ಚುನಾವಣಾ ಬಾಂಡ್‌ಗಳಿಗೆ ಸುಪ್ರೀಂ ಕೋರ್ಟ್ ನಿಷೇಧ ಹೇರಿರುವ ತೀರ್ಪನ್ನು ಸ್ವಾಗತಿಸಿರುವ ಡಿಸಿಎಂ ಡಿಕೆ ಶಿವಕುಮಾರ್, “ದೇಶದ ಇತಿಹಾಸದಲ್ಲೇ ಇದೊಂದು ಮಹತ್ವದ ನಿರ್ಧಾರ. ಪ್ರಜಾಪ್ರಭುತ್ವದ ಉಳಿವಿಗೆ ಇಂತಹ ಮಹತ್ವದ ನಿರ್ಧಾರ ಅಗತ್ಯ” ಎಂದು ಶ್ಲಾಘಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದೇಶದ ಇತಿಹಾಸದಲ್ಲೇ ಇದೊಂದು ಮಹತ್ವದ ನಿರ್ಧಾರ. ಅವರ ಈ ಧೈರ್ಯವಾದ ನಿರ್ಧಾರಕ್ಕೆ ನಾನು ಅಭಿನಂದಿಸುತ್ತೇನೆ. ದೇಶದ ಪ್ರಜಾಪ್ರಭುತ್ವ ಉಳಿಸಲು ಇಂತಹ ಮಹತ್ವದ ನಿರ್ಧಾರಗಳು ಬೇಕು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ” ಎಂದು ತಿಳಿಸಿದರು.
ನಮಗೂ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ
“ನಮಗೂ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೂ ಆತ್ಮಸಾಕ್ಷಿ ಮತಗಳು ಬೀಳಲಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದು, ಅವರಿಗೆ ಆತ್ಮಸಾಕ್ಷಿಯ ಮತಗಳು ಬೀಳಲಿವೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಅವರು ಅಡ್ಡಮತದಾನದ ಸೂಚನೆ ನೀಡಿದ್ದರು. ಈ ಬಗ್ಗೆ ಪತ್ರಕರ್ತರು ಕೇಳಿದಾಗ ಡಿ ಕೆ ಶಿವಕುಮಾರ್ ಈ ರೀತಿ ಉತ್ತರಿಸಿದರು.
“ನಮಗೂ ಎಲ್ಲ ಪಕ್ಷಗಳಲ್ಲೂ ಸ್ನೇಹಿತರಿದ್ದಾರೆ. ಜೆಡಿಎಸ್ ವಿಫಲವಾಗಿರುವ ಕಾರಣದಿಂದ ಅವರು ಬಿಜೆಪಿ ಜತೆ ಮೈತ್ರಿ ಮಾಡಿದ್ದಾರೆ. ಆ ಪಕ್ಷಗಳಿಂದ ನಮಗೂ ಆತ್ಮಸಾಕ್ಷಿಯ ಮತಗಳು ಬರುವ ವಿಶ್ವಾಸವಿದೆ. ಬಿಜೆಪಿ ಮತ್ತು ಜೆಡಿಎಸ್fನವರು ಸದಾ ಕುದುರೆ ವ್ಯಾಪಾರ ಮಾಡುತ್ತಾರೆ. ಅವರು ಅದಕ್ಕೆ ಹೆಸರುವಾಸಿ. ಫೆ. 27ರಂದು ಎಲ್ಲವೂ ತಿಳಿಯಲಿದೆ. ಅವರು ಬಿಜೆಪಿಗೆ ಬಹಳ ಹತ್ತಿರವಾಗಿರುವಂತೆ ಬಿಂಬಿಸುತ್ತಿದ್ದಾರೆ. ಬಿಜೆಪಿಯ ಎಷ್ಟು ಮತಗಳು ಅವರಿಗೆ ಸಿಗಲಿದೆ ಎಂಬುದನ್ನು ಕಾದುನೋಡಿ” ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿದರು.
ಆ ಪಕ್ಷಗಳಿಂದ ನಿಮಗೆ ಎಷ್ಟು ಆತ್ಮಸಾಕ್ಷಿ ಮತಗಳು ಸಿಗಬಹುದು ಎಂದು ಕೇಳಿದಾಗ, “ಮತದಾನದ ನಂತರ ತಿಳಿಸುತ್ತೇವೆ. ಅವರು ಮೈತ್ರಿಯಿಂದ ಐದನೇ ಅಭ್ಯರ್ಥಿ ಕಣಕ್ಕಿಳಿಸಲು ಯತ್ನಿಸುತ್ತಿದ್ದಾರೆ. ಅವರು ಅವರ ಪ್ರಯತ್ನ ಮಾಡಲಿ. ನಾವು ನಮ್ಮ ಒಗ್ಗಟ್ಟಿನ ರಾಜಕಾರಣ ಮಾಡುತ್ತೇವೆ” ಎಂದು ತಿಳಿಸಿದರು.
“ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ಬೆಂಬಲ ನೀಡಿದ್ದಾರೆ. ರಾಜ್ಯಸಭೆಗೆ ನಮ್ಮ ಪಕ್ಷದಿಂದ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇವರು ಆಯ್ಕೆಯಾಗಿ ರಾಜ್ಯಸಭೆಯಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಲಿದ್ದಾರೆ ಎಂಬ ವಿಶ್ವಾಸವಿದೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಯೋಜನೆ ರದ್ದು : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಅಜಯ್ ಮಾಕೆನ್ ಅವರ ಆಯ್ಕೆ ವಿಚಾರವಾಗಿ ಕೇಳಿದಾಗ, “ಈ ಹಿಂದೆ ಬಿಜೆಪಿ, ಜೆಡಿಎಸ್‌ನವರು ಕರೆದುಕೊಂಡು ಬಂದು ನಿಲ್ಲಿಸಿದ್ದರಲ್ಲ. ಅವರನ್ನು ಕೇಳಿ. ಅಜಯ್ ಮಾಕೆನ್ ಅವರ ಕುಟುಂಬ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಅನೇಕ ತ್ಯಾಗ ಮಾಡಿದೆ. ವಿದ್ಯಾರ್ಥಿ ನಾಯಕನಿಂದ ದೆಹಲಿಯವರೆಗೂ ಪಕ್ಷ ಸಂಘಟನೆ ಮಾಡಿರುವ ಪಕ್ಷದ ಆಧಾರಸ್ತಂಭ ಇವರು. ಹೀಗಾಗಿ ಅವರನ್ನು ನಾವು ಬಹಳ ಸಂತೋಷದಿಂದ ಆಯ್ಕೆ ಮಾಡಿದ್ದೇವೆ” ಎಂದರು.