ರಾಜಸ್ಥಾನದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ‘ಸೂರ್ಯ ನಮಸ್ಕಾರ’ವನ್ನು ಕಡ್ಡಾಯಗೊಳಿಸಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ. ಇದು ಆ ರಾಜ್ಯದಲ್ಲಿ ಭಾರೀ ಗದ್ದಲ-ವಿರೋಧಕ್ಕೆ ಕಾರಣವಾಗಿದೆ. ಹಲವಾರು ಮುಸ್ಲಿಂ ಸಂಘಟನೆಗಳು ಈ ಕ್ರಮದ ವಿರುದ್ಧ ಪ್ರತಿಭಟಿಸಿವೆ. ತಮ್ಮ ಮಕ್ಕಳಿಗೆ ಸೂರ್ಯ ನಮಸ್ಕಾರ ಮಾಡುವಂತೆ ಒತ್ತಾಯಿಸುವ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿವೆ.
ಭಜನ್‌ಲಾಲ್ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ, ಫೆಬ್ರವರಿ 15ರಂದು ರಾಜಸ್ಥಾನದ ಎಲ್ಲ ಶಾಲೆಗಳಲ್ಲಿ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿದೆ. ಆದೇಶವನ್ನು ಅನುಸರಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.
ಸರ್ಕಾರದ ನಿರ್ಧಾರಕ್ಕೆ ಮುಸ್ಲಿಂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸೂರ್ಯ ನಮಸ್ಕಾರವು ಮಂತ್ರಗಳ ಪಠಣದೊಂದಿಗೆ ಸೂರ್ಯನನ್ನು ಆರಾಧಿಸುವ ಹಲವಾರು ಯೋಗ ಭಂಗಿಗಳನ್ನು ಒಳಗೊಂಡಿರುತ್ತದೆ. ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಸೂರ್ಯನನ್ನು ದೇವರೆಂದು ಒಪ್ಪಿಕೊಂಡಂತಾಗುತ್ತದೆ ಎಂದು ಮುಸ್ಲಿಂ ಸಂಘಟನೆಗಳು ವಿರೋಧಿಸಿವೆ. ನಮ್ಮ ಧರ್ಮದಲ್ಲಿ ಸೂರ್ಯನನ್ನು ದೇವರೆಂದು ಕಾಣುವುದಿಲ್ಲ ಎಂದು ಹೇಳಿವೆ.
ರಾಜ್ಯದಲ್ಲಿ ನೂತನ ಬಿಜೆಪಿ ಸರ್ಕಾರವು ಫೆಬ್ರವರಿ 15ರ ಸೂರ್ಯ ಸಪ್ತಮಿಯಂದು ಯೋಜಿಸಿರುವ ಸೂರ್ಯ ನಮಸ್ಕಾರ ಆಚರಣೆಯಲ್ಲಿ ಭಾಗವಹಿಸದಂತೆ ಮುಸ್ಲಿಂ ಸಂಘಟನೆಗಳು ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಸೂಚಿಸಿವೆ.