“ಇಂಡಿಯಾ ಒಕ್ಕೂಟದಲ್ಲಿ ಎಎಪಿ-ಕಾಂಗ್ರೆಸ್ ನಡುವೆ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಯಶಸ್ವಿಯಾದ ಬೆನ್ನಲ್ಲೇ, ಕೇಂದ್ರ ಸರ್ಕಾರ ಸಿಬಿಐ ಮೂಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಸಂಚು ರೂಪಿಸಿದೆ” ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕ ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಸುಮಾರು ಎರಡು ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಸಂಚು ರೂಪಿಸುತ್ತಲೇ ಇದೆ. ಆಮ್ ಆದ್ಮಿ ಪಾರ್ಟಿ ಮುಖಂಡರ ಮನೆಗಳ ಮೇಲೆ ನೂರಾರು ಬಾರಿ ಸಿಬಿಐ ಮತ್ತು ಇಡಿ ದಾಳಿ ಮಾಡಿಸಲಾಗಿದೆ. ಆದರೆ, ಒಂದು ರೂಪಾಯಿ ಕೂಡ ಅಕ್ರಮ ಹಣ ಸಿಕ್ಕಿಲ್ಲ” ಎಂದರು.
“ಸಿಬಿಐ ಕರೆದಾಗಲೆಲ್ಲಾ ಅರವಿಂದ್ ಕೇಜ್ರಿವಾಲ್ ಉತ್ತರ ನೀಡಿದ್ದಾರೆ. ಜಾರಿ ನಿರ್ದೇಶನಾಲಯದಿಂದ ಎರಡು ತಿಂಗಳಲ್ಲಿ 7 ಸಮನ್ಸ್ ನೀಡಲಾಗಿದೆ. ಕೇಜ್ರಿವಾಲ್ ಎಲ್ಲ ಸಮನ್ಸ್‌ಗಳಿಗೂ ಉತ್ತರಿಸಿದ್ದಾರೆ. ಈ ಸಮನ್ಸ್‌ಗಳು ಬಿಜೆಪಿ ಕಚೇರಿಯಿಂದ ತಯಾರಾಗುತ್ತಿವೆ. ಇಡಿ ಕೋರ್ಟ್ ಮೆಟ್ಟಿಲೇರಿದ್ದು, ಮಾರ್ಚ್ 16ರಂದು ನಡೆಯುವ ವಿಚಾರಣೆವರೆಗೂ ಕೇಜ್ರಿವಾಲ್ ಬಂಧನ ಸಾಧ್ಯವಿಲ್ಲ. ಈ ವಿಚಾರ ತಿಳಿದ ನಂತರ, ಸಿಬಿಐ ಅನ್ನು ದಾಳವಾಗಿ ಬಳಸಿಕೊಂಡು ಬಂಧಿಸುವ ಷಡ್ಯಂತ್ರ ರೂಪಿಸಲಾಗಿದೆ” ಎಂದರು.
“ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವುದಿಲ್ಲ, ನಾವು ಸುಲಭವಾಗಿ 400 ಸೀಟು ಗೆಲ್ಲಬಹುದು ಎಂದು ಪ್ರಧಾನಿ ಮೋದಿ ಭ್ರಮೆಯಲ್ಲಿದ್ದರು. ಆದರೆ, ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಮಾತುಕತೆ ಕೊನೆಯ ಹಂತ ತಲುಪಿದ್ದು, ದೇಶದ 6 ರಾಜ್ಯಗಳಲ್ಲಿ ಕಾಂಗ್ರೆಸ್-ಎಎಪಿ ಜೊತೆಯಾಗಿರುವುದು ಬಿಜೆಪಿ ನಿದ್ದೆಗೆಡಿಸಿದೆ. ಇಂಡಿಯಾ ಒಕ್ಕೂಟದಿಂದ ಹೊರಬಂದರೆ ಎಲ್ಲ ಕೇಸುಗಳನ್ನು ರದ್ದು ಮಾಡುವ ಜೊತೆ, ಬಂಧಿಸಿರುವ ಎಎಪಿ ನಾಯಕರನ್ನು ಬಿಡುಗಡೆ ಮಾಡುವುದಾಗಿ ಬಿಜೆಪಿ ಹೇಳುತ್ತಿದೆ” ಎಂದು ತಿಳಿಸಿದರು.
“ಪ್ರಜಾಪ್ರಭುತ್ವ, ಸಂವಿಧಾನವನ್ನು ಉಳಿಸಲು ಇಂಡಿಯಾ ಒಕ್ಕೂಟ ರಚನೆಯಾಗಿದ್ದು, ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸುವುದು ಖಚಿತ. ಬಿಜೆಪಿ ಸಾಮ್ರಾಜ್ಯ ಪತನವಾಗುವ ಸಮಯ ಹತ್ತಿರ ಬಂದಿದೆ. ಇಂಡಿಯಾ ಒಕ್ಕೂಟದ ಗೆಲುವನ್ನು ಸಹಿಸದೆ ಬಿಜೆಪಿ ವಿಪಕ್ಷದ ನಾಯಕರನ್ನು ಹತ್ತಿಕ್ಕಲು ನೋಡುತ್ತಿದೆ. ಬಿಜೆಪಿ ಸರ್ವಾಧಿಕಾರಿ ಮಾದರಿ ಆಡಳಿತ ನಡೆಸುತ್ತಿದ್ದು, ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂದರು.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
“ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಎನ್ನುವುದು ಚಂಡೀಗಢ ಮೇಯರ್ ಚುನಾವಣೆಯಲ್ಲಿ ಸಾಬೀತಾಗಿದೆ. ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಚುನಾವಣಾ ಫಲಿತಾಂಶ ಪ್ರಕಟಿಸಿದೆ. ಎಎಪಿಯ ಕುಲದೀಪ್ ಮೇಯರ್ ಆಗಿದ್ದಾರೆ. ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಹೊರಟಿರುವ ಬಿಜೆಪಿ ವಿರುದ್ಧ ಫೆಬ್ರುವರಿ 24ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ” ಎಂದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಖಜಾಂಚಿ ಪ್ರಕಾಶ್ ಮಾತನಾಡಿ, “ಇಂಡಿಯಾ ಒಕ್ಕೂಟವನ್ನು ಮುಗಿಸಲು ಕೇಂದ್ರ ಸರ್ಕಾರ ಸಿಬಿಐ, ಇಡಿ ಸಂಸ್ಥೆಗಳನ್ನು ಬಳಸುತ್ತಿದೆ. ಬಿಜೆಪಿ ಬೆದರಿಕೆಗೆ ನಾವು ಇಂಡಿಯಾ ಒಕ್ಕೂಟ ತೊರೆಯುವುದಿಲ್ಲ. ಹಲವು ಎಕ್ಸ್ ಖಾತೆಗಳನ್ನು ಬ್ಲಾಕ್ ಮಾಡುತ್ತಿದ್ದು, ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ಇದನ್ನೆಲ್ಲಾ ವಿರೋಧಿಸಿ ಶನಿವಾರ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ ಹಮ್ಮಿಕೊಂಡಿದೆ” ಎಂದರು.
ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮಾತನಾಡಿ, “ಆಪರೇಷನ್ ಕಮಲ ಎನ್ನುವ ಅನೈತಿಕ ಮಾರ್ಗದಿಂದ ಬಿಜೆಪಿ ಅನೇಕ ರಾಜ್ಯಗಳಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ. ಇಡಿ, ಸಿಬಿಐ ಬಳಸಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಿದ್ದಾರೆ. ಅರವಿಂದ್ ಕೇಜ್ರಿವಾಲ್‌ರನ್ನು ಬಂಧಿಸಿದರೆ ಅದರ ಪರಿಣಾಮವನ್ನು ಬಿಜೆಪಿ ಸರ್ಕಾರ ಎದುರಿಸಬೇಕಾಗುತ್ತದೆ. ರೈತರನ್ನು ದೆಹಲಿಯೊಳಗೆ ಬಿಡದೆ ಅವಮಾನ ಮಾಡಿದ್ದೀರಾ, ಬಿಜೆಪಿಗೆ ಅಂತ್ಯಕಾಲ ಸಮೀಪವಾಗಿದ್ದು, ಜನರೇ ಬುದ್ದಿ ಕಲಿಸಲಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ನಟ ದರ್ಶನ್ ವಿರುದ್ಧ ಮತ್ತೆರಡು ದೂರು ದಾಖಲು; ಕ್ಷಮೆ ಕೇಳಿದ ಶಫಿ
ಮಾಧ್ಯಮಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಸುರೇಶ್ ರಾಥೋಡ್, ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿಮಠ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.