ಇತಿಹಾಸದಲ್ಲಿ ಎಂದು ದೊರೆಯದೇ ಇರುವಷ್ಟು ಅನುದಾನವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು, ಅಭಿವೃದ್ಧಿಗೆ ಪೂರಕವಾಗಿದೆ ಎಂದು ಯುವ ಕಾಂಗ್ರೆಸ್ ಮುಖಂಡ ರವಿ ಬೋಸರಾಜ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ, ಸಮಪಾಲು ಪರಿಕಲ್ಪನೆಯಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ ಭರವಸೆಯನ್ನು ಬಜೆಟ್‌ನಲ್ಲಿ ಘೋಷಿಸುವ ಮೂಲಕ ನುಡಿದಂತೆ ನಡೆಯುತ್ತಿರುವದನ್ನು ಸಾಬೀತು ಪಡಿಸಿದೆ. ದೇಶದಲ್ಲಿ ಯಾವುದೇ ರಾಜ್ಯ ಮಾಡದೇ ಇರುವ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರು ಐದು ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಪೂರಕವಾದ ಬಜೆಟ್ ಜನರಿಗೆ ನೀಡಿದೆ ಎಂದರು.
ಕೇಂದ್ರ ಸರ್ಕಾರ ಟೈಕ್ಸ್ ಟೈಲ್ ಪಾರ್ಕ್ ಬೇಡಿಕೆಯನ್ನು ಮನ್ನಿಸದೇ ಇರುವಾಗ ರಾಜ್ಯ ಸರ್ಕಾರವೇ ಜವಳಿ ಟೈಕ್ಸ್ ಟೈಲ್ ಪಾರ್ಕ್ ನೀಡಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ರಿಗೆ ಮನವರಿಕೆ ಮಾಡಿದ್ದರಿಂದ ಇಲ್ಲಿಯೂ ಟೈಕ್ಸ್ ಟೈಲ್ ಪಾರ್ಕ್ ಸ್ಥಾಪನೆಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಆದರೆ, ಹಿಂದಿನ ಬಿಜೆಪಿ ಸರ್ಕಾರ ಹತ್ತಿ ಬೆಳೆಯದೇ ಇರುವ ಕಲಬುರಗಿಯಲ್ಲಿ ಮೇಘಾ ಟೈಕ್ಸ್ ಟೈಲ್ ಪಾರ್ಕ್ ಮಂಜೂರು ಮಾಡಿತ್ತು ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಭರವಸೆ ನೀಡಿದಂತೆ ಐದು ಸಾವಿರ ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಸರ್ಕಾರದ ಆರನೇ ಗ್ಯಾರಂಟಿಯಾಗಿದೆ ಎಂದರು. ಜಿಲ್ಲೆಗೆ ಸಂಬಂಧಿಸಿದಂತೆ ಬಹುದಿನದ ಬೇಡಿಕೆಯಾಗಿದ್ದ 5ಎ ಕಾಲುವೆ ಮಂಜೂರಾಗಿದೆ. ಬಿಜೆಪಿಯವರು 5ಎ ಕಾಲುವೆ ಮಾಡಲು ಆಗುವುದೇ ಇಲ್ಲ ಎಂದು ಹೇಳಿದ್ದರು. ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಯಂತೆ ಕಾಲುವೆಗೆ 990 ಕೋಟಿ ರೂ. ನೀಡಲಾಗಿದೆ ಎಂದರು.
ಮಾನ್ವಿ ತಾಲೂಕಿನ ಚಿಕಲಪರ್ವಿ ಹಾಗೂ ಚಿಕ್ಕ ಮಂಚಾಲೆಯಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಕುರ್ಡಿ ಕೆರೆತುಂಬುವ ಯೋಜನೆ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆ ಕೊನೆಭಾಗದ ರೈತರಿಗೆ ನೀರೊದಗಿಸಲು ನವಲಿ ಬಳಿ ಜಲಾಶಯ ನಿರ್ಮಾಣಕ್ಕೆ ಬದ್ದತೆ ತೋರಿದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯದ ಸಹಕಾರದೊಂದಿಗೆ ನಿರ್ಮಾಣಕ್ಕೆ ಭರವಸೆ ನೀಡಲಾಗಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಾಗಿ ಭರವಸೆ ನೀಡುತ್ತಲೇ ಬಂದು ಭೂಮಿಯೇ ಇಲ್ಲದೇ ಇದ್ದರೂ ಟೆಂಡರ್ ಪ್ರಕ್ರಿಯೆ ನಡೆಸಿತ್ತು. ಕೇಂದ್ರ ಪರಿಸರ ಇಲಾಖೆ ಅನುಮತಿ ನಿರಾಕರಿಸಿದ್ದು, ಅನುದಾನ ಹಿಂಪಡೆಯಲಾಗಿದೆ. ಜಿಲ್ಲಾಡಳಿತದಿಂದ ಪರ್ಯಾಯ ಸ್ಥಳ ಸಲ್ಲಿಸುವಂತೆ ಸೂಚಿಸಲಾಗಿದೆ. ಆದರ, ಜಿಲ್ಲಾಡಳಿತ ಪರ್ಯಾಯ ಸ್ಥಳವೇ ತೋರಿಸಿಲ್ಲ. 108 ಕುಟುಂಬಗಳಿದ್ದು ಪರ್ಯಾಯ ವ್ಯವಸ್ಥೆ ಮಾಡಿ ಭೂಮಿ ನೀಡಲು 220 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. ಈ ಹಿಂದೆ ಕೆಕೆಆರ್‌ಡಿಬಿಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನ ಬಳಸಿಕೊಂಡಿದ್ದನ್ನು ರದ್ದುಗೊಳಿಸಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ನೀಡಿದ್ದು ರಾಯಚೂರಿನಲ್ಲಿ ವಿಮಾನ ನಿಲ್ದಾಣ ಮಾಡಲಾಗುತ್ತದೆ. ಮೆಣಸಿನಕಾಯಿ ಪಾರ್ಕ್ ಹಾಗೂ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅನುದಾನ ನೀಡಲಿದೆ. ಇತಿಹಾಸದಲ್ಲಿಯೇ ಇಷ್ಟೊಂದು ಅನುದಾನ ಜಿಲ್ಲೆಗೆ ದೊರೆತಿಲ್ಲ. ಕೇಂದ್ರ ಸರ್ಕಾರ ಮಹಾತ್ವಾಂಕ್ಷೆ ಜಿಲ್ಲೆಯಂದು ರಾಯಚೂರನ್ನು ಗುರುತಿಸಿದ್ದರೂ ಯಾವುದೇ ಅನುದಾನ ನೀಡಿಲ್ಲ. ಏಮ್ಸ್ ಮಂಜೂರಾತಿಯಲ್ಲಿಯೂ ಅನ್ಯಾಯ ಮಾಡಲು ಹೊರಟಿದೆ. ಪ್ರಧಾನ ಮಂತ್ರಿಗಳ ಗ್ಯಾರಂಟಿ ಯೋಜನೆಗಳು ಜಾರಿಯಾಗುತ್ತಿಲ್ಲ. ಏಮ್ಸ್ ಮಂಜೂರಾತಿಗಾಗಿ ಸರ್ಕಾರ ನಿರಂತರ ಪ್ರಯತ್ನ ಮುಂದುವರಿಸಿದೆ ಎಂದರು.
ಒಪೆಕ್ ಆಸ್ಪತ್ರೆ ಖಾಸಗಿಯವರೊಂದಿಗೆ ಸೇರಿ ನಿರ್ವಹಣೆ ಮಾಡಲು ಮಾತುಕತೆ ನಡೆಯತ್ತಿದ್ದು ಸಂಸ್ಥೆಯೊಂದು ಮುಂದೆ ಬಂದಿದೆ. ಶೀಘ್ರದಲ್ಲಿ ಒಪೆಕ್ ಅತ್ಯಾಧುನಿಕ ಸೇವೆಗಳು ಎಪಿಎಲ್, ಬಿಪಿಎಲ್ ಕುಟುಂಬಗಳಿಗೆ ದೊರೆಯಲಿದೆ ಎಂದರು. ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆಯಿಲ್ಲ. ಎಲ್ಲರೂ ಸೇರಿ ಜಿಲ್ಲೆ ಅಭಿವೃದ್ದಿಗೆ ಒತ್ತು ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಹ್ಮದ ಶಾಲಂ, ರವಿ ಪಾಟೀಲ್, ನರಸಿಂಹಲು ಮಾಡಗಗಿರಿ, ಜಿಂದಪ್ಪ, ಆಂಜಿನೇಯ್ಯ ಕುರುಬದೊಡ್ಡ, ಚಂದ್ರಶೇಖರ ಪೋಗಲ್, ಯು.ಗೋವಿಂದ ರೆಡ್ಡಿ, ಬಿ. ರಮೇಶ್ ಉಪಸ್ಥಿತರಿದ್ದರು.
