ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಚರ್ಚೆಯ ನಡುವೆ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , “ಸರ್ವಪಕ್ಷದ ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ” ಎಂದು ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ಬಳಿಕ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಸ್ಥಾನಕ್ಕೆ ವಿಜಯಪುರ ಶಾಸಕ ಭಾರೀ ಕಸರತ್ತು ನಡೆಸಿದ್ದರು. ಆದರೆ ವಿಪಕ್ಷ ನಾಯಕನನ್ನಾಗಿ ಆರ್ ಅಶೋಕ್ ಅವರನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದರೆ, ಬಿ ವೈ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿತ್ತು. ಆ ಬಳಿಕ ಪಕ್ಷದ ವಿರುದ್ಧವೇ ಶಾಸಕ ಯತ್ನಾಳ್ ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು.
ಇಂದು ನಡೆದ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಉದ್ದೇಶಿಸಿ, “ಈ ಸರ್ಕಾರ ಬಂದು ಒಂಬತ್ತು ತಿಂಗಳಾಯಿತು. ಆದರೂ ಶೇ.40ರಷ್ಟು ಕಮಿಷನ್ ತನಿಖೆ ಪೂರ್ಣಗೊಳಿಸಿಲ್ಲ. ಪಿಎಸ್‍ಐ ಹಗರಣದ ತನಿಖೆ ಕೂಡ ಪೂರ್ಣಗೊಂಡಿಲ್ಲ” ಎಂದು ಹೇಳಿಕೆ ನೀಡಿದರು.
ಈ ವೇಳೆ ಎದ್ದು ನಿಂತ ಸಚಿವ ಪ್ರಿಯಾಂಕ್ ಖರ್ಗೆ, “ಬಹಿರಂಗವಾಗಿ ಹೇಳಿಕೆ ನೀಡಿದ್ದ ಯತ್ನಾಳ್ ಅವರು ಪಿಎಸ್‍ಐ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ವೀರಪ್ಪ ಆಯೋಗದ ಮುಂದೆ ಹೇಳಿಕೆ ನೀಡಿಲ್ಲ. ನಾವು ನಿಮ್ಮ ಹೇಳಿಕೆ ಕಾಯುತ್ತಿದ್ದೇವೆ. ತನಿಖೆಗೆ ನಿಮ್ಮ ಸಹಕಾರ ಬೇಕಿದೆ. ಯತ್ನಾಳ್ ಸಾಹೇಬ್ರು ಕೋಆಪರೇಟ್ ಮಾಡಿದ್ರೆ ವಾರದಲ್ಲಿ ಮುಗಿಸ್ತೀವಿ” ಎಂದು ಟಾಂಗ್ ನೀಡಿದರು.
“ಇನ್ನು ಶೇ.40ರಷ್ಟು ಹಗರಣದಲ್ಲಿ ಎಷ್ಟು ನುಂಗಿದ್ದಾರೆ ಎಂದರೆ, ಅದರ ಆಳ ಅಗಲವೇ ಗೊತ್ತಾಗುತ್ತಿಲ್ಲ. ಎಂದು ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್, “ಈ ಸರ್ಕಾರ ಬಂದಾಗ ಶುರುವಾಗಿರುವ ಶೇ.40ರಷ್ಟು ಕಮಿಷನ್ ಬಗ್ಗೆಯೂ ತನಿಖೆಯಾಗಬೇಕು. ಸಿಬಿಐಗೆ ವಹಿಸಿ ಎಂದರು. ಆಗ ಕಾಂಗ್ರೆಸ್ ಶಾಸಕರು ಯತ್ನಾಳ್ ಅವರನ್ನು ಕೆಣಕಿದರು. ಈ ವೇಳೆ, “ಸರ್ವಪಕ್ಷದ ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ ” ಎಂದು ಯತ್ನಾಳ್ ಹೇಳಿಕೆ ನೀಡಿ, ಕುಳಿತು ಬಿಟ್ಟರು.
ಮಲ್ಲಿಕಾರ್ಜುನ ಖರ್ಗೆಯವರೇ ಬಿಜೆಪಿಗೆ ಬರುವ ಸಾಧ್ಯತೆ ಇದೆ ಎಂದ ಯತ್ನಾಳ್
ಇದೇ ವೇಳೆ ಯತ್ನಾಳ್, “ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.
“ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಕಾಂಗ್ರೆಸ್ ನ ಕಮಲ್ ನಾಥ್ ಬಿಜೆಪಿಗೆ ಬರುತ್ತಿದ್ದಾರೆ. ಮುಂದೆ ಮತ್ತಷ್ಟು ಮಂದಿ ಬರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿಗೆ ಬರುತ್ತಾರೆ” ಎಂದರು.
ಆಗ ಸಚಿವ ಪ್ರಿಯಾಂಕ್ ಖರ್ಗೆ, “ನಮ್ಮ ಹೆಣ ಕೂಡ ಬಿಜೆಪಿಗೆ ಹೋಗಲ್ಲ. ಅದು ನಮ್ಮ ರಕ್ತದಲ್ಲೇ ಇಲ್ಲ. ಸಂವಿಧಾನ ಹೇಗೆ ನಿಮ್ಮ ರಕ್ತದಲ್ಲಿ ಇಲ್ಲವೋ ಹಾಗೇ, ಆರ್ ಎಸ್ ಎಸ್ ನಮ್ಮ ರಕ್ತದಲ್ಲಿ ಇಲ್ಲ ಎಂದರು. ಯತ್ನಾಳ್, ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡುತ್ತಿರುವುದು ನಾವೇ ಎಂದು ಸಮರ್ಥಿಸಿಕೊಂಡರು. ಪ್ರಿಯಾಂಕ್ ಖರ್ಗೆ, ನೀವು ಹೇಗೆ ಸಂವಿಧಾನ ಸರಿಯಾಗಿ ಜಾರಿ ಮಾಡಿದ್ದೀರಾ ಸರ್, ಒಂದು ಧರ್ಮಕ್ಕೆ ಮಾತ್ರ ಆದ್ಯತೆ ನೀಡುವುದು ಸಂವಿಧಾನ ಬದ್ಧವೇ ಎಂದು ಪ್ರಶ್ನಿಸಿದರು.
