ಕೇಂದ್ರದ ಒಬಿಸಿ ಸೌಲಭ್ಯಕ್ಕೆ ಲಿಂಗಾಯತರಿಗೆ ಶಿಫಾರಸು ಮಾಡಬೇಕು ಮತ್ತು ಹಿಂದಿನ ಸರ್ಕಾರ ನೀಡಿದ್ದ 2’ಡಿ’ ಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಫೆಬ್ರವರಿ 14 ರಂದು ಬೆಳಿಗ್ಗೆ 10ಕ್ಕೆ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಶೋಕ ಗೋಪನಾಳ್ ತಿಳಿಸಿದರು.
ದಾವಣಗೆರೆ ನಗರದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, “ಸರ್ಕಾರ ಹಿಂದೆ ನೀಡಿದ್ದ ಮೀಸಲಾತಿ ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದು, ಕೂಡಲೇ ಜಾರಿಗೆ ಘೋಷಿಸಬೇಕು. ಕೇಂದ್ರ ಸರ್ಕಾರಕ್ಕೆ 2ಡಿ ಮೀಸಲಾತಿ ಕಲ್ಪಿಸುವಂತೆ ಶಿಫಾರಸು ಮಾಡಬೇಕು” ಎಂದು ಆಗ್ರಹಿಸಿರು.
“ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ 2D ಮೀಸಲಾತಿ ಕಲ್ಪಿಸುವಂತೆ ನಡೆಯುವ ಪ್ರತಿಭಟನೆಯಲ್ಲಿ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ಎಚ್ ಎಸ್ ಶಿವಶಂಕರ್, ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ ಜಿ ಅಜಯಕುಮಾರ್ ಸೇರಿದಂತೆ ಇತರ ಗಣ್ಯರು ಭಾಗವಹಿಸುವರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸಿಗ್ನಲ್ ಲೈಟ್ ಅಳವಡಿಸುವಂತೆ ಎಎಪಿ ಆಗ್ರಹ
“ದಾವಣಗೆರೆ ಜಿಲ್ಲೆಯ ಮತ್ತು ರಾಜ್ಯದ ಸಮಸ್ತ ಪಂಚಮಸಾಲಿ ಸಮಾಜದ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಕೋರಿದರು.