ಬಾಕಿ ತೆರಿಗೆ ಪಾವತಿಸದ ಕಾರಣ ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಒಡೆತನದ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿರುವ ರಾಕ್‌ಲೈನ್ ಮಾಲ್‌ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬೀಗ ಜಡಿದಿದ್ದಾರೆ.
ದಾಸರಹಳ್ಳಿ ವಲಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರಾಕ್ ಲೈನ್ ಮಾಲ್ ಅನ್ನು ಸೀಜ್ ಮಾಡಲಾಗಿದೆ.
ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ರಾಕ್‌ಲೈನ್ ಮಾಲ್ ಬಾಕಿ ತೆರಿಗೆ ಪಾವತಿಸದ ಕಾರಣ ಫೆಬ್ರುವರಿ 14ರಂದು ಪಾಲಿಕೆ ಕಂದಾಯ ಅಧಿಕಾರಿಗಳು ರಾಕ್‌ಲೈನ್ ಮಾಲ್ ಅನ್ನು ಸೀಜ್ ಮಾಡಿದ್ದಾರೆ.
2011 ರಿಂದ 2022-23 ರವರೆಗೆ ರಾಕ್ ಲೈನ್ ಮಾಲ್‌ನಿಂದ ತೆರಿಗೆ ಬಾಕಿ ಉಳಿಸಿದಿದೆ. ಬರೋಬ್ಬರಿ ₹11.51 ಕೋಟಿ ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿದೆ. ಬಾಕಿ ತೆರಿಗೆ ಪಾವತಿಸಲು ಈಗಾಗಲೇ ನೋಟಿಸ್ ನೀಡಿದ್ದರೂ ತೆರಿಗೆಯನ್ನು ಪಾವತಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ವಲಯ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತ ಬಾಲಶೇಖರ್, ದಾಸರಹಳ್ಳಿ ವಲಯ ಅಧಿಕಾರಿ, ಕಂದಾಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಮಾರ್ಷಲ್‌ಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಅಯೋಧ್ಯೆಗೆ ಮೆಮು ರೈಲು ರವಾನೆ; ಕೋಲಾರ ಜನರ ಪರದಾಟ
ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಎನ್.ಆರ್.ರಮೇಶ್ ಅವರು, ”ರಾಕ್‌ಲೈನ್ ವೆಂಕಟೇಶ್ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಯ ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿರುವ ರಾಕ್‌ಲೈನ್ ಮಾಲ್ ಕೇವಲ 48,500 ಚದರ ಅಡಿ ವಿಸ್ತೀರ್ಣ ಇದೆ ಎಂದು ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಮಾಲ್ ಆರು ಮಹಡಿ ಸೇರಿದಂತೆ ಒಟ್ಟಾರೆ, 1,22,743 ಚದರ ಅಡಿ ವಿಸ್ತಾರದಲ್ಲಿದೆ. 2021ರಲ್ಲಿ ಬಿಬಿಎಂಪಿಗೆ ₹8.5 ಕೋಟಿಗೂ ಅಧಿಕ ಮೊತ್ತದ ತೆರಿಗೆ ವಂಚಿಸಿದ್ದಾರೆ” ಎಂದು ಆರೋಪ ಮಾಡಿದ್ದರು.