ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್ ಭಾಷಣ ಮುಗಿಯುವುದಕ್ಕೂ ಮೊದಲೇ ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರ ಬಿಜೆಪಿ ಶಾಸಕ ಸುರೇಶ್ ಕುಮಾರ್, ಬೆಂಗಳೂರಿನಿಂದ ಸಂಗ್ರಹವಾಗಿರುವ ಆದಾಯವೆಷ್ಟು? ಬಜೆಟ್‌ನಲ್ಲಿ ಬೆಂಗಳೂರಿಗೆ ಕೊಟ್ಟಿರುವ ಕುಡಿಕೆ ಹಣ ಎಷ್ಟು?” ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ‘ನಮ್ಮ ಹಣ, ನಮ್ಮ ಹಕ್ಕು’ ಎಂಬ ಹ್ಯಾಷ್‌ಟ್ಯಾಗ್ ಅನ್ನು ಕೂಡ ಬಳಸಿದ್ದಾರೆ. ಇದರಿಂದ ಕೆರಳಿರುವ ನೆಟ್ಟಿಗರು, ಬಿಜೆಪಿಯ ಶಾಸಕರ ಪೋಸ್ಟ್‌ಗೆ ಕಮೆಂಟ್ ಹಾಕುವ ಮೂಲಕ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
“ಇದೆ ಪ್ರಶ್ನೆಯನ್ನು ನಿಮ್ಮ ಸರ್ಕಾರವಿತ್ತಲ್ಲವೇ? ಆವಾಗ ಕೇಳಬೇಕಿತ್ತು” ಎಂದು ನೆಟ್ಟಿಗರೊಬ್ಬರು ತಿಳಿಸಿದರೆ, “ಕರ್ನಾಟಕದಿಂದ ತೆರಿಗೆ ಹಣ ಎಷ್ಟು? ಕರ್ನಾಟಕಕ್ಕೆ ಕೇಂದ್ರ ಕೊಟ್ಟ ಕುಡಿಕೆ ಹಣ ಎಷ್ಟು ಅಂತಲೂ ಯೋಚಿಸಬೇಕು” ಎಂದು ಜ್ಞಾನ್ ಕಲ್ಲಹಳ್ಳಿ ಎಂಬವರು ತಿಳಿಸಿದ್ದಾರೆ.
ಸುರೇಶ್ ಕುಮಾರ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಪತ್ರಕರ್ತ ಎನ್.ಎ. ಮೊಹಮ್ಮದ್ ಇಸ್ಮಾಯಿಲ್, “ಸಜ್ಜನರಾದ ಎಸ್ ಸುರೇಶ್ ಕುಮಾರ್ ಅವರಿಗಿರೋ ಜಾಣ ಕುರುಡು ಮತ್ತು ಕಿವುಡಿನ ಬಗ್ಗೆ ಮತ್ತೆ ಮತ್ತೆ ಬರೆಯುವುದರ ಅಗತ್ಯ ಇಲ್ಲ. ಆದರೂ ಒಂದು ಪ್ರಶ್ನೆ. ಬೆಂಗಳೂರು ಮಹಾನಗರ ಪಾಲಿಕೆ ಸಂಗ್ರಹಿಸುತ್ತಿರುವ ತೆರಿಗೆಯನ್ನು ಕರ್ನಾಟಕ ಸರ್ಕಾರ ಕಿತ್ತುಕೊಂಡಿದೆಯಾ? ಆದರೆ ಒಕ್ಕೂಟ ಸರ್ಕಾರ (ಕೇಂದ್ರ ಸರ್ಕಾರ) ಕರ್ನಾಟಕದ ಪಾಲಿನ ತೆರಿಗೆಯನ್ನು ಕಿತ್ತುಕೊಂಡಿದೆ. ಅಲ್ಲಿ ಆಡಳಿತ ನಡೆಸುತ್ತಿರುವ ನಿಮ್ಮ ಪಕ್ಷವನ್ನು ಸಮರ್ಥಿಸಿಕೊಳ್ಳಬೇಕಾಗಿರೋ ಅನಿವಾರ್ಯತೆ ನಿಮಗಿದೆ ಅಂತ ಒಪ್ಪಿಕೊಳ್ಳಿ ಅಷ್ಟೇ. ಆಗ ತಮ್ಮ ಪ್ರಾಮಾಣಿಕತೆಯನ್ನಾದರೂ ಸಂಭ್ರಮಿಸಬಹುದು. ಈ ಪೋಸ್ಟ್ ಕಂಡ ತಕ್ಷಣ “ಕಾಂಗ್ರೆಸ್ಸಿನವರೂ ಹೀಗೆ ಮಾಡಿದ್ದರು” ಅನ್ನೋ ವರಾತ ತೆಗೆಯೋ ಗೆಳೆಯರೂ ಇದ್ದಾರೆ. ಅವರಿಗೆ ನನ್ನ ಉತ್ತರ ಇಷ್ಟೇ. ಕಾಂಗ್ರೆಸಿನವರು ತಿನ್ನಬಾರದ್ದನ್ನು ತಿಂದದ್ದನ್ನು ನೀವು ಅಥವಾ ನೀವು ಬೆಂಬಲಿಸುವವರು ತಿನ್ನುವುದಕ್ಕೆ ಸಮರ್ಥನೆಯಾಗುವುದೇ?” ಎಂದು ಕೇಳಿದ್ದಾರೆ.
“ಮಾನ್ಯ ಸುರೇಶ್ ಕುಮಾರ್ ಅವರೇ, ಮೊದಲು ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ಹಣವನ್ನು ಕೇಳಲು ನೀವು ಮತ್ತು ನಿಮ್ಮ ಬಿಜೆಪಿಯ ನಾಯಕರು ಬಾಯ್ಬಿಟ್ಟು ಮಾತನಾಡಿ. ಬಳಿಕ ಎಲ್ಲವಕ್ಕೂ ಸಾಧ್ಯವಾದಷ್ಟು ಹಣ ವಿತರಿಸಬಹುದು” ಎಂದು ಸಲಹೆ ನೀಡಿದ್ದಾರೆ.
ಸುರೇಶ್ ಕುಮಾರ್ ಫೇಸ್‌ಬುಕ್ ಲಿಂಕ್ ಇಲ್ಲಿದೆ
https://www.facebook.com/share/p/E1Dk3tKnpDwRE7rP/?mibextid=WC7FNe