ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಅನುಷ್ಠಾನಗೊಳಿಸಿ, ಜಗತ್ತಿಗೆ ಜಾತ್ಯತೀತ, ಸಮಸಮಾಜ, ಶೋಷಣೆ ರಹಿತ ಹಾಗೂ ಕಾಯಕ ದಾಸೋಹದ ಕ್ರಾಂತಿಕಾರಿ ತತ್ವ ಆದರ್ಶವನ್ನು ಸಾರಿದ ಬಸವಣ್ಣನವರು ಭಾರತದ ಪ್ರಥಮ ಸ್ವಾತಂತ್ರ ವಿಚಾರವಾದಿ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು.
ಧಾರವಾಡ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಾಂಸ್ಕ್ರತಿಕ ಇಲಾಖೆ ಆಶ್ರಯದಲ್ಲಿ ಶನಿವಾರದಂದು ಕರ್ನಾಟಕದ ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವಣ್ಣ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.
“ಶೋಷಣೆ ರಹಿತ, ಸಮಸಮಾಜ, ಜಾತ್ಯತೀತ ಮಹಿಳಾ ಸ್ವಾತಂತ್ರತೆಯಂಥ ಕ್ರಾಂತಿಕಾರಿ ಬದಲಾವಣೆಯನ್ನು ತಂದು ಇಡೀ ಜಗತ್ತಿಗೆ ಬಸವಣ್ಣ ಮಾದರಿಯಾದರು” ಎಂದು ಹೊರಟ್ಟಿ ಹೇಳಿದರು.
“ಬಸವಣ್ಣರಂತಹ ಮಹಾನ್ ವ್ಯಕ್ತಿ ಕರ್ನಾಟಕದಲ್ಲಿ ಇದ್ದು, ನಮ್ಮ ನಾಡಿಗೆ ದೊಡ್ಡ ಗೌರವ. ಬಸವಣ್ಣರ ಆಚಾರ, ವಿಚಾರ, ತತ್ವ, ಆದರ್ಶಗಳು ದೇಶಕ್ಕೆ ಹಾಗೂ ಜಗತ್ತಿಗೆ ಪ್ರಚಾರವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವು ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ಸಂಘ ಸಂಸ್ಥೆಗಳಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕ್ರತಿಕ ನಾಯಕರೆಂದು ಭಾವಚಿತ್ರ ಹಾಕಿರಿವುದು ಶ್ಲಾಘನೀಯ. ಇದರಿಂದ ಜನಸಾಮಾನ್ಯರಿಗೂ ಬಸವಣ್ಣರ ತತ್ವಗಳು ತಲುಪಲಿವೆ. ಮನೆಯೆ ಮೊದಲ ಪಾಠಶಾಲೆ, ಗೃಹಣಿಯರು ಈ ನಿಟ್ಟಿನಲ್ಲಿ ಬಸವಣ್ಣರ ಅಚಾರ, ವಿಚಾರ, ಸಂಸ್ಕಾರಗಳನ್ನು ಮಕ್ಕಳಿಗೆ ನೀಡಲು ಮುಂದಾಗಬೇಕು” ಎಂದರು.
ಡಾ ಎಂ ಎಂ ಕಲಬುರಗಿ ರಾಷ್ಟ್ರಿಯ ಪ್ರತಿಷ್ಟಾನದ ಅಧ್ಯಕ್ಷ ಡಾ ವೀರಣ್ಣ ರಾಜೂರ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, “ಬಸವಣ್ಣನವರನ್ನು ಈ ಜಗತ್ತು ಕಂಡ ಮೊದಲ ಸ್ವತಂತ್ರ ಧಾರ್ಮಿಕ ಮಹಾ ಮಾನವತಾವಾದಿ. ಅವರ ಕ್ರಾಂತಿ ಆರಂಭಗೊಂಡಿದ್ದು, ಅವರ ಮನೆಯಲ್ಲಿ ಮಹಿಳಾ ಸಮಾನತೆಯ ವೈಚಾರಿಕತೆಯಿಂದ ಆರಂಭಗೊಂಡಿತ್ತು” ಎಂದರು.
“ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್‍ಗೆ ಕಾಯಕ ದಾಸೋಹ ಸೂತ್ರದ ಬಜೆಟ್ ಎಂದು ಹೆಸರಿಟ್ಟಿದ್ದು ಅಭಿನಂದನೀಯ. ಗಳಿಕೆ ಹಾಗೂ ಬಳಕೆಯ ಸಮಾನತೆಯನ್ನು ಹೇಗೆ ಸರಿದೂಗಿಸಬೇಕೆಂದು ಬಸವಣ್ಣನ ತತ್ವದ ಮೂಲಕ ಈಗ ತೋರಿಸಿದ್ದಾರೆ” ಎಂದು ಹೇಳಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ನೈಜ ಹೋರಾಟಗಾರರ ವೇದಿಕೆ ದೂರು; 5 ದಶಕಗಳ ಬಳಿಕ ಗಂಗಸಂದ್ರಕ್ಕೆ ಬಂತು ಕುಡಿಯುವ ನೀರು
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಪ್ರಾಸ್ತಾವಿಕ ನುಡಿಗಳು, “ಉಳ್ಳವರು ಶಿವಾಲಯ ಕಟ್ಟುವರಯ್ಯಾ” ಎಂಬ ಬಸವಣ್ಣನವರ ವಚನ ವಿವರಿಸಿದ್ದು, ಸಭಿಕರಲ್ಲಿ ಚಪ್ಪಾಳೆ ಹಾಗೂ ಸಂತಸ ಮೂಡಿಸಿ ಶ್ಲಾಘನೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಬೇಂದ್ರೆ ಪ್ರತಿಷ್ಠಾನದ ಅಧ್ಯಕ್ಷ ಡಿ ಎಂ ಹೀರೆಮಠ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರ ಹಾಗೂ ಸಮಾಜದ ಮುಖಂಡರು ಇದ್ದರು.