ಎಂಪಿಎಂ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮುಖಾಂತರ ಇಲ್ಲಿಯ ಸಾರ್ವಜನಿಕರ ಹಾಗೂ ನೌಕರರ ಆರ್ಥಿಕ ಶಕ್ತಿಯನ್ನು ವೃದ್ಧಿಗೊಳಿಸಲು ಸಹಾಯ ಮಾಡಬೇಕು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಕೋರಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಮತ್ತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಜತೆಗೆ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಂಪಿಎಂ ಅಧಿಕಾರಿಗಳು ಮಾತನಾಡಿ, “ಭದ್ರಾವತಿಯ ಎಂಪಿಎಂ ಕಾರ್ಖಾನೆಯು 2015ರಲ್ಲಿ ಮುಚ್ಚಲ್ಪಟ್ಟಿದೆ. ಎಂಪಿಎಂ ಕಾರ್ಖಾನೆಯ ವ್ಯಾಪ್ತಿಯಲ್ಲಿ ಸುಮಾರು 20,000 ಹೆಕ್ಟೇರ್ ಭೂಮಿ ಗುತ್ತಿಗೆ ಆಧಾರದಲ್ಲಿದ್ದು, ಈ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಬೆಳೆಸಿದಲ್ಲಿ ಕಾರ್ಖಾನೆಗೆ ಬೇಕಾಗುವ ಮೂಲಾ ಕಚ್ಛಾ ವಸ್ತುವಿನ ಕೊರತೆ ನೀಗಿಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ನೀಲಗಿರಿ ಮರಗಳನ್ನು ಬೆಳೆಸುವುದಕ್ಕೆ ನಿಷೇಧ ಇರುವುದರಿಂದ ಸದರಿ ನಿಷೇಧವನ್ನು ತೆರವುಗೊಳಿಸುವ ಬಗ್ಗೆ ಒಂದು ತಜ್ಞರ ಸಮಿತಿಯನ್ನು ರಚಿಸಿ ಅವರಿಂದ ವರದಿ ಪಡೆದು ಮುಂದಿನ ಕ್ರಮ ವಹಿಸುವುದಾಗಿ ತೀರ್ಮಾನಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಯಾವುದೇ ಚಟುವಟಿಕೆಯಿಲ್ಲದೆ ಮದ್ಯಪಾನಿಗಳ ತಾಣವಾದ ಗಾಂಧಿ ಭವನ
ವಿಡಿಯೋ ಸಂವಾದದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಸುಧಾಕರ್ ಸ್ನೇಹನ್ ಲೋಕಂಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಹಾಗೂ ಎಂಪಿಎಂ ಅಧಿಕಾರಿ ವರ್ಗದವರು ಸೇರಿದಂತೆ ಭದ್ರಾವತಿ ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಗಮೇಶ್ ಇದ್ದರು.