ಕಲಬುರಗಿ ಜಿಲ್ಲೆಯ ಆಳಂದ ತಾಲೂಕು ನಿಂಬರ್ಗಾ ಗ್ರಾಮದಲ್ಲಿ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗುತ್ತಿದ್ದು, ಗ್ರಾಮಸ್ಥರಲ್ಲಿ ಅನಾರೋಗ್ಯದ ಆತಂಕ ಎದುರಾಗಿದ್ದು, ಸ್ಥಳೀಯ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮದ ಬಹುತೇಕ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ, ಗಬ್ಬು ವಾಸನೆ ಉಂಟಾಗಿದೆ. ಇನ್ನೂ ಕೆಲವಡೆ ಚರಂಡಿಯ ಹೂಳುತೆಗೆಯದೇ ಚರಂಡಿಗಳು ಮುಚ್ಚಿವೆ. ಇದರಿಂದಾಗಿ ಕೊಳಚೆ ನೀರು ಎಲ್ಲೆಂದರಲ್ಲಿ ಸಂಗ್ರಹವಾಗುತ್ತಿದ್ದು, ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರಿಂದ ಸಾಂಕ್ರಾಮಿಕ ರೋಗ ಹರುಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.
ಊರಿನ ಎಲ್ಲಾ ಚರಂಡಿ ನೀರುಬಂದು ವಾರ್ಡ್ ನಂಬರ್ ಒಂದು, ಜೈಭೀಮ್ ನಗರದ ಕುಡಿಯುವ ನೀರಿನ ಪೈಪ್ ಸುತ್ತಮುತ್ತ ಮಡುಗಟ್ಟಿ ನಿಲ್ಲುತ್ತದೆ. ಅದೇ ಪೈಪ್ ಲೈನ್‌ನಿಂದ ಕುಡಿಯುವ ನೀರು ಸರಬರಾಜಾಗುತ್ತದೆ. ಇದೇ ನೀರನ್ನು ವಾರ್ಡ್‌ನ ಜನ ಸೇವಿಸುತ್ತಾರೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಾಂತಿಭೇದಿ, ಕಾಲರಾದಂತ ಸಾಂಕ್ರಾಮಿಕ ರೋಗಗಳು ಹರಡಬಹುದು ಭೀತಿ ಇದೆ ಎನ್ನುತ್ತಾರೆ ಸ್ಥಳೀಯರು.
ಇನ್ನು, ಮಳೆಗಾಲದಲ್ಲಿ ಮೌಲಾ ನಗರದ ಚರಂಡಿ ನೀರು ಮನೆಗಳಿಗೆ ನುಗ್ಗುತ್ತದೆ. ಇದರಿಂದ ಅಲ್ಲಿಯ ನಿವಾಸಿಗಳು ತುಂಬಾ ತೊಂದರೆ ಅನುಭವಿಸುತ್ತಾರೆ. ಈ ಕುರಿತು ಹಲವು ಬಾರಿ ಗ್ರಾಮ ಪಂಚಾಯತಿಗೆ ಮನವಿ ಪತ್ರ ಸಲ್ಲಿಸಿದರು, ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸೇರ್ವೋದಯ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ್ ಆರೋಪಿಸುತ್ತಾರೆ.
ಈ ಕೊಳಚೆ ನೀರಿನಿಂದ ಅನೇಕ ಬಾರಿ ಹಲವು ಕುಟುಂಬಗಳಲ್ಲಿ ಅನಾರೋಗ್ಯ ಸಮಸ್ಯೆ ಎದುರಿಸಿವೆ. ಕೊಳಚೆ ನೀರು, ಸ್ವಚ್ಛತೆಯೇ ಕಾರಣ ಗ್ರಾಮ ಇದನ್ನೇಲ್ಲಾ ನೋಡದೇ ಪಂಚಾಯಿತಿ ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಷ್ಟು ಬೇಗ ಸಮಸ್ಯೆ ಅರಿತು ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.