ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ನಾಯಕರ ವಿರುದ್ಧ ನಾಲಿಗೆ ಹರಿಬಿಟ್ಟು, ಅವಹೇಳನ ಹೇಳಿಕೆ ನೀಡುವ ಮೂಲಕ, ಅವಮಾನಿಸಿದ್ದಾರೆ, ಅವರ ವಿರುದ್ಧ ಈಗಾಗಲೇ ದೂರು ನೀಡಿದ್ದು, ಹಿಂದೂ ಜಾಗರಣದ ವೇದಿಕೆ ಮುಖಂಡ ಟಿಪ್ಪುವಿನ ಖಡ್ಗ ಮುಂದಿಟ್ಟುಕೊಂಡು ಸಮಾಜ ಒಡೆಯುತ್ತಿದ್ದೀರಿ ಎಂದು ಕೋಮುಭಾವನೆ ಕೆರಳಿಸುವ ಹೇಳಿಕೆ ನೀಡಿದ್ದ ಅವರ ವಿರುದ್ಧ ಪಶ್ಚಿಮ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ ವಸಂತ ಕುಮಾರ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರು ನಾಲಿಗೆ ಹರಿಬಿಟ್ಟು, ʼಪ್ರಿಯಾಂಕ್ ಖರ್ಗೆ ಅವರು ಕೆಟ್ಟ ಹುಳು, ಮಲ್ಲಿಕಾರ್ಜುನ ಖರ್ಗೆ ಅವರ ಹೊಟ್ಟೆಯಲ್ಲಿ ಕೆಟ್ಟ ಹುಳು ಹುಟ್ಟಿದೆʼ ಎಂದು ಬುದ್ದಿ ಹೀನರಾಗಿ ಮಾತನಾಡಿದ್ದು, ಸುಸಂಸ್ಕೃತ ಪದ ಬಳಕೆ ಮಾಡಿದ್ದಾರೆ. ಡಿ ಕೆ ಸುರೇಶ್ ಅವರನ್ನು ಗುಂಡಿಕ್ಕಿ ಹೊಡೆಯಬೇಕೆಂಬ ಹೇಳಿಕೆ ನೀಡಿದ್ದು, ಸಮಾಜದ ಮೇಲೆ ಮತ್ತು ಜಾತಿ ಧರ್ಮದ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ಮಾತನಾಡಿದ್ದಾರೆ” ಎಂದು ದೂರಿದರು.
“ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕಿದೆ ಎಂದು ಹೇಳಿ, ತಮಗೆ ಬೇಕಾದ ಹೇಳಿಕೆ ನೀಡುತ್ತಾ ಸಮಾಜದಲ್ಲಿ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸುವಂತೆ ಮಾತನಾಡಿ, ಕೆಳ ಮಟ್ಟದ ರಾಜಕಾರಣ ಮಾಡುತ್ತಿರುವುದು ಶೋಭೆಯಲ್ಲ. ಹಿಂದಿನಿಂದಲೂ ಹೀಗೆ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಇವರ ವರ್ತನೆ, ನಡವಳಿಕೆ ಕುರಿತು ಅವರ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ಅವರು, ಅವರ ಬಗ್ಗೆ ನಾಲಿಗೆ ಮತ್ತು ಮೆದುಳಿಗೆ ಲಿಂಕ್ ಇಲ್ಲವೆಂದು ಹೇಳಿದ್ದಾರೆ, ಸಿಎಂ ಸಿದ್ದರಾಮಯ್ಯ ಅವರೂ ಸಹ ಈಶ್ವರಪ್ಪ ಬಗ್ಗೆ ಹೇಳಿದ್ದು, ʼಇಲ್ಲಸಲ್ಲದ ಹೇಳಿಕೆ ನೀಡುವುದು ಈಶ್ವರಪ್ಪನ ಜಾಯಮಾನ, ಈಶ್ವರಪ್ಪ ಒಬ್ಬ ಪೆದ್ದʼ ಎಂದು ಹೇಳಿದ್ದಾರೆ” ಎಂದರು.
“ಒಬ್ಬ ಜವಾಬ್ದಾರಿಯುತ ರಾಜಕಾರಣಿಯಾಗಿ ಇಂತಹ ಹೇಳಿಕೆ ನೀಡಿರುವುದನ್ನು ಖಂಡನೀಯ. ಈಶ್ವರಪ್ಪಗಿಂತಲೂ 10 ಪಟ್ಟು ಪ್ರಿಯಾಂಕ್ ಖರ್ಗೆಗೆ ಬುದ್ಧಿಶಕ್ತಿ ಇದೆ. ಸಮರ್ಥ ರಾಜಕಾರಣಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸುಖಾ ಸುಮ್ಮನೆ ಹಿಯಾಳಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಅವರ ವಿರುದ್ಧ ದೂರು ನೀಡಲಾಗಿದೆ” ಎಂದು ತಿಳಿಸಿದರು.
“ಹಿಂದೂ ಜಾಗರಣ ವೇದಿಕೆ ಮುಖಂಡ ರಾಯಚೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, “ಟಿಪ್ಪುವಿನ ಖಡ್ಗ ಮುಂದಿಟ್ಟುಕೊಂಡು ಸಮಾಜ ಹೊಡೆಯುತ್ತಿದ್ದೀರಿ ಎಂದು ಹೇಳಿಕೆ ನೀಡಿ ಕೋಮುಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಲ್ಲದೆ, ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಿದ್ದೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಸಿಬ್ಬಂದಿ
“ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಅವರ ವಿರುದ್ಧ ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಬಸವರಾಜ ಪಾಟಿಲ್ ದರೂರು, ಕಾಂಗ್ರೆಸ್ ಮುಖಂಡರುಗಳಾದ ಡಾ. ರಜಾಕ್ ಉಸ್ತಾದ್, ಈಶಪ್ಪ, ಎಂ ಕೆ ಬಾಬರ್, ಅಬ್ದುಲ್ ಕರೀಂ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ