ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮಕ್ಕಳು ತಮ್ಮ ಹೆತ್ತವರೊಂದಿಗೆ ಭಾಗವಹಿಸುವುದರಿಂದ ಮುಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಕೊಂಡೊಯ್ಯಬಹುದು. ಇಂತಹ ಸಂಸ್ಕೃತಿಯ ತೊಟ್ಟಿಲುಗಳಾದ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಉಡುಪಿಯ ಶೆಫಿನ್ಸ್ ಟ್ರಸ್ಟ್‌ನ ನಿರ್ದೇಶಕ ಮನೋಜ್ ಕಡಬ ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲೆಯ ಮಣಿಪಾಲದ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶೆಫಿನ್ಸ್ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಇವರು ಕನ್ನಡ ಮಾಧ್ಯಮ ಶಾಲೆ ಉಳಿಸಿ ಆಂದೋಲನದಡಿಯಲ್ಲಿ ನಡೆಸುತ್ತಿರುವ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆಗಳು ನಮ್ಮ ಸಂಸ್ಕೃತಿಯ ತೊಟ್ಟಿಲು, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ತಮ್ಮ ಹೋಂ ವರ್ಕ್ ಗಳ ಒತ್ತಡದಿಂದಾಗಿ, ಮನೆಯಲ್ಲಿ ಅಥವಾ ಊರಿನಲ್ಲಿ ನಡೆಯುವ ಧಾರ್ಮಿಕ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾವಹಿಸಲು ಬಹಳಷ್ಟು ಸಮಯಾವಕಾಶದ ಕೊರತೆ ಇರುತ್ತದೆ. ಆದರೆ, ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳಿಗೆ ಆಟೋಟದ ಜೊತೆಗೆ ಇಂತಹ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಾಗುತ್ತದೆ. ಮನೆಗಳಲ್ಲಿ ನಡೆಯುವ ಪೂಜೆ ಮತ್ತಿತರ ಧಾರ್ಮಿಕ ಆಚರಣೆಗಳು, ಊರಿನ ಜಾತ್ರೆ, ಕೋಲ, ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆಲ್ಲವುಗಳಿಗೆ ಹೆತ್ತವರೊಂದಿಗೆ ಭಾಗವಹಿಸುವುದರಿಂದ ಮುಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಕೊಂಡೊಯ್ಯಬಲ್ಲರು ಎಂದರು.
ಇಂಗ್ಲಿಷ್ ಏನೂ ಕಬ್ಬಿಣದ ಕಡಲೆಯಲ್ಲ. ಮಗುವು ಕಲಿಯುವ ಇತರ ಭಾಷೆಗಳೊಂದಿಗೆ ಇದೂ ಒಂದು ಭಾಷೆ ಅಷ್ಟೆ. ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕೇ ಹೊರತು ಸಂಸ್ಕೃತಿಯಾಗಿ ಅಲ್ಲ. ಮಗುವು ತನ್ನ ದಿನನಿತ್ಯದ ಚಟುವಟಿಕೆಗಳೊಂದಿಗೆ ಸ್ವಲ್ಪ ಸಮಯ ಆಂಗ್ಲ ಭಾಷೆಯಲ್ಲಿ ಮಾತನಾಡುವುದಕ್ಕೂ ಶ್ರಮಪಟ್ಟಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಇಂಗ್ಲಿಷ್ ಮೀಡಿಯಂ ಮಕ್ಕಳಿಗೂ ಕಡಿಮೆಯಿಲ್ಲದಷ್ಟು ಇಂಗ್ಲಿಷ್ ನಲ್ಲಿ ಮಾತನಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಣಿಪಾಲದ ಅಕಾಡೆಮಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಇಟ್ಟಿರುವ ಹೆಜ್ಜೆ ನಿಜಕ್ಕೂ ಶ್ಲಾಘನೀಯ ಎಂದರು.
5ನೇ ತರಗತಿಯವರೆಗೆ ಶಾಲಾ ಹಳೆ ವಿದ್ಯಾರ್ಥಿಯಾಗಿದ್ದು, ಇದೀಗ ಬೇರೆ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ದೇವರಾಜ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ವಿದ್ಯಾರ್ಥಿಗಳು ಪ್ರದರ್ಶಿಸಿದ ಸ್ಪೋಕನ್ ಇಂಗ್ಲಿಷ್‌ನ ವಿವಿಧ ಚಟುವಟಿಕೆಗಳನ್ನು ಶ್ಲಾಘಿಸಿ, 1ರಿಂದ 5ನೇ ತರಗತಿಯವರೆಗಿನ ತರಗತಿಗಳಿರುವ ಈ ಶಾಲೆಯಲ್ಲಿ 104 ವಿದ್ಯಾರ್ಥಿಗಳಿದ್ದು, ಮುಂದಿನ ವರ್ಷ ಮಕ್ಕಳ ಸಂಖ್ಯೆ ದ್ವಿಗುಣವಾಗಲಿ ಮತ್ತು ತಾನುಕಳೆದ ವರ್ಷದವರೆಗೆ ಕಲಿತ ಶಾಲೆಯ ಎಲ್ಲಾ ಮಕ್ಕಳೂ ಮುಂದಕ್ಕೆ ಇಂಗ್ಲಿಷ್‌ನಲ್ಲಿ ಚೆನ್ನಾಗಿ ಮಾತನಾಡುವಂತಾಗಲಿ ಎಂದು ಆಶಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ವಹಿಸಿದ್ದರು, ಶೆಫಿನ್ಸ್‌ನ ತರಬೇತಿ ಸಂಯೋಜಕಿ ಜ್ಯೋತಿ ರೆಬೆಲ್ಲೋ ಮತ್ತು ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶೆಫಿನ್ಸ್‌ನಿಂದ ತರಬೇತಿ ಪಡೆದು ಅತ್ಯಂತ ಕ್ರಯಾಶೀಲ ಪ್ರಶಸ್ತಿಗೆ ಭಾಜನರಾದ ಸಂಸ್ಥೆಯ ಗೌರವ ಶಿಕ್ಷಕಿ ನಾಗರತ್ನಅವರನ್ನು ಗೌರವಿಸಲಾಯಿತು. ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಲು ಸಹಕರಿಸಿದ ಮುಖ್ಯ ಶಿಕ್ಷಕಿ ಲಕ್ಷ್ಮೀಯವರನ್ನು ಹಾಗೂ ಶಿಕ್ಷಕ ಚಂದ್ರಶೇಖರ್ ಅವರನ್ನು, ಶಾಲಾ ಹಳೆ ವಿದ್ಯಾರ್ಥಿ ದೇವರಾಜ್‌ರವರನ್ನು ಶೆಫಿನ್ಸ್ ಪರವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್‌ನ ಚಟುವಟಿಕಾ ಪುಸ್ತಕಗಳನ್ನು ವಿತರಿಸಲಾಯಿತು. ಮಕ್ಕಳು ಆಂಗ್ಲ ಭಾಷೆಯಲ್ಲಿ ತಾವು ಕಲಿತ ಟಂಗ್ ಟ್ವಿಸ್ಟರ್, ಪದ್ಯ ಹಾಗೂ ಸಂಭಾಷಣೆಯನ್ನು ಪ್ರದರ್ಶಿಸಿದರು. ಗೌರವ ಶಿಕ್ಷಕಿ ನಾಗರತ್ನ ಕಾರ್ಯಕ್ರಮ ನಿರೂಪಿಸಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಸ್ವಾಗತಿಸಿ, ಶಿಕ್ಷಕ ಚಂದ್ರಶೇಖರ್ ವಂದಿಸಿದರು.