ತುಮಕೂರು ನಗರದಲ್ಲಿ ಮಗ ಮತ್ತು ಸೊಸೆಯಿಂದಲೇ ಗೃಹ ಬಂಧನದಲ್ಲಿದ್ದ ವೃದ್ಧೆಯನ್ನು ರಕ್ಷಿಸಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ಅವರು ಮತ್ತೆ ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದಾರೆ.
ನ್ಯಾ. ನೂರುನ್ನೀಸ ಅವರ ಸೂಕ್ತ ತಿಳುವಳಿಕೆಯಿಂದ ಕಾನೂನು ಅರಿತ ಮಕ್ಕಳು ವೃದ್ಧೆಯನ್ನು ಪುನಃ ಮನೆಗೆ ಸೇರಿಸಿಕೊಂಡಿದ್ದಾರೆ.
ಜಿಲ್ಲಾ ಸಖಿ ಕೇಂದ್ರದಿಂದ ಓರ್ವ ವೃದ್ಧೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ಕರೆದುಕೊಂಡು ಬಂದು ಫೆಬ್ರವರಿ 15ರಂದು ಹಾಜರುಪಡಿಸಿದ್ದರು. ನ್ಯಾಯಾಧೀಶ ನೂರುನ್ನೀಸ ಅವರು ವೃದ್ಧೆಯನ್ನು ಮಾತನಾಡಿಸಿ ಆಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಸರ್ಕಾರಿ ಸೇವೆ ಸಲ್ಲಿಸಿದ ನಿವೃತ್ತಿ ಅಧಿಕಾರಿಯಾಗಿದ್ದು, ಆಕೆಯ ಪತಿಯ ನಿವೃತ್ತ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದು, ಆಕೆಯು ಪ್ರತಿ ಮಾಹೆ ₹54,000 ಪಿಂಚಣಿ ಪಡೆಯುತ್ತಿದ್ದಾರೆ. ಅವರ ಹೆಸರು ಪಂಕಜಾಕ್ಷ ಎಂಬುದಾಗಿತ್ತು. ಹಿರಿಯ ಮಗ ಮತ್ತು ಸೊಸೆ ಸೇರಿ ಆಕೆಯನ್ನು ಗೃಹಬಂಧನದಲ್ಲಿ ಇರಿಸಿ ವೃದ್ದೆಯು ಹೊರಗಡೆ ಎಲ್ಲಿಯೂ ಹೋಗದಂತೆ ಬಾಗಿಲಿಗೆ ಬೀಗ ಹಾಕಿರುವ ಘಟನೆ ಕುರಿತು ಅವರು ವಿಸ್ತೃತ ಮಾಹಿತಿ ಪಡೆದರು.
ವೃದ್ದೆಯು ಗೃಹಬಂಧನದಲ್ಲಿರುವ ವಿಷಯ ತಿಳಿದ ಸಖಿ ಕೇಂದ್ರದವರು ಆ ವೃದ್ಧೆಯನ್ನು ಅಲ್ಲಿಂದ ಬಿಡಿಸಿ ಕಳೆದ ಎರಡು ದಿನಗಳಿಂದ ಸಖಿ ಕೇಂದ್ರದಲ್ಲಿ ಇರಿಸಿ ಸೂಕ್ತ ಆರೈಕೆ ಮಾಡಿದ್ದರು. ಹಿರಿಯ ನಾಗರಿಕರ ಸಾಂತ್ವನ ಕೇಂದ್ರ ಹಾಗೂ ಪೊಲೀಸ್ ಇಲಾಖೆಯ ಮೂಲಕವೂ ವೃದ್ಧೆಯ ಮಗ ಸೊಸೆಯನ್ನು ಕಚೇರಿಗೆ ಕರೆಸಿ ಮನೆಗೆ ಕಳುಹಿಸುವ ಪ್ರಯತ್ನ ಮಾಡಲಾಗಿತ್ತು. ಆದರೂ ಅವರಿಬ್ಬರೂ ಯಾವುದೇ ಕಾರಣಕ್ಕೂ ವೃದ್ದೆಯನ್ನೂ ಮನೆಗೆ ಕರೆದುಕೊಂಡು ಹೋಗಲು ಒಪ್ಪುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರದಂದು ಸಖಿ ಕೇಂದ್ರದವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಗೆ ವೃದ್ಧೆಯನ್ನು ಕರೆದುಕೊಂಡು, ವೃದ್ಧೆಯು ತನ್ನನ್ನು ಆಕೆಯ ಮಗನ ಮನೆಗೆ ಸೇರಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನೂರುನ್ನೀಸ ಅವರು ವೃದ್ದೆಯನ್ನು ಕರೆದುಕೊಂಡು ಹೋಗಿ ಆಕೆಯ ಸ್ವಂತ ಮನೆಗೆ ಸೇರಿಸಿದರು. ಅವರ ಮಗ ಮತ್ತು ಸೊಸೆಗೆ ವೃದ್ದೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆಯೂ ಒಂದು ವೇಳೆ ಆಕೆಯನ್ನು ಮತ್ತೆ ನಿರ್ಲಕ್ಷ ಮಾಡಿದಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಂಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಶ್ರೀಧರ್, ಸಖಿ ಕೇಂದ್ರದ ರಾಧಾ ಆರ್., ಪೊಲೀಸ್ ಇಲಾಖೆಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸ ಶ್ಲಾಘಿಸಿದರು.
ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007 ಮತ್ತು ಅಧಿನಿಯಮ -2009 ಕಾಯ್ದೆಯು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪಾತ್ರಗಳ ಘೋಷಣೆಗಳನ್ನು ಮಾನವ ಹಕ್ಕುಗಳಿಗೆ ಸಂಬಂಧಿಸಿದ್ದು, ಯಾರು ಆಸ್ತಿಗಾಗಿ ತಂದೆ-ತಾಯಿಯರನ್ನು ಶೋಷಣೆ ಮಾಡುತ್ತಾರೋ, ವೃದ್ಧಾಶ್ರಮಕ್ಕೆ ದೂಡುತ್ತಾರೋ, ಜೀವನಾಂಶದಿಂದ ವಂಚಿಸುತ್ತಾರೋ ಅಂತಹವರ ವಿರುದ್ಧ ನ್ಯಾಯಾಲಯಗಳಿಗೆ ದೂರು ನೀಡಿದಲ್ಲಿ ವಿಚಾರಣೆ ನಡೆಸಿ ಹಿರಿಯರು ತಮ್ಮ ಮಕ್ಕಳಿಗೆ ನೀಡಿರುವ ಆಸ್ತಿಯನ್ನು ವಾಪಸ್ ಕೊಡಿಸಲು ಅವಕಾಶವಿದೆ.
ಮಕ್ಕಳಿಂದ ನಿರ್ಲಕ್ಷಕ್ಕೆ ಒಳಪಡುವ ಹಿರಿಯರು ಜೀವನಾಂಶ ಪಡೆಯಲು ಈ ಕಾನೂನು ಜಾರಿಗೆ ತರಲಾಗಿದೆ. ಕಾನೂನುಗಳನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಹಿರಿಯ ನಾಗರಿಕ ರಕ್ಷಣೆ ಕಾಯ್ದೆ 2007ರ ಅರಿವಿನ ಕೊರತೆಯಿಂದಾಗಿ ವೃದ್ಧಾಪ್ಯದಲ್ಲಿ ಹಿರಿಯರನ್ನು ಅವರ ಮಕ್ಕಳು ಕಡೆಗಣಿಸುತ್ತಿದ್ದಾರೆ. ಹಿರಿಯ ನಾಗರಿಕರ ಹಕ್ಕುಗಳನ್ನು ತಿಳಿದುಕೊಳ್ಳುವುದು, ಜಾಗೃತಿ ಮೂಡಿಸುವುದು ಮತ್ತು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ.
ಸಖಿ ಒನ್ ಸ್ಟಾಪ್ ಸೆಂಟರ್ : “ಕೌಟುಂಬಿಕ ಕಲಹ, ಸಮುದಾಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಉದ್ಯೋಗ ಕ್ಷೇತ್ರ ಸೇರಿದಂತೆ ಯಾವುದೇ ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರ ಈ ಸಖಿ ಸೆಂಟರ್ ಆರಂಭಗೊಳಿಸಿದೆ. ನೊಂದ ಮಹಿಳೆಯರಿಗೆ ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ, ಪೊಲೀಸ್ ನೆರವು, ಕಾನೂನು ನೆರವು, ತಾತ್ಕಾಲಿಕ ವಸತಿ ಕಲ್ಪಿಸಲಾಗಿದ್ದು, ನೆರವು ಬಯಸಿದ ಮಹಿಳೆಯರ ವಾಸಕ್ಕೆ ಅನುಕೂಲ ಕಲ್ಪಿಸಲಾಗಿದೆ” ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನೂರುನ್ನೀಸ ಅವರು ತಿಳಿಸಿದರು.
“ಸಖಿ ಒನ್ ಸ್ಟಾಪ್ ಸೆಂಟರ್ ”ದೌರ್ಜನ್ಯಕ್ಕೊಳಗಾದ ಮಹಿಳೆಯರು ಖಿನ್ನತೆಗೆ ಒಳಗಾಗಿರುತ್ತಾರೆ. ಮಾನಸಿಕವಾಗಿ ನೊಂದಿರುತ್ತಾರೆ. ಆಗ ಅವರು ಸಾಂತ್ವನಕ್ಕಾಗಿ ಯಾರ ಬಳಿ ಹೋಗಬೇಕು, ಏನು ಮಾಡಬೇಕು ಎಂಬ ಗೊಂದಲದಲ್ಲಿರುವವರಿಗೆ ಸಖಿ ಒನ್ ಸ್ಟಾಪ್ ಸೆಂಟರ್ ಪರಿಹಾರ ಒದಗಿಸಲಿದೆ. ಚಿಕಿತ್ಸೆ, ಆಪ್ತ ಸಮಾಲೋಚನೆ, ಕಾನೂನು ನೆರವು, ವಸತಿ ಸೌಲಭ್ಯ ನೀಡಲಾಗುತ್ತದೆ. ದೌರ್ಜನ್ಯಕೊಳ್ಳಕಾಗುವ ಸಂದರ್ಭ ಸಹಾಯವಾಣಿ 181ಕ್ಕೆ ಕರೆ ಮಾಡಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಹಾಲವರ್ತಿ ಗ್ರಾಮದ ಅಸ್ಪೃಶ್ಯತೆ ಆಚರಣೆ ಪ್ರಕರಣ; ಅಧಿಕಾರಿಗಳಿಂದ ಸಂಧಾನ ಸಭೆ
“ಮಹಿಳಾ ಸಹಾಯವಾಣಿ 181ಕ್ಕೆ ಕರೆ ಮಾಡಿದರೆ ಸಖಿ ಅಥವಾ ಸಾಂತ್ವನ ಕೇಂದ್ರದ ನೆರವು ಪಡೆಯಬಹುದು. 112ಕ್ಕೆ ಕರೆ ಮಾಡಿದರೂ ಸಲಹೆ ದೊರೆಯುತ್ತದೆ. ಸಖಿ ಕೇಂದ್ರದಲ್ಲಿ ವಿವಿಧ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿ ಒಂದೇ ಸೂರಿನಡಿ ವಿವಿಧ ನೆರವನ್ನು ಉಚಿತವಾಗಿ ನೀಡಲಾಗುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಸಖಿ ಕೇಂದ್ರದ ಕುರಿತು ಅರಿವು ಮತ್ತು ಜಾಗೃತಿ ಅವಶ್ಯಕವಾಗಿದೆ” ಎಂದರು.