಳನ್ನು ತಮ್ಮದೇ ಶಾಲೆಯ ವಿರುದ್ಧ ಮುತ್ತಿಗೆಗೆ ಬಳಸಿರುವುದು, ಧಾರ್ಮಿಕ ಘೋಷಣೆಗಳನ್ನು ಕೂಗಿಸಿರುವುದು ನಾಚಿಕೆಗೇಡಿನ ಕೃತ್ಯ. ಶಾಸಕನಿಗಿರಬೇಕಾದ ಕನಿಷ್ಟ ಪ್ರಜ್ಞೆ, ಸಮಾಜದ ಭವಿಷ್ಯದ ಕುರಿತು ಕಾಳಜಿ ವೇದವ್ಯಾಸ ಕಾಮತರಿಗೆ ಇಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ” ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
“ಮಂಗಳೂರಿನ ಸಾಮಾನ್ಯ, ಕಡಿಮೆ ಆದಾಯದ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗಿರುವ ಡೊನೇಷನ್ ಹಾವಳಿ, ದುಬಾರಿ ಫೀಸು, ನಿಯಮ ಬಾಹಿರ ಶಿಕ್ಷಣ ವ್ಯವಸ್ಥೆಯ ಕುರಿತು ವಿಧಾನ ಸಭೆಯಲ್ಲಿ ಧ್ವನಿ ಎತ್ತಬೇಕಿದ್ದ ಶಾಸಕರು, ಅದರ ಬದಲಿಗೆ ಅಧಿವೇಶನ ತೊರೆದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯೊಂದರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು, ಮತೀಯ ಭಾವನೆ ಕೆರಳಿಸಲು ಪ್ರಕರಣವನ್ನು ಬಳಸುತ್ತಿರುವುದು ಖಂಡನೀಯ. ಇದರ ಹಿಂದೆ ಚುನಾವಣೆಯ ಸಿದ್ದತೆ ಇರುವುದು ಸ್ಪಷ್ಟ” ಎಂದರು.
ಜಿಲ್ಲಾಡಳಿತ, ಸರ್ಕಾರ ಇಂತಹ ಗೂಂಡಾಗಿರಿಯನ್ನು ಸಹಿಸಬಾರದು, ಕಾನೂನಿನ ಪಾಠ, ಜವಾಬ್ದಾರಿಯನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಬೇಕು, ಹಿಂಸೆಗೆ ಪ್ರಚೋದಿಸುವ, ಗೂಂಡಾಗಿರಿ ಮೆರೆದಿರುವ ಶಾಸಕ ವೇದವ್ಯಾಸ ಕಾಮತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸುವುದಾಗಿ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.