ಚೀನಾದ ಸುಝೌ ನಗರದ ಹಿಮಾವೃತ ಎಕ್ಸ್‌ಪ್ರೆಸ್‌ವೇನಲ್ಲಿ 100ಕ್ಕೂ ಹೆಚ್ಚು ಕಾರುಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಚೀನಾದ ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.
ಹವಾಮಾನ ವೈಪರೀತ್ಯದಿಂದ, ಮಂಜು ಕವಿದು ಸರಣಿ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ರಾಜ್ಯ ಟೆಲಿವಿಷನ್ ಸಿಸಿಟಿವಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ವಿಡಿಯೋ ತುಣುಕು ವೈರಲ್ ಆಗಿದ್ದು, ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಒಟ್ಟಿಗೆ ನಿಂತಿರುವ ಹಲವಾರು ಕಾರುಗಳು, ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಗಾಜು ಹಾಗೂ ಕಾರಿನ ಅವಶೇಷಗಳು ವಿಡಿಯೋದಲ್ಲಿ ಕಂಡುಬಂದಿವೆ.
ಕಳೆದ ಕೆಲವು ವಾರಗಳಲ್ಲಿ, ಚೀನಾದ ಹಲವಾರು ಭಾಗಗಳು ಶೀತ ಅಲೆಗಳು, ಹಿಮಪಾತಗಳು ಮತ್ತು ಮಂಜುಗಡ್ಡೆಯ ಮಳೆಗೆ ತುತ್ತಾಗಿವೆ. ಈ ಸಮಯದಲ್ಲಿ ಲಕ್ಷಾಂತರ ಜನರು ಹೊಸ ವರ್ಷದ ರಜಾದಿನಗಳ ಕಾರಣದಿಂದಾಗಿ ತಮ್ಮೂರುಗಳಿಗೆ ಧಾವಿಸುತ್ತಿದ್ದಾರೆ.
ಚೀನಾದ ಬೀಜಿಂಗ್, ಹೆಬೈ, ಶಾಂಕ್ಸಿ, ಅನ್ಹುಯಿ ಮತ್ತು ಹುಬೈ ಸೇರಿದಂತೆ ಹಲವು ಪ್ರಾಂತ್ಯಗಳು ಮತ್ತು ನಗರಗಳಲ್ಲಿ ಹಿಮಪಾತ ಹೆಚ್ಚಾಗಿದೆ ಎಂದು ವರಿದಿಯಾಗಿದೆ.