ತಮಿಳುನಾಡಿನಲ್ಲಿ ‘ಇಂಡಿಯಾ’ ಮೈತ್ರಿಕೂಟದೊಂದಿಗೆ ಮಾತುಕತೆ ನಡೆಯುತ್ತಿದೆ. ಆದರೆ, ಮೈತ್ರಿಕೂಟಕ್ಕೆ ಸೇರುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಸಂಸ್ಥಾಪಕ, ನಟ ಕಮಲ್ ಹಾಸನ್ ಹೇಳಿದ್ದಾರೆ.
ಎಂಎನ್‌ಎಂನ ಏಳನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. “ನಿಸ್ವಾರ್ಥ ಕೆಲಸ ಮಾಡುವ ಯಾರೊಂದಿಗಾದರೂ ಕೈಜೋಡಿಸಲು ಪಕ್ಷವು ಸಿದ್ಧವಿದೆ. ಆದರೆ, ನಾವು ಸ್ಥಳೀಯ ಊಳಿಗಮಾನ್ಯ ರಾಜಕೀಯದಲ್ಲಿ ಪಾಲ್ಗೊಳ್ಳುವ ಯಾರನ್ನೂ ಬೆಂಬಲಿಸುವುದಿಲ್ಲ” ಎಂದು ಹೇಳಿದರು.
ಇಲ್ಲಿಯವರೆಗೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ದೂರ ಉಳಿದಿರುವ ನಟ, ಇದೀಗ, ‘ಇಂಡಿಯಾ’ ಒಕ್ಕೂಟದ ಭಾಗವಾಗಿರುವ ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಜೊತೆ ಸ್ನೇಹ ಸಂಬಂಧ ಬೆಳೆಸಿಕೊಂಡಿದ್ದಾರೆ.
2023ರ ಈರೋಡ್ ಉಪಚುನಾವಣೆಯಲ್ಲಿ, ಕಮಲ್ ಹಾಸನ್ ಅವರು ಡಿಎಂಕೆ-ಕಾಂಗ್ರೆಸ್ ಸಮ್ಮಿಶ್ರ ಅಭ್ಯರ್ಥಿ, ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಮಾಜಿ ಅಧ್ಯಕ್ಷ ಇವಿಕೆಎಸ್ ಇಳಂಗೋವನ್ ಪರವಾಗಿ ಪ್ರಚಾರ ಮಾಡಿದ್ದರು.
ಹಾಸನ್ ಅವರು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸ್ನೇಹಿತರೂ ಆಗಿದ್ದಾರೆ. ಅವರು ಕಳೆದ ವರ್ಷ ಚೆನ್ನೈನಲ್ಲಿ ಸ್ಟಾಲಿನ್ ಅವರ ಹುಟ್ಟುಹಬ್ಬದ ಅಂಗವಾಗಿ ನಡೆದ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ್ದರು.
2021ರಲ್ಲಿ ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಹಾಸನ್ ಬಿಜೆಪಿಯ ವನತಿ ಶ್ರೀನಿವಾಸನ್ ವಿರುದ್ಧ 1,540 ಮತಗಳ ಕಡಿಮೆ ಅಂತದಿಂದ ಸೋತಿದ್ದರು. ತಮ್ಮ ಸೋಲಿನ ಬಗ್ಗೆ ಮಾತನಾಡಿರುವ ಕಮಲ್ ಹಾಸನ್, “ನಾನು ಕೊಯಮತ್ತೂರು ಕ್ಷೇತ್ರದಲ್ಲಿ ಗೆಲ್ಲುವಲ್ಲಿ ವಿಫಲನಾಗಿದ್ದೇನೆ ಎಂದು ನಾನು ಭಾವಿಸುವುದಿಲ್ಲ. ಆದರೆ, ಆ ದಿನ 90,000 ಜನರು ಮತದಾನ ಮಾಡಲು ಬರಲಿಲ್ಲ. ನಿಜವಾದ ವಿಚಾರವೆಂದರೆ ಅದು. ಅವರು ಏಕೆ ಮತ ಹಾಕಲಿಲ್ಲ ಎಂದು ನಾವು ಅವರನ್ನು ಕೇಳಬೇಕು,” ಎಂದು ಎಂದರು.