ದೆಹಲಿ ಚಲೋ ಪ್ರತಿಭಟನೆ ಕರ್ನಾಟಕದಿಂದ ತೆರಳುತ್ತಿದ್ದ ರೈತರನ್ನು ಮಧ್ಯಪ್ರದೇಶದ ಭೋಪಾಲ್ ರೈಲು ನಿಲ್ದಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ರೈತರನ್ನು ಬಂಧಿಸಿರುವ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಫೆಬ್ರವರಿ 13ರಂದು ದೆಹಲಿ ಚಲೋಗೆ ರೈತ ಸಂಘಟನೆಗಳು ಕರೆಕೊಟ್ಟಿವೆ. ಆ ಪ್ರತಿಭಟನೆಯಲ್ಲಿ ಭಾಗಿಯಾಗಲು ಹುಬ್ಬಳ್ಳಿಯ ರೈತರು ಭಾನುವಾರ ರಾತ್ರಿ ದೆಹಲಿಗೆ ಹೊರಟ್ಟಿದ್ದರು. ಅವರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, “ರೈತರ ಹೋರಾಟವನ್ನು ಬಂಧನ ಮತ್ತು ಬೆದರಿಕೆಗಳ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ” ಎಂದಿದ್ದಾರೆ.
“ಬಂಧಿತರಾಗಿರುವ ನಮ್ಮ ರಾಜ್ಯದ ಎಲ್ಲ ರೈತರನ್ನು ಮಧ್ಯಪ್ರದೇಶ ಸರ್ಕಾರ ತಕ್ಷಣವೇ ಬಿಡುಗಡೆ ಮಾಡಬೇಕು. ದೆಹಲಿಯಲ್ಲಿ (ಮಂಗಳವಾರ) ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲು ಅವರಿಗೆ ಅವಕಾಶ ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ” ಎಂದು ಹೇಳಿದ್ದಾರೆ.
“ಮಧ್ಯಪ್ರದೇಶ ಸರ್ಕಾರವೇ ಬಂಧಿಸಿದ್ದರೂ, ಈ ಕ್ರಮದ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವಿದೆ. ರೈತರನ್ನು ಬಂಧಿಸಿ ಬೆದರಿಸುವ ಮೂಲಕ ಅವರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇಂತಹ ದಬ್ಬಾಳಿಕೆಯಿಂದ ರೈತರು ಇನ್ನಷ್ಟು ಬೀದಿ ಪಾಲಾಗಬಹುದು. ಕೇಂದ್ರಕ್ಕೆ ನಿಜವಾಗಿಯೂ ಶಾಂತಿ ಮತ್ತು ಸುವ್ಯವಸ್ಥೆಯ ಬಗ್ಗೆ ಕಾಳಜಿ ಇದ್ದರೆ, ರೈತರನ್ನು ದಬ್ಬಾಳಿಕೆ ಮತ್ತು ಕ್ರೂರವಾಗಿ ಮೌನವಾಗಿಸುವ ಬದಲು, ತಕ್ಷಣವೇ ರೈತರ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆಯನ್ನು ಪರಿಹರಿಸಬೇಕು” ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ದೆಹಲಿಯಲ್ಲಿ ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಹುಬ್ಬಳ್ಳಿಯ ರೈತರನ್ನು ಭೋಪಾಲ್ ನಲ್ಲಿ ಬಂಧಿಸಿರುವ ಮಧ್ಯಪ್ರದೇಶ ಸರ್ಕಾರದ ಕ್ರಮ ಅತ್ಯಂತ ಖಂಡನೀಯ.
ಬಂಧಿಸಲಾದ ರಾಜ್ಯದ ನಮ್ಮ ಎಲ್ಲ ರೈತರನ್ನು ತಕ್ಷಣ ಬಿಡುಗಡೆಗೊಳಿಸಿ ನಾಳೆ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಿಕೊಳ್ಳಲು…
— Siddaramaiah (@siddaramaiah) February 12, 2024
“ಕೇಂದ್ರದಲ್ಲಾಗಲಿ, ರಾಜ್ಯಗಳಲ್ಲಾಗಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅವರ ಮೊದಲ ಆಕ್ರಮಣ ರೈತರ ವಿರುದ್ಧ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದ್ದ ಬಿ.ಎಸ್ ಯುಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಗೊಬ್ಬರ ಕೇಳಿದ್ದ ರೈತರನ್ನು ನಿರ್ದಯವಾಗಿ ಗುಂಡಿಕ್ಕಿ ಕೊಂದಿತ್ತು. ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ದೆಹಲಿ ಮತ್ತು ಉತ್ತರಪ್ರದೇಶಲ್ಲಿ ಪ್ರತಿಭಟನಾನಿರತ ರೈತರ ಮೇಲೆ ನಡೆಸಿದ್ದ ದೌರ್ಜನ್ಯದಲ್ಲಿ ಹಲವಾರು ರೈತರು ಸಾವಿಗೀಡಾಗಿದ್ದರು. ನರೇಂದ್ರ ಮೋದಿ ಅವರ ಸರ್ಕಾರದ ಈಗಿನ ಕ್ರಮಗಳನ್ನು ನೋಡಿದರೆ ರೈತರನ್ನು ಬೆದರಿಸಿ ತಲೆ ಎತ್ತದಂತೆ ಮಾಡುವುದೇ ಮುಖ್ಯ ಉದ್ದೇಶವಿದ್ದಂತೆ ಕಾಣುತ್ತಿದೆ” ಎಂದಿದ್ದಾರೆ.