ಅಕಾಲಿಕ ಮಳೆಯ ಹಿನ್ನೆಲೆ, ರಾಜ್ಯದೆಲ್ಲೆಡೆ ಬರಗಾಲದ ಛಾಯೆ ಮೂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಹಲವೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. ಕೆ.ಆರ್ ಪುರ ವಿಧಾನಸಭಾ ಕ್ಷೇತ್ರದ ಹಲವೆಡೆ ನೀರಿನ ಕೊರತೆ ಎದುರಾಗಿದೆ. ಇತ್ತಕಡೆ ಅಂತರ್ಜಲ ಮಟ್ಟ ಕುಸಿದಿದ್ದರೇ, ಮತ್ತೊಂದೆಡೆ ಕಾವೇರಿ ನೀರು 15 ದಿನಕ್ಕೊಮ್ಮೆ ಬರುತ್ತಿದೆ.
ನೀರಿನ ಸಮಸ್ಯೆ ತಲೆದೂರಿದ ಬೆನ್ನಲ್ಲೇ, ಇತ್ತಕಡೆ ಟ್ಯಾಂಕರ್ ನೀರಿನ ದರ ದುಪ್ಪಟ್ಟಾಗಿದೆ. ನೀರಿನ ಸಮಸ್ಯೆಯಿಂದಾಗಿ ಹಲವು ಜನ ಬಾಡಿಗೆದಾರರಿಗೆ ಸಮಸ್ಯೆ ಎದುರಾಗಿದೆ.
ನೀರಿನ ಕೊರತೆಯಿಂದಾಗಿ ಬಾಡಿಗೆದಾರರಿಗೆ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುವಂತಹ ಸ್ಥಿತಿ ಎದುರಾಗಿದೆ. ಅಲ್ಲದೇ, ಅಂತರ್ಜಲ ಕುಸಿದು ಕೊಳವೆ ಬತ್ತಿದ ಮನೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಳವಾಗಿದೆ. ಇಂತಹ ಸಮಯದಲ್ಲಿ ಹೆಚ್ಚಿನ ಹಣ ಖರ್ಚು ಮಾಡಿ ಟ್ಯಾಂಕರ್ ನೀರು ಹಾಕಿಸಿಕೊಳ್ಳುವಂತಹ ಸ್ಥಿತಿ ಇದೆ. ಇದೀಗ, ಟ್ಯಾಂಕರ್ ಬೆಲೆ ₹500-₹900 ವರೆಗೂ ಇದ್ದು, ಎರಡು, ಮೂರು ಮನೆ ಬಾಡಿಗೆ ಕೊಟ್ಟ ಮಾಲೀಕರು ಎರಡು ದಿನಕ್ಕೊಮ್ಮೆ ಟ್ಯಾಂಕರ್ ನೀರು ಹಾಕಿಸಬೇಕಾಗಿದೆ. ಹೀಗಾಗಿ, ಹೆಚ್ಚಿನ ಹಣ ನೀಡಲು ಮನೆಯ ಮಾಲೀಕರು ಬಾಡಿಗೆದಾರರಿಗೆ ತಿಳಿಸುತ್ತಿದ್ದಾರೆ. ಅಲ್ಲದೇ, ನೀರಿನ ಸಮಸ್ಯೆಯಿಂದ ಇದ್ದ ಮನೆ ಖಾಲಿ ಮಾಡಿ ಬೇರೆ ಪ್ರದೇಶಗಳಿಗೆ ಜನರು ತೆರಳುತ್ತಿದ್ದಾರೆ.
ಬೆಂಗಳೂರಿನ ಎಚ್‌ಎಎಲ್, ವಿಜ್ಞಾನ ನಗರ, ವಿಜಿನಾಪುರ, ಕೆ.ಆರ್.ಪುರ, ದೇವಸಂದ್ರ, ಎ.ನಾರಾಯಣಪುರದ, ರಾಮಮೂರ್ತಿ ನಗರ, ಹೊರಮಾವು ಸೇರಿದಂತೆ ನಾನಾಕಡೆ ಕಾವೇರಿ ನೀರಿನ ಸಮಸ್ಯೆ ಇದೆ.
ನಗರದಲ್ಲಿ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚಿದೆ. ಟ್ಯಾಂಕರ್ ನೀರು ದುಬಾರಿಯಾಗಿರುವ ಹಿನ್ನೆಲೆ, ವಸತಿ ಸಮುಚ್ಚಯಗಳಲ್ಲಿ ಮೆಂಟೇನೆನ್ಸ್ ದರ ಹೆಚ್ಚಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಗರಬತ್ತಿ ಕಂಟೈನರ್‌ನಲ್ಲಿ ₹17 ಲಕ್ಷ ಮೌಲ್ಯದ ಚಿನ್ನದ ತುಂಡು ಕಳ್ಳಸಾಗಣೆ
“ನೀರಿನ ಸಮಸ್ಯೆ ತುಂಬಾ ಹೆಚ್ಚಳವಾಗಿದೆ. ಕಾವೇರಿ ನೀರು ಸರ್ಮಪಕವಾಗಿ ಪೂರೈಕೆಯಾಗುತ್ತಿಲ್ಲ. 15 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಸ್ವಲ್ಪ ಸಮಯವೇ ನೀರನ್ನು ಬಿಡುತ್ತಿದ್ದಾರೆ. ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಕೊಳವೆ ಬಾವಿ 1,200 ಅಡಿ ಕೊರೆದರು ನೀರು ಸಿಗುತ್ತಿಲ್ಲ. ಹೀಗಾಗಿ, ಎಲ್ಲ ವಾರ್ಡ್‌ಗಳಲ್ಲೂ ಜನರು ಟ್ಯಾಂಕರ್ ನೀರನ್ನು ಅವಲಂಬಿಸುವಂತಾಗಿದೆ” ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.