ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬನನ್ನು ವಿವಸ್ತ್ರಗೊಳಿಸಿ, ಸೀಲಿಂಗ್‌ಗೆ ತಲೆ ಕೆಳಗಾಗಿ ನೇತುಹಾಕಿ, ಬೆಲ್ಟ್ ಮತ್ತು ದೊಣ್ಣೆಗಳಿಂದ ಥಳಿಸಲಾಗಿದೆ. ಫೆಬ್ರವರಿ 13ರ ಮಂಗಳವಾರ ದುರ್ಘಟನೆಯ ವಿಡಿಯೋ ವೈರಲ್ ಆಗಿದ್ದು, ಬಳಿಕ ಸಂತ್ರಸ್ತ ವ್ಯಕ್ತಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಹೆಸರಿಸಲಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ, ನವೆಂಬರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಮಧ್ಯಪ್ರದೇಶ ಪೊಲೀಸರು ಹೇಳಿದ್ದಾರೆ. ಆಹಾರದ ಅಂಗಡಿಯನ್ನು ನಡೆಸುತ್ತಿರುವ ಸಂತ್ರಸ್ತ, ಹಲ್ಲೆಯಿಂದ ಭಯಗೊಂಡಿದ್ದರು. ಹೀಗಾಗಿ, ಅವರು ದೂರು ದಾಖಲಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. “ಈಗ ನಾನು ವೀಡಿಯೊ ವೈರಲ್ ಆಗುತ್ತಿರುವುದನ್ನು ನೋಡಿದೆ. ಭಯಬಿಟ್ಟು, ದೂರು ಸಲ್ಲಿಸುವುದು ಮುಖ್ಯವೆಂದು ಭಾವಿಸಿ, ದೂರು ನೀಡಿದ್ದೇನೆ” ಎಂದು ಸಂತ್ರಸ್ತ ವ್ಯಕ್ತಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
“ಸಮೀಪದಲ್ಲಿ ಕೆಲವರು ಹಸು ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ. ನಾನು ಅವರಿಂದ ಹಣ ಪಡೆದು, ಅವರ ಕೃತ್ಯಕ್ಕೆ ಸಹಾಯ ಮಾಡುತ್ತಿದ್ದೇನೆಂದು ಭಾವಿಸಿ ನನಗೆ ದುಷ್ಟರ ಗುಂಪು ನನ್ನ ಮೇಲೆ ಹಲ್ಲೆ ನಡೆಸಿದೆ. ಕಳ್ಳಸಾಗಾಣಿಕೆಯಲ್ಲಿ ನಾನು ಭಾಗಿಯಾಗಿದ್ದೇನೆಂದು ಅವರು ಯಾಕೆ ಭಾವಿಸಿದರೂ ನನಗೆ ಗೊತ್ತಿಲ್ಲ” ಎಂದು ಸಂತ್ರಸ್ತ ಹೇಳಿದ್ದಾರೆ.
“ಇತ್ತೀಚೆಗಷ್ಟೇ ನನಗೆ ಪರಿಚಿತನಾಗಿದ್ದ ಗೆಳೆಯ ಸುತ್ತಾಡಿ ಬರೋಣವೆಂದು ನನ್ನನ್ನು ಬೆತುಲ್‌ಗೆ ಕರೆದೊಯ್ದಿದ್ದ. ಅವನ ಮಾತಿಗೆ ಒಪ್ಪಿ, ಆತನೊಂದಿಗೆ ನಾನು ಹೋಗಿದ್ದೆ. ಆದರೆ, ಆತ ನನ್ನನ್ನು ಹಲ್ಲೆಕೋರರ ಮನೆಗೆ ಕರೆದೊಯ್ದ. ಅಲ್ಲಿ, ಅವರು ನನ್ನನ್ನು ವಿವಸ್ತ್ರಗೊಳಿಸಿ, ತಲೆಕೆಳಗಾಗಿ ನೇತುಹಾಕಿದರು. ಬೆಲ್ಟ್ ಮತ್ತು ಕೋಲುಗಳಿಂದ ಹಲ್ಲೆ ಮಾಡಿದರು” ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.
ಸಂತ್ರಸ್ತ ವ್ಯಕ್ತಿ ಇಬ್ಬರು ಆರೋಪಿಗಳನ್ನು ಗುರುತಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ವೀಡಿಯೊ ವೈರಲ್ ಆದ ಬಳಿಕ, ನಾವು ಸಂತ್ರಸ್ತನನ್ನು ಹುಡುಕಿದೆವು. ಆತನ ಸ್ನೇಹಿತನೇ ಆತನನ್ನು ಆರೋಪಿಗಳ ಬಳಿಗೆ ಕರೆದೊಯ್ದಿದ್ದಾನೆ. ಅದು ಹಣಕ್ಕೆ ಸಂಬಂಧಿಸಿದ ಸಮಸ್ಯೆಗೆ ಸಂಬಂಧಿಸಿದ್ದಾಗಿದೆ. ನಾವು ಎಫ್‌ಐಆರ್ ದಾಖಲಿಸಿದ್ದೇವೆ. ನಾವು ಆರೋಪಿಗಳನ್ನು ಹುಡುಕುತ್ತಿದ್ದೇವೆ” ಎಂದು ಬೆತುಲ್ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಚೌಧರಿ ಹೇಳಿದ್ದಾರೆ.
ಇಬ್ಬರು ಆರೋಪಿಗಳನ್ನು ರಿಂಕೇಶ್ ಚೌಹಾಣ್ ಮತ್ತು ಚೈನ್ ಎಂದು ಹೆಸರಿಸಲಾಗಿದೆ.
ಬೇತುಲ್‌ನಲ್ಲಿಯೇ ಮತ್ತೊಂದು ದೌರ್ಜನ್ಯ ಪ್ರಕರಣ
ಬುಡಕಟ್ಟು ಜನಾಂಗದವರ ಮೇಲೆ ಹಲ್ಲೆ ನಡೆಸಿ ‘ಮುರ್ಗಾ’ (ಕೋಳಿ) ಭಂಗಿಯಲ್ಲಿ ಕೂರುವಂತೆ ಮಾಡಿದ್ದ ಘಟನೆ ಬೆತುಲ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು. ಆ ಘಟನೆಯ ವಿಡಿಯೋ ಕೂಡ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಸಂತ್ರಸ್ತನನ್ನು ಬಜರಂಗದಳದ ಮುಖಂಡ, ಆರೋಪಿ ಚಂಚಲ್ ರಜಪೂತ್ ಎಂಬಾತನ ಗುಂಪು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿತ್ತು ಎಂದು ವರದಿಯಾಗಿದೆ.
ಬುಡಕಟ್ಟು ಸಮುದಾಯದ ಮೇಲಿನ ದೌರ್ಜನ್ಯಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಸಂಸದ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ, ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. “ನಿಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಈ ಒಂದು ಘಟನೆ ಸಾಕು! ಜಂಗಲ್ ರಾಜ್ ಅನ್ನು ಮುಂದಿಟ್ಟುಕೊಂಡು ದೌರ್ಜನ್ಯ ನಡೆಸುತ್ತಿರುವ ‘ಅಪರಾಧಿಗಳು’ ಬಹಿರಂಗವಾಗಿ ಕಾನೂನು ಉಲ್ಲಂಘಿಸುತ್ತಿದ್ದಾರೆ! ಆದರೆ ನೀವು ಸಂಪೂರ್ಣವಾಗಿ ಮೌನವಾಗಿದ್ದೀರಿ!” ಎಂದು ಕಿಡಿಕಾರಿದ್ದಾರೆ.
#बैतूल में फिर आदिवासी युवक की पिटाई! पूरे कपड़े उतारकर पहले तो छत से उल्टा लटकाया, फिर बेल्ट-डंडों से जमकर पीटा!@DrMohanYadav51 जी,
– यह एक घटना ही गृहमंत्री के रूप में आपके इस्तीफे के लिए पर्याप्त है! जंगलराज से आगे निकलने की जंग लड़ते ‘अपराधी’ खुलेआम कानून को धूल चटा रहे… pic.twitter.com/UQ6NHFe6vS— Jitendra (Jitu) Patwari (@jitupatwari) February 14, 2024
“ಕೇವಲ ಆದಿವಾಸಿಗಳು ಯಾಕೆ ನಿಮ್ಮ ಗುರಿಯಾಗಿದ್ದಾರೆ ಎಂಬುದೇ ಪ್ರಶ್ನೆ. ಬುಡಕಟ್ಟು ಸಮುದಾಯದೊಂದಿಗೆ ನಿಮಗೆ ವೈಯಕ್ತಿಕ ರಾಜಕೀಯ ದ್ವೇಷವಿದೆಯೇ? ಅಥವಾ ವಂಚಿತ ವರ್ಗಕ್ಕೆ ಕಿರುಕುಳ ನೀಡುವ ಗುತ್ತಿಗೆಯನ್ನು ಬಿಜೆಪಿ ತೆಗೆದುಕೊಂಡಿದೆಯೇ?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.