ರಾಂಚಿಯ ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ ಜೋ ರೂಟ್ ಶತಕದ ನೆರವಿನಿಂದ ಮೊದಲ ದಿನದಾಂತ್ಯಕ್ಕೆ 90 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿದೆ.
ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹತ್ತನೇ ಓವರ್‌ನಲ್ಲಿ ಆರಂಭಿಕ ಆಟಗಾರ ಬೆನ್ ಡೆಕಟ್(11) ಅವರನ್ನು ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿಯೇ ವೇಗಿ ಆಕಾಶ್ ದೀಪ್ ಔಟ್ ಮಾಡಿದರು. ಭರವಸೆಯ ಆಟಗಾರ ಓಲಿ ಪೋಪ್ ಬ್ಯಾಟಿಂಗ್ ಆರಂಭಿಸಿದ ಕೂಡಲೇ ಆಕಾಶ್‌ದೀಪ್‌ಗೆ ಎಲ್‌ಬಿ ಆಗಿ ಪೆವಿಲಿಯನ್‌ಗೆ ತೆರಳಿದರು.
ಜೋರೂಟ್ ಅವರೊಂದಿಗೆ ಒಂದಷ್ಟು ಹೊತ್ತು ಆಟವಾಡಿದ ಜಾಕ್ ಕ್ರಾಲಿ 42 ರನ್ ಗಳಿಸಿದ್ದಾಗ ಆಕಾಶ್ ದೀಪ್‌ಗೆ ಬೌಲ್ಡ್ ಆದರು. ಒಂಚೂರು ಭರವಸೆ ಮೂಡಿಸಿದ ಜಾನಿ ಬೈರ್‌ಸ್ಟೋ 38 ರನ್ ಗಳಿಸಿ ಆರ್ ಅಶ್ವಿನ್‌ಗೆ ಎಲ್‌ಬಿ ಬಲೆಗೆ ಬಿದ್ದರು. ನಾಯಕ ಬೆನ್ ಸ್ಟೋಕ್ಸ್(3) ಹೆಚ್ಚು ಹೊತ್ತು ನಿಲ್ಲದೆ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು.
112 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಜೋರೂಟ್ ಹಾಗೂ ವಿಕೆಟ್ ಕೀಪರ್ ಬೆನ್ ಫೋಕ್ಸ್ ಅವರ 113 ರನ್‌ಗಳ ಜೊತೆಯಾಟ ಸಮಾಧಾನಕರ ಮೊತ್ತ ದಾಖಲಿಸಲು ನೆರವಾಯಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?
ಇದೇ ಸಂದರ್ಭದಲ್ಲಿ ಜೋರೂಟ್ ತಮ್ಮ ಕ್ರಿಕೆಟ್ ವೃತ್ತಿ ಜೀವನದ 31ನೇ ಶತಕ ಬಾರಿಸಿದರು. ರೂಟ್ ಅವರ ಶತಕ ಭಾರತದ ವಿರುದ್ಧ 10ನೇಯದಾಗಿದೆ. 226 ಚೆಂಡುಗಳನ್ನು ಎದುರಿಸಿದ ರೂಟ್ 9 ಬೌಂಡರಿಗಳನ್ನು ಲೀಲಾಜಾಲವಾಗಿ ಬಾರಿಸಿ 106 ರನ್‌ಗಳೊಂದಿಗೆ ಅಜೇಯರಾಗಿ ಉಳಿದಿದ್ದಾರೆ.
4 ಬೌಂಡರಿ, ಒಂದು ಸಿಕ್ಸರ್‌ನೊಂದಿಗೆ 47 ರನ್ ಗಳಿಸಿದ್ದ ಫೋಕ್ಸ್ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾಗೆ ಕ್ಯಾಚಿತ್ತು ಔಟಾದರು. ನಂತರ ಬಂದ ಟಾಮ್ ಹಾರ್ಟ್ಲಿ 13 ರನ್ ಗಳಿಸಿ ಸಿರಾಜ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ದಿನದಾಂತ್ಯದ ಕೊನೆಯಲ್ಲಿ 31 ರನ್ ಗಳಿಸಿರುವ ಓಲಿ ರಾಬಿನ್ಸನ್ ರೂಟ್ ಅವರೊಂದಿಗೆ ಆಟಗಾಡುತ್ತಿದ್ದಾರೆ.
ಚೊಚ್ಚಲ ಪಂದ್ಯದಲ್ಲಿಯೇ ವೇಗಿ ಆಕಾಶ್ ದೀಪ್ ಆಂಗ್ಲ ಪಡೆಯ ಮೊದಲ ಮೂವರು ಬ್ಯಾಟರ್‌ಗಳನ್ನು ಔಟ್ ಮಾಡಿ ನಡುಕ ಹುಟ್ಟಿಸಿದ್ದು ಕೂಡ ಮೊದಲ ದಿನದ ವಿಶೇಷವಾಗಿತ್ತು.
ಟೀಂ ಇಂಡಿಯಾ ಪರ ಆಕಾಶ್ ದೀಪ್ 70/3, ಆರ್ ಅಶ್ವಿನ್ 83/1, ರವೀಂದ್ರ ಜಡೇಜಾ 55/1 ಹಾಗೂ ಸಿರಾಜ್ 60/2 ವಿಕೆಟ್ ಕಬಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅಶ್ವಿನ್ 100 ವಿಕೆಟ್
ಜಾನಿ ಬೈರ್‌ಸ್ಟೋ ಅವರನ್ನು ಎಲ್‌ಬಿ ಬಲೆಗೆ ಕೆಡವುದರ ಮೂಲಕ ಸ್ಪಿನ್ನರ್ ಆರ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ ನೂರು ವಿಕೆಟ್‌ಗಳ ಸಾಧನೆ ಮಾಡಿದರು. ಇಂಗ್ಲೆಂಡ್ ವಿರುದ್ಧ 100 ವಿಕೆಟ್ ಹಾಗೂ 1000 ಹೆಚ್ಚು ರನ್ ಬಾರಿಸಿದ ಐದನೇ ಆಟಗಾರನಾದ ಸಾಲಿಗೆ ಅಶ್ವಿನ್ ಸೇರ್ಪಡೆಯಾದರು. ಈ ಮೊದಲು ವಿಂಡೀಸಿನ ಗ್ಯಾರಿ ಸೋಬರ್ಸ್,ಆಸೀಸ್‌ನ ಮಾಂಟಿ ನೊಬೆಲ್ ಹಾಗೂ ಗಿಫೆನ್ ಈ ಸಾಧನೆ ಮಾಡಿದ್ದರು.
