ಹಲವು ವರ್ಷಗಳಿಂದ ಮೃತರ ಅಂತ್ಯಕ್ರಿಯೆ ನಡೆಸುತ್ತಿದ್ದ ಜಾಗದಲ್ಲಿ ಇತ್ತೀಚೆಗೆ ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹ ಅಂತ್ಯಸಂಸ್ಕಾರಕ್ಕೆ ಜಮೀನು ಮಾಲೀಕ ಅವಕಾಶ ನೀಡಿರಲಿಲ್ಲ. ಇದರಿಂದ, ಜಾಗದ ವಿಚಾರಕ್ಕೆ ವಿವಾದಕ್ಕೆ ಸಿಲುಕಿತ್ತು. ಇದೀಗ, ಅದೇ ಜಾಗದಲ್ಲಿ ಮಹಿಳಯರು ಮೃತರ ಸಂಸ್ಕಾರ ನೆರವೇರಿಸಿರುವ ಘಟನೆ ಬೆಳಗಾವಿಯ ಕವಳೇವಾಡಿ ಗ್ರಾಮದಲ್ಲಿ ನಡೆದಿದೆ.
ಕವಳೇವಾಡಿ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದ ಕಾರಣ, ಗ್ರಾಮದ ಸ್ಥಳೀಯರೊಬ್ಬರ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದರು. ಆದರೆ, ಇತ್ತೀಚೆಗೆ, ಜಮೀನಿನ ಮಾಲೀಕ ಓಮನಿ ಗಾವಡೆ ಎಂಬವರು ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ, ಜಾಗದ ವಿಚಾರ ವಿವಾದಕ್ಕೆ ಸಿಲುಕಿತ್ತು.
ಶನಿವಾರ ಗ್ರಾಮದ ತುಕಾರಾಮ್ ಮೋರೆ ಎಂಬವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಸಂಸ್ಕಾರ ಮಾಡಲು ಹೋದಾಗ, ಓಮವಿ ಗಾವಡೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಅದೇ ಜಾಗದಲ್ಲಿ ಮೃತದೇಹ ಇಟ್ಟು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಇದೀಗ, ಗ್ರಾಮದ ಮಹಿಳೆಯರು ಅದೇ ಜಾಗದಲ್ಲಿ ಮೃತದೇಹವನ್ನು ಸುಟ್ಟು, ಅಂತ್ಯಕ್ರಿಯೆ ನೆರವೇರಿಸಿದ್ದಾರೆ.