ಉದ್ಯೋಗಕ್ಕಾಗಿ ಹಣ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ 8 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಂಧನ ಹಾಗೂ ಅನಾರೋಗ್ಯದ ಹಿನ್ನೆಲೆ ತಮ್ಮ ಸಚಿವ ಸ್ಥಾನದ ಖಾತೆಗಳನ್ನು ಕಳೆದುಕೊಂಡಿರುವ ಬಾಲಾಜಿ ತಮ್ಮ ರಾಜೀನಾಮೆ ಆದೇಶದ ಅಂಗೀಕಾರಕ್ಕಾಗಿ ಕಾಯುತ್ತಿದ್ದಾರೆ.
ಮದ್ರಾಸ್ ಹೈಕೋರ್ಟ್ ಜಾಮೀನು ಅರ್ಜಿಯನ್ನು ಕಾಯ್ದಿರಿಸಿದ ಕೆಲವು ದಿನಗಳ ನಂತರದಲ್ಲಿ ಸಚಿವರು ರಾಜೀನಾಮೆ ನೀಡಿದ್ದಾರೆ. ಪರಿಹಾರ ಅರ್ಜಿಯು ನಿರರ್ಥಕವೆಂದು ಇತ್ತೀಚಿನ ವಾದಗಳಲ್ಲಿ ಸಾಬೀತಾಗಿತ್ತು.
ಈ ಹಿಂದಿನ ವಿಚಾರಣೆಯಲ್ಲಿ ಮದ್ರಾಸ್ ಹೈಕೋರ್ಟ್, 230ಕ್ಕೂ ಹೆಚ್ಚು ದಿನ ಜೈಲಿನಲ್ಲಿರುವ ಸೆಂಥಿಲ್ ಬಾಲಾಜಿ ಅವರು ಸಚಿವರಾಗಿ ಹೇಗೆ ಮುಂದುವರೆಯುತ್ತಾರೆ ಎಂಬುದನ್ನು ಪ್ರಶ್ನಿಸಿತ್ತು. ಕೋರ್ಟ್ ಸಚಿವ ಸ್ಥಾನದ ಮುಂದುವರಿಕೆಯನ್ನು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು
ಜಯಲಲಿತಾ ಮುಖ್ಯಮಂತ್ರಿಯಾಗಿದ್ದ 2011 ರಿಂದ 2015ರ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದ ಸೆಂಧಿಲ್ ಬಾಲಾಜಿ ಉದ್ಯೋಗಕ್ಕಾಗಿ ಹಣ ಹಗರಣದ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿದ್ದಾರೆ.
ಸೆಂಥಿಲ್ ಬಾಲಾಜಿ ಬಂಧನದ ಕ್ರಮವನ್ನು ಎತ್ತಿ ಹಿಡಿದಿದ್ದ ಮದ್ರಾಸ್ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಜಾರಿ ನಿರ್ದಾಶನಾಲಯಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಬಾಲಾಜಿ ಅವರು ಕಳೆದ ವರ್ಷ ಜೂನ್ 14ರಂದು ಬಂಧನವಾದ ನಂತರ ರಾಜ್ಯಪಾಲ ಆರ್‌ಎನ್ ರವಿ ಸಂಪುಟದಿಂದ ವಜಾ ಮಾಡಿದ್ದರು. ಕೆಲವು ದಿನಗಳ ನಂತರ ತಮ್ಮ ನಿರ್ಧಾರವನ್ನು ವಾಪಸ್ ತೆಗೆದುಕೊಂಡಿದ್ದರು.