ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು

Date:

ಮಾತು ತಪ್ಪಿದ ಮೋದಿಯವರ ವಿರುದ್ಧ ದೇಶದ ರೈತರು ಫೆ. 13ರಿಂದ ದೆಹಲಿ ಚಲೋಗೆ ಸಿದ್ಧರಾಗಿದ್ದಾರೆ. ರೈತ ಚಳವಳಿಗೆ ಹರಿಯಾಣ ಸರ್ಕಾರ ತಡೆಯೊಡ್ಡಲು ತಯಾರಾಗಿದೆ. ಅಂದರೆ, 2020ರಲ್ಲಿ ದೆಹಲಿ ಗಡಿಭಾಗದಲ್ಲಿ ಮೋದಿಯವರ ಸರ್ಕಾರ ಧರಣಿನಿರತ ಅನ್ನದಾತರನ್ನು ಹೇಗೆಲ್ಲ ಸದೆಬಡಿಯಲು ನೋಡಿತ್ತೋ, ಅದಕ್ಕೆ ಮತ್ತೊಮ್ಮೆ ಚಾಲನೆ ಕೊಟ್ಟಂತೆ ಕಾಣುತ್ತಿದೆ. ಮೋದಿಯವರಿಗೆ ಈಗ ಅನ್ನದಾತರ ಅಗತ್ಯವಿಲ್ಲವೇ? ಅಥವಾ ಭಾಷಣಕ್ಕೆ ಮಾತ್ರ ಸೀಮಿತವೇ?

ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳಿರುವಾಗ ದೆಹಲಿಯ ಗಡಿಭಾಗ ಮತ್ತೆ ರೈತ ಪ್ರತಿಭಟನೆಯ ಕಾವು ಏರಿಸಿಕೊಳ್ಳಲು ಸಜ್ಜಾಗುತ್ತಿದೆ. ಚುನಾವಣಾ ಸಮಯದಲ್ಲಿ ಸುಮಾರು 200 ರೈತ ಸಂಘಟನೆಗಳು ದೆಹಲಿಯತ್ತ ಪ್ರತಿಭಟನೆಗಾಗಿ ಸಾಗಲು ಸಿದ್ಧವಾಗುತ್ತಿವೆ.

ನಾಡಿನ ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಜನ್ಮದಿನವಾದ ಫೆ. 13ರಂದೇ ‘ದೆಹಲಿ ಚಲೋ’ ಆಯೋಜಿಸಲಾಗಿದೆ. ಫೆ. 16ರಿಂದ ‘ಗ್ರಾಮೀಣ ಭಾರತ್ ಬಂದ್‌’ಗಾಗಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಕೃಷಿ ವಲಯಕ್ಕೆ ನೀಡಿರುವ ಭರವಸೆಗಳನ್ನು ಈಡೇರಿಸದ ಮೋದಿಯವರ ಕೇಂದ್ರ ಸರ್ಕಾರದ ವಿರುದ್ಧ ಈ ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ.

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಸಾಲ ಮನ್ನಾ ಸಂಬಂಧಿಸಿ ಕೇಂದ್ರ ಸರ್ಕಾರ ನೀಡಿರುವ ಭರವಸೆಗಳನ್ನು ಈಡೇರಿಸದಿರುವ ವಿರುದ್ಧ ರೈತಸಂಘಟನೆಗಳು ಚಳವಳಿ ನಡೆಸಲಿವೆ. ಈ ಚಳವಳಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, 2020ರಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆ ಪುನರಾವರ್ತನೆಯಾಗುವ ಎಲ್ಲ ಸೂಚನೆಗಳು ಕಾಣುತ್ತಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜೂನ್‌ 2020ರಲ್ಲಿ ದೇಶ ಕೋವಿಡ್ ಕಷ್ಟಕ್ಕೆ ಸಿಕ್ಕು ದಿಕ್ಕೆಟ್ಟು ಕೂತಿದ್ದಾಗ, ಜನಪ್ರತಿನಿಧಿಗಳು ಮಾಸ್ಕ್ ಏರಿಸಿಕೊಂಡು ಮಾತನಾಡದಂತಹ ಸ್ಥಿತಿಯಲ್ಲಿದ್ದಾಗ, ಮೋದಿಯವರ ನೇತೃತ್ವದ ಎನ್‌ಡಿಎ ಸರಕಾರ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿಟ್ಟು ತರಾತುರಿಯಲ್ಲಿ ಪಾಸು ಮಾಡಿಕೊಂಡಿತ್ತು. ಸೆಪ್ಟೆಂಬರ್‌ನಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ದೇಶದ ರೈತರ ಬದುಕಿಗೆ ಬಿಸಿನೀರು ಸುರಿದಿತ್ತು.

2019ರ ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿದ್ದ ಬಿಜೆಪಿ, ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಅಹಂನಲ್ಲಿದ್ದ ಮೋದಿಯವರು, ತಮ್ಮ ಕಾರ್ಪೊರೇಟ್ ಗೆಳೆಯರಿಗೆ ಅನುಕೂಲ ಕಲ್ಪಿಸಲು, ಕೃಷಿ ಕಾಯ್ದೆಗಳ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕೊಡದೆ, ಪಾಸು ಮಾಡಿಕೊಂಡಿದ್ದರು. ಈ ಕರಾಳ ಕಾಯ್ದೆಗಳು ಜಾರಿಗೆ ಬಂದರೆ, ಕೃಷಿ ಕ್ಷೇತ್ರಕ್ಕೆ ಕತ್ತಲಾವರಿಸಿ, ರೈತ ಸಮೂಹ ಒಕ್ಕಲೆದ್ದುಹೋಗುವುದು ನಿಶ್ಚಿತ ಎಂದರಿತ ಪಂಜಾಬ್ ರೈತರು ಮೊದಲಿಗೆ ಕೇಂದ್ರ ಸರಕಾರದ ವಿರುದ್ಧ ಹೋರಾಟಕ್ಕಿಳಿದರು. ಅಕ್ಟೋಬರ್ 25, 2020ರಂದು ‘ಪಂಜಾಬ್ ಬಂದ್’ಗೆ ಕರೆ ಕೊಟ್ಟರು.

ಒಡೆದು ಚೂರಾಗಿ ಹೋಗಿದ್ದ ರೈತ ಸಂಘಟನೆಗಳು ಒಂದಾದವು. ಪಕ್ಷಭೇದ ಮರೆತು ರಾಜಕೀಯ ಪಕ್ಷಗಳು ಬೆಂಬಲಿಸಿದವು. ಕ್ರೀಡಾಪಟುಗಳು, ಕಲಾವಿದರು, ಸಾಹಿತಿಗಳು, ಬುದ್ಧಿಜೀವಿಗಳು, ಪತ್ರಕರ್ತರು, ಅನಿವಾಸಿ ಭಾರತೀಯರು, ಸಾಮಾನ್ಯರು ರೈತರ ಪರ ನಿಂತರು. ಧಾರ್ಮಿಕ ಗುರುಗಳು ಕೈಜೋಡಿಸಿದರು. ‘ಪಂಜಾಬ್‌ ಬಂದ್‌’ ಯಶಸ್ವಿಯಾಯಿತು. ಇದು ಕೃಷಿಯ ಅಸ್ತಿತ್ವವನ್ನೇ ಅಲ್ಲಾಡಿಸಲು ಹವಣಿಸಿದ ಮೋದಿಯವರ ಮುಂದಾಳತ್ವದ ಕೇಂದ್ರ ಸರಕಾರಕ್ಕೆ ಎದುರಾದ ದೇಶದ ಮೊದಲ ಪ್ರತಿರೋಧ.

ಈ ಪ್ರತಿರೋಧಕ್ಕೆ ಅಂದಿನ ಹರಿಯಾಣದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌, ಹೆದ್ದಾರಿಗೆ ಪೊಲೀಸರನ್ನು ನಿಯೋಜಿಸಿ ಬ್ಯಾರಿಕೇಡ್‌ ಹಾಕಿಸಿ, ರಸ್ತೆಗೆ ಗುಂಡಿ ತೋಡಿಸಿ, ರೈತರತ್ತ ರಬ್ಬರ್‌ ಬುಲೆಟ್‌ ಹಾರಿಸಿ, ಜಲಫಿರಂಗಿ ಮಾಡಿಸಿ ದಿಕ್ಕೆಡಿಸಲು ನೋಡಿದರು. ಮೋದಿ ಪ್ರಣೀತ ಗೋದಿ ಮೀಡಿಯಾದ ಪತ್ರಕರ್ತರು ರೈತರನ್ನು ಭಯೋತ್ಪಾದಕರು, ನಗರ ನಕ್ಸಲರು ಎಂದು ಬಿಂಬಿಸಲು ಹವಣಿಸಿದರು.

ಕೊನೆಗೆ 700ಕ್ಕೂ ಹೆಚ್ಚು ರೈತರ ಬಲಿದಾನ, ಒಂದು ವರ್ಷ ನಿರಂತರವಾಗಿ ನಡೆದ ರೈತ ಹೋರಾಟಕ್ಕೆ ಮಣಿದ ಮೋದಿಯವರ ಕೇಂದ್ರ ಸರಕಾರ ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿತು. ಅಷ್ಟೇ ಅಲ್ಲ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಸಾಲ ಮನ್ನಾ ಮಾಡುವುದಾಗಿ ದೇಶದ ರೈತರಿಗೆ ಭರವಸೆ ನೀಡಿತು.

ಪ್ರಧಾನಿ ಮೋದಿಯವರು ರೈತರಿಗೆ ಈ ಭರವಸೆ ನೀಡಿ ಇಂದಿಗೆ ಮೂರು ವರ್ಷಗಳು ಕಳೆದುಹೋಗಿವೆ. ಬಾಯಿ ಬಿಟ್ಟರೆ ಸಬ್ ಕ ಸಾಥ್… ಎಂದು ಭಾಷಣ ಬಿಗಿಯುವ ಮೋದಿಯವರು, ದೇಶದ ಅನ್ನದಾತರ ವಿಕಾಸ್ ಬಗ್ಗೆ ಬಾಯಿ ಬಿಡಲಿಲ್ಲ. ಆದರೆ, ಆರೆಸೆಸ್‌ ಅಜೆಂಡಾವನ್ನು ಜಾರಿಗೆ ತರುವಲ್ಲಿ ಮತ್ತು ಬಿಜೆಪಿಯವರಿಗೆ ಬೇಕಾಗಿದ್ದ ಆರ್ಟಿಕಲ್‌ 370, ತ್ರಿವಳಿ ತಲಾಕ್‌ ಕಾನೂನನ್ನು ಜಾರಿಗೊಳಿಸುವಲ್ಲಿ ಅತಿ ಉತ್ಸಾಹ ತೋರಿದರು. ರಾಮ ಮಂದಿರವನ್ನೂ ನಿರ್ಮಾಣ ಮಾಡಿದರು. ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ ಎಂದು ದೂರುತ್ತಲೇ; ಕೋಮು ವಿಷಬೀಜ ಬಿತ್ತುತ್ತಲೇ; ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುವುದರೊಳಗೆ ಸಿಎಎ ಮತ್ತು ಯುಸಿಸಿ ಜಾರಿ ಮಾಡಲು ಹವಣಿಸುತ್ತಿದ್ದಾರೆ. ಅಂದರೆ, ಅವರಿಗೆ ಬೇಕಾಗಿದ್ದು, ಚುನಾವಣೆ ಗೆದ್ದು ಅಧಿಕಾರ ಹಿಡಿಯಲು ಅನುಕೂಲವಾಗುವಂಥದ್ದು ಯಾವ ಅಡೆತಡೆ ಇಲ್ಲದೆ ಜಾರಿಯಾಗುತ್ತದೆ.

ಆದರೆ ದೇಶದ ಕೃಷಿ ಕ್ಷೇತ್ರ ಕಾಪಾಡುವ ಕಾಯ್ದೆ, ರೈತರಿಗೆ ನೀಡಿದ ಭರವಸೆ ಮಾತ್ರ ಭರವಸೆಯಾಗಿಯೇ ಉಳಿಯುತ್ತದೆ. ಮಾತು ತಪ್ಪಿದ ಮೋದಿಯವರಿಗೆ ತಮ್ಮ ಮಾತನ್ನು ನೆನಪಿಸಲು ರೈತರು ಮತ್ತೊಮ್ಮೆ ದೆಹಲಿ ಚಲೋಗೆ ಸಿದ್ಧರಾಗಿದ್ದಾರೆ. ಯಥಾಪ್ರಕಾರ ಬಿಜೆಪಿ ಸರ್ಕಾರ ರೈತರ ನ್ಯಾಯಯುತ ಪ್ರತಿಭಟನೆಗೆ ಸರ್ಕಾರಿ ಯಂತ್ರವನ್ನು ಬಳಸಿ ತಡೆಯೊಡ್ಡಲು ತಯಾರಾಗಿದೆ. ಹರಿಯಾಣದಲ್ಲಿ ತಕ್ಷಣಕ್ಕೆ ಜಾರಿಗೆ ಬರುವಂತೆ ನಡಿಗೆ ಅಥವಾ ಟ್ರಾಕ್ಟರ್‌ಗಳ ಮೂಲಕ ನಡೆಯುವ ಮೆರವಣಿಗೆ ಹಾಗೂ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಫೆ.13ರವರೆಗೆ ಗಡಿ ಪ್ರದೇಶದ ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. 50 ತುಕಡಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಪಂಚ್‌ಕುಲಾ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ದೆಹಲಿಯ ಗಡಿ ಪ್ರದೇಶಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಅಂದರೆ, 2020ರಲ್ಲಿ ದೆಹಲಿ ಗಡಿಭಾಗದಲ್ಲಿ ಮೋದಿಯವರ ಸರ್ಕಾರ ದೇಶದ ಧರಣಿನಿರತ ರೈತರಿಗೆ ಏನೆಲ್ಲ ಕಿರುಕುಳ ಕೊಟ್ಟಿತ್ತೋ, ಅದಕ್ಕೆ ಮತ್ತೊಮ್ಮೆ ಚಾಲನೆ ಕೊಟ್ಟಂತೆ ಕಾಣುತ್ತಿದೆ. ಪ್ರಧಾನಿ ಮೋದಿಯವರಿಗೆ ದೇಶದ ಕೃಷಿ ಕ್ಷೇತ್ರ ಅಭಿವೃದ್ಧಿ ಹೊಂದುವುದು ಬೇಕಿಲ್ಲವೇ? ಈಗ ಅನ್ನದಾತರ ಅಗತ್ಯವಿಲ್ಲವೇ? ಅಥವಾ ಭಾಷಣಕ್ಕೆ ಮಾತ್ರ ಸೀಮಿತವೇ?

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ವಿಪಕ್ಷ ನಾಯಕ ಅಶೋಕ್ ಮತ್ತು ಸಾರ್ವಜನಿಕ ಸಭ್ಯತೆ

ವಿರೋಧ ಪಕ್ಷದ ನಾಯಕರಾದವರಿಗೆ ಬಹಳ ಮುಖ್ಯವಾಗಿ ಸಾರ್ವಜನಿಕ ಸಭ್ಯತೆ ಇರಬೇಕು. ವಿಪಕ್ಷ...

ಈ ದಿನ ಸಂಪಾದಕೀಯ | ರೈತರ ವಿರುದ್ಧ ʼರಾಷ್ಟ್ರೀಯ ಭದ್ರತಾ ಕಾಯ್ದೆʼ ಅಸ್ತ್ರ ಪ್ರಯೋಗ; ಪ್ರಜಾಪ್ರಭುತ್ವದ ಅಣಕ

ಈಗಾಗಲೇ ಮೋದಿಯವರ ಮಾತು ನಂಬಿ ಅದಾನಿ ಕಂಪನಿ ದೇಶದೆಲ್ಲೆಡೆ ಗೋದಾಮುಗಳನ್ನು ನಿರ್ಮಾಣ...

ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?

ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಣದುಬ್ಬರದಿಂದ...

ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ

ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್- ಯಾವ ಪಕ್ಷವಾದರೂ, ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ...