ತನ್ನ ಕೂದಲು ವಿನ್ಯಾಸದ ಕಾರಣಕ್ಕಾಗಿ ಕಪ್ಪು ವರ್ಣೀಯ ವಿದ್ಯಾರ್ಥಿಗೆ ಹೈಸ್ಕೂಲ್‌ನಲ್ಲಿ ಶಿಕ್ಷಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ತನ್ನನ್ನು ಶಿಕ್ಷಿಸಿದ ಶಾಲೆಯ ವಿರುದ್ಧ 18 ವರ್ಷದ ವಿದ್ಯಾರ್ಥಿ ಡ್ಯಾರಿಲ್ ಜಾರ್ಜ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯವು ಆತನ ವಿರುದ್ಧ ಶಾಲೆಯು ತೆಗೆದುಕೊಂಡ ಶಿಸ್ತು ಕ್ರಮವನ್ನು ಎತ್ತಿಹಿಡಿದಿದೆ.
ಜಾರ್ಜ್ ತನ್ನ ಕೂದಲನ್ನು ಹಗ್ಗದ ರೀತಿಯಲ್ಲಿ ಎಳೆಗಳಾಗಿ ಎಣೆದುಕೊಂಡು, ಅದಕ್ಕೆ ಪಿನ್ ಮಾಡಿಕೊಂಡಿದ್ದರು. ಆತನ ಕೂದಲಿನ ಶೈಲಿಯು ಶಾಲೆಯ ಡ್ರೆಸ್ ಕೋಡ್‌ಅನ್ನು ಉಲ್ಲಂಘಿಸುತ್ತದೆ ಎಂದು ಆತನ ವಿರುದ್ಧ ಬಾರ್ಬರ್ಸ್ ಹಿಲ್ ಹೈಸ್ಕೂಲ್ ಕ್ರಮ ಕೈಗೊಂಡಿತ್ತು. ಆತನನ್ನು ಆಗಸ್ಟ್‌ನಿಂದಲೂ ಆತನ ಸಹಪಾಠಿಗಳಿಂದ ಬೇರ್ಪಡಿಸಿ, ಕೂರಿಸಲಾಗುತ್ತಿತ್ತು.
“ಆತನ ಕೂದಲು ಟಿ-ಶರ್ಟ್ ಕಾಲರ್, ಕಣ್ಣು ಹುಬ್ಬು ಹಾಗೂ ಕಿವಿಯೋಲೆಗಳ ಕೆಳಭಾಗದವರೆಗೆ ಉದ್ದವಾಗಿತ್ತು. ಆತನ ಕೂದಲಿನ ಶೈಲಿಯು ವಸ್ತ್ರ ಸಂಹಿತೆಗೆ ವಿರುದ್ಧವಾಗಿದೆ” ಎಂದು ಶಾಲೆಯು ಹೇಳಿದೆ.
ಆತನ ಪರವಾಗಿ ವಾದ ಮಂಡಿಸಿದ ವಕೀಲರು, “ವಿದ್ಯಾರ್ಥಿಯ ಕೇಶವಿನ್ಯಾಸವು ಟೆಕ್ಸಾಸ್ ಕ್ರೌನ್ ಆಕ್ಟ್ ಎಂಬ ಕಾನೂನಿನಿಂದ ರಕ್ಷಣೆ ಪಡೆಯುತ್ತದೆ. ವಿದ್ಯಾರ್ಥಿಯ ಜನಾಂಗದ ಸಾಮಾನ್ಯವಾಗಿ ಅಥವಾ ಐತಿಹಾಸಿಕ ಕೇಶವಿನ್ಯಾಸವು ಇದೇ ರೀತಿ ಇರುತ್ತದೆ. ಹೀಗಾಗಿ, ಶಾಲೆಯಲ್ಲಿ ಆತ ಕೂದಲಿನ ವಿನ್ಯಾಸದ ವಿರುದ್ಧ ತಾರತಮ್ಯ ಮಾಡಬಾರದು” ಎಂದು ವಾದಿಸಿದ್ದರು. ಆದರೆ, ಶಾಲೆಯು ತಾರತಮ್ಯದ ಆರೋಪವನ್ನು ನಿರಾಕರಿಸಿತ್ತು.
ಈ ಸುದ್ದಿ ಓದಿದ್ದೀರಾ?: ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ: ಪ್ರಧಾನಿ ಮೋದಿ
ವಾದವನ್ನು ಆಲಿಸಿದ ನ್ಯಾಯಾಲಯ, “ಬಾರ್ಬರ್ಸ್ ಹಿಲ್ ಶಾಲೆಯ ನಿಮಯಗಳು ಟೆಕ್ಸಾಸ್ ಕ್ರೌನ್ ಆಕ್ಟ್‌ಅನ್ನು ಉಲ್ಲಂಘಿಸುವುದಿಲ್ಲ” ಎಂದು ಹೇಳಿದೆ. ಶಾಲೆಯ ಶಿಸ್ತು ಕ್ರಮವನ್ನು ಎತ್ತಿಹಿಡಿದಿದೆ.
ಪ್ರಕರಣದ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಜಾರ್ಜ್, “ಎಲ್ಲವೂ ನನ್ನ ಕೂದಲಿನಿಂದಾಗಿ? ಕೂದಲಿನ ಕಾರಣಕ್ಕಾಗಿ ನಾನು ಶಿಕ್ಷಣ ಪಡೆಯಲು ಸಾಧ್ಯವಿಲ್ಲವೇ? ನಾನು ಇತರ ಗೆಳೆಯರೊಂದಿಗೆ ಸೇರಲು ಮತ್ತು ವಿದ್ಯಾರ್ಥಿ ಜೀವನವನ್ನು ಆನಂದಿಸಲು ಸಾಧ್ಯವಿಲ್ಲವೇ. ಇದಕ್ಕೆಲ್ಲ ನನ್ನ ಕೂದಲು ಕಾರಣವೇ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.