ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿರುವುದರಿಂದ ನಮಗೆ ಮೂಲಭೂತ ಹಕ್ಕುಗಳನ್ನು ಒದಗಿಸಲಾಗಿದೆ. ಸಂವಿಧಾನದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಆಗಿದೆ ಎಂದು ಎದ್ದೇಳು ಕರ್ನಾಟಕದ ವಿಜಯಪುರ ಜಿಲ್ಲಾ ಸಂಯೋಜಕ ಅಬ್ದುಲ್ ಖದೀರ್ ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ನಗರದ ಜೆ ಸಿ ಸ್ಕೂಲ್ ಹತ್ತಿರವಿರುವ ಸೇವಾ ಸದನ ಸೇವಾ ಅಭಿವೃದ್ಧಿ ಸಂಸ್ಥೆಯಲ್ಲಿ ಎದ್ದೇಳು ಕರ್ನಾಟಕದಿಂದ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಸಮಾಲೋಚನಾ ಸಭೆಯಲ್ಲಿ ಸಂವಿಧಾನ, ಸಹಬಾಳ್ವೆ, ಭಾತೃತ್ವ, ಪ್ರಜಾಪ್ರಭುತ್ವದ ವ್ಯವಸ್ಥೆಯ ಕುರಿತ ಚರ್ಚೆಯಲ್ಲಿ ಮಾತನಾಡಿದರು.
“ಜನರಿಂದ ಜನರಿಗಾಗಿ ಜನರಿಗೋಸ್ಕರವೇ ಇರುವ ವ್ಯವಸ್ಥೆಯೇ ಪ್ರಜಾಪ್ರಭುತ್ವ ವ್ಯವಸ್ಥೆ. ಪ್ರಸ್ತುತ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಚ್ಯುತಿ ತರುವಂತಹ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ” ಎಂದು ಆರೋಪಿಸಿದರು.
“ಕೇಂದ್ರ ಸರ್ಕಾರವು ರೈತರ ಐತಿಹಾಸಿಕ ಹೋರಾಟಕ್ಕೆ ಮಣಿದು ಕಾಯ್ದೆಗಳನ್ನು ಹಿಂಪಡೆಯುತ್ತೇವೆಂಬ ಘೋಷಣೆಗೆ ಮಾತ್ರ ಸೀಮಿತವಾಗಿಸಿದೆ. ದೇಶದ ರೈತರು ಮತ್ತೆ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ತಡೆಗೋಡೆ ನಿರ್ಮಾಣ, ಸೇನಾಪಡೆ ಮುಖಾಂತರ ರೈತರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ” ಎಂದು ಹೇಳಿದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ದೇಶದ್ರೋಹದ ಪಟ್ಟ ಕಟ್ಟಿದ್ದಾರೆ. ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ನಮ್ಮ ದೇಶದಲ್ಲಿ ಬುದ್ಧ ಬಸವ ಅಂಬೇಡ್ಕರ್ ವಿಚಾರಗಳು ಅಲ್ಲದೆ, ಇನ್ನೂ ಅನೇಕ ವಿಚಾರಗಳು ಜಾರಿಯಲ್ಲಿವೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಮನುವಾದದ ವಿಚಾರಗಳು ಶಿಕ್ಷಣ ಕ್ಷೇತ್ರಕ್ಕೆ ವ್ಯಾಪಿಸಿಕೊಂಡಿವೆ. ಇದು ಅತ್ಯಂತ ಅಪಾಯಕಾರಿ” ಎಂದು ಕಳವಳ ವ್ಯಕ್ತಪಡಿಸಿದರು.
“ಎದ್ದೇಳು ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿ ಕೆಲಸ ಮಾಡುತ್ತಿದ್ದು, ಸಂವಿಧಾನದ ವಿರುದ್ಧ ಇರುವವರ ಕುರಿತು ಜಾಗೃತಿಗೊಳಿಸುತ್ತಿದೆ. ಮುದ್ದೇಬಿಹಾಳ ತಾಲೂಕಿನ ಎಲ್ಲ ಪ್ರಜ್ಞಾವಂತ ಜನರು ಬರುವ ಚುನಾವಣೆಯಲ್ಲಿ ಆಳುವ ಪಕ್ಷಗಳಿಗೆ ಸರಿಯಾದ ಪಾಠ ಕಲಿಸಬೇಕು” ಎಂದು ಜನಗಳಿಗೆ ಸಲಹೆ ನೀಡಿದರು.
ಅರವಿಂದ ಕೊಪ್ಪ ಮಾತನಾಡಿ, “ಪ್ರಸ್ತುತದ ಯುವಜನರಿಗೆ 75 ವರ್ಷದ ಇತಿಹಾಸದ ಬಗ್ಗೆ ತಿಳಿಸಬೇಕಾದ ಅವಶ್ಯಕತೆ ಇದೆ. ಹಿರಿಯ ನಾಯಕರುಗಳು ಹೇಗೆ ಕಷ್ಟಪಟ್ಟರು. ನಮ್ಮ ದೇಶಕ್ಕೆ ಯಾವ ರೀತಿ ಸ್ವಾತಂತ್ರ್ಯ ಬಂತು, ಉಳುವವನೇ ಭೂ ಒಡೆಯ ಮುಂತಾದವುಗಳ ಐತಿಹಾಸಿಕ ಘಟನೆಗಳನ್ನು ಇವತ್ತಿನ ಯುವಜನರಿಗೆ ತಿಳಿಸಬೇಕಾದ ಅನಿವಾರ್ಯತೆ ಇದೆ” ಎಂದರು.
ಹಿಂದಿನ ಹೋರಾಟಗಳ ಕುರಿತು ಯುಜನರು ತಿಳಿಯದೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಮತ್ತು ಸರ್ಕಾರ ಅದಕ್ಕೆ ಮನ್ನಣೆ ನೀಡುವುದು ವಿಷಾದನೀಯ ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಸೌಹಾರ್ದತೆ ಮೆರೆದ ಬಳಗಾನೂರ ಗ್ರಾಮದ ಮುಸ್ಲಿಂ ಬಾಂಧವರು
ಸಿಸ್ಟರ್ ಬೀನಾ ಮಾತನಾಡಿ, “ನಮ್ಮ ಸಂಸ್ಥೆಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸ್ವಸಹಾಯ ಗುಂಪುಗಳನ್ನು ಮಾಡಿ ಅವರಿಗೆ ಸಾಲ ಕೊಟ್ಟು ಆರ್ಥಿಕವಾಗಿ ಉತ್ತೇಜನ ಕೊಟ್ಟು ಮುನ್ನಲಿಗೆ ಬರಬೇಕೆಂದು ನಾವೂ ಕೂಡ ನಮ್ಮ ಸಂಸ್ಥೆಯಿಂದ ಪ್ರಯತ್ನ ಮಾಡುತ್ತಿದ್ದೇವೆ” ಎಂದರು.
ಸಂದರ್ಭದಲ್ಲಿ ವಕೀಲ ಕೆ ಬಿ ದೊಡ್ಡಮನಿ, ಎಂ ಡಿ ಜರಕತ್ಜಮಾತ್ ಸ್ಟಾನಿಕ, ಪ್ರಗತಿಪರ ರೈತ ಸಂಘಟನೆ ಮುಖಂಡರು, ಮಹಿಳಾ ಸಂಘದ ಪ್ರತಿನಿಧಿಗಳು ಹಾಗೂ ಸೇವಾ ಸದನ ಸಂಸ್ಥೆಯ ಸಿಸ್ಟರ್ ಶೋಭಾ, ಗ್ಲೋರಿಯಾ, ಡೊರತಿ, ಮುದ್ದುರಾಜ ಸೇರಿದಂತೆ ಇತರರು ಇದ್ದರು.