ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 11ನೇ ವಾರ್ಡ್ ಕೆರೆ ಅಂಚಿನಲ್ಲಿ ವಾಸಿಸುತ್ತಿರುವ ನಿರ್ಗತಿಕ ಕುಟುಂಬಗಳು ವಾಸಿಸುವ ಸ್ಥಳದಲ್ಲಿ ತುಮಕೂರು ಮಹಾನಗರ ಪಾಲಿಕೆ ನೀರಿನ ಟ್ಯಾಂಕ್ ಅಳವಡಿಸಲು ಕ್ರಮ ವಹಿಸಿ ನೀರಿನ ಬವಣೆಯನ್ನು ನೀಗಿಸಿದೆ.
ನೈಜ ಹೋರಾಟಗಾರರ ವೇದಿಕೆಯ ಸದಸ್ಯರು ಮಾನವ ಹಕ್ಕುಗಳ ಆಯೋಗಕ್ಕೆ ಈ ಬಗ್ಗೆ ಫೆಬ್ರವರಿ 11ರಂದು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಫೆಬ್ರವರಿ 13ರಂದು ಮಾನವ ಹಕ್ಕುಗಳ ಸದಸ್ಯ ಕಾರ್ಯದರ್ಶಿ ಶ್ಯಾಮ್ ಭಟ್ಟ ಅವರು ಸ್ಥಳಕ್ಕೆ ಆಗಮಿಸಿ ಕೂಡಲೇ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದರು. ಇದರ ಪರಿಣಾಮವಾಗಿ ಐದು ದಶಕಗಳಿಂದ ನೀರಿನ ಸೌಲಭ್ಯ ಇಲ್ಲದೆ ಬಳಲುತ್ತಿರುವ ನಿರ್ಗತಿಕ ಏಳು ಕುಟುಂಬಗಳಿಗೆ ಈಗ ಕುಡಿಯುವ ನೀರಿನ ಸೌಲಭ್ಯ ದೊರಕಿದೆ.
“ನಮಗೆ ನೀರಿಲ್ಲದೆ ಸ್ನಾನ ಮಾಡಿ ಅದೆಷ್ಟೋ ದಿನಗಳಾಗಿದ್ದವು. ಇಂದು ಮನಸಾರೆ ನಾವು ನಮ್ಮ ಮಕ್ಕಳು ಸ್ನಾನ ಮಾಡುತ್ತೇವೆ” ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ನೀರು ಬಂದ ಸಂಭ್ರಮವನ್ನುಅಲ್ಲಿನ ಮಹಿಳೆಯರು ಸಂತಸ ಹಂಚಿಕೊಂಡಿದ್ದಾರೆ.
ನೈಜ ಹೋರಾಟಗಾರ ವೇದಿಕೆಯ ಹಂದ್ರಾಳ್ ನಾಗಭೂಷಣ್ ಮಾತನಾಡಿ, “ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಶುದ್ಧ ಕುಡಿಯುವ ನೀರನ್ನು ಸರ್ಕಾರ ಈವರೆಗೂ ಒದಗಿಸದೇ ಇರುವುದು ದುರಾದೃಷ್ಟಕರ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ ನಂತರ ನಗರಸಭೆ ಎಚ್ಚೆತ್ತುಕೊಂಡಿರುವುದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮರೀಚಿಕೆಯಾದ ಮೂಲಸೌಕರ್ಯ, ಚುನಾವಣೆ ಬಂದಾಗ ನೆನಪಾಗುವ ವಾರ್ಡ್
“ವಸತಿ ರಹಿತ ಏಳು ಕುಟುಂಬಗಳಿಗೆ ತಕ್ಷಣ ನಿವೇಶನ ನೀಡಿ ಮನೆ ನಿರ್ಮಿಸಿ ಕೊಡಬೇಕು” ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಎಚ್ ಎಂ ವೆಂಕಟೇಶ್ ಒತ್ತಾಯಿಸಿದರು.
“ಈ ಕುಟುಂಬಗಳಿಗೆ ಕುಡಿಯುವ ನೀರು ಒದಗಿಸಲು ಹೋರಾಟ ಮಾಡಬೇಕಾಗಿ ಬಂದಿದ್ದು ದುರಾದೃಷ್ಟಕರ. ದನಿ ಇಲ್ಲದವರ ದನಿಯಾಗಿ ನೈಜ ಹೋರಾಟಗಾರರ ವೇದಿಕೆಯು ರಾಜ್ಯದಲ್ಲಿ ಕೆಲಸ ಮಾಡುತ್ತಿದೆ” ಎಂದು ಎಚ್ ರಾಜು ಮತ್ತು ಕುಣಿಗಲ್ ನರಸಿಂಹಮೂರ್ತಿ ಹೇಳಿದರು.