ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಂಪತಿ ಕೆಲಸದ ನಿಮಿತ್ತ ಬೇರೆ ಬೇರೆ ಜಿಲ್ಲೆಯಲ್ಲಿ ವಾಸಿಸುತ್ತಿದ್ದೇವೆ. ಪೋಷಕರನ್ನು ಕೂಡ ನೋಡಿಕೊಳ್ಳಲಾಗುತ್ತಿಲ್ಲ. ಪತಿ-ಪತ್ನಿ ಜೊತೆಯಾಗಿರಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಣೆ ಕೂಡ ಸಾಧ್ಯವಾಗುತ್ತಿಲ್ಲ ಎಂದು ಪೊಲೀಸ್ ದಂಪತಿಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ರಾಷ್ಟ್ರಪತಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.
ಸಾಮಾನ್ಯವಾಗಿ, ಬಹುತೇಕ ಇಲಾಖೆಗಳಲ್ಲಿ ಸುಪ್ರೀಂಕೋರ್ಟ್ ಆದೇಶ ಮತ್ತು ಕೆಸಿಎಸ್ಆರ್ ನಿಯಮದ ಪ್ರಕಾರ ಒಂದೆ ಘಟಕ ಹಾಗೂ ಒಂದೆ ಜಿಲ್ಲೆಯಲ್ಲಿ ಪತಿ-ಪತ್ನಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕೆಂಬ ನಿಯಮವಿದೆ. ಆದರೂ, ದಂಪತಿಗಳನ್ನು ಬೇರೆ-ಬೇರೆ ಜಿಲ್ಲೆಗೆ ನಿಯೋಜಿಸಲಾಗುತ್ತಿದೆ. ಒಂದೇ ಜಿಲ್ಲೆ ವ್ಯಾಪ್ತಿಗೆ ವರ್ಗಾವಣೆಯಾಗದೇ ರಾಜ್ಯದ ಹಲವು ಠಾಣೆಗಳಲ್ಲಿನ ಪೊಲೀಸ್ ಸಿಬ್ಬಂದಿಗಳು ಬೇಸತ್ತಿದ್ದಾರೆ. ಅಂತಹವರಲ್ಲಿ, ದಂಪತಿಗಳಿಬ್ಬರು ದಯಾಮರಣ ಕೋರಿ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?
ಕಳೆದ 10 ರಿಂದ 15 ವರ್ಷಗಳ ಕಾಲ ತಂದೆ-ತಾಯಿ, ಹೆಂಡತಿ, ಮಕ್ಕಳು ಎಲ್ಲರನ್ನು ಬಿಟ್ಟು ನಾವು ಒಂದು ಕಡೆ ಕೆಲಸ ಮಾಡುತ್ತಿದ್ದೇವೆ. ದಂಪತಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರೂ, ದಂಪತಿಗೆ ಅಂತರ ಜಿಲ್ಲಾ ವರ್ಗಾವಣೆಯಾಗುತ್ತಿಲ್ಲ.
ದಂಪತಿ ಒಂದೇ ಘಟಕ ಹಾಗೂ ಒಂದೇ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ನಿಯಮ ಇದ್ದರೂ, ಸರ್ಕಾರ, ಗೃಹ ಸಚಿವ ಹಾಗೂ ಪೊಲೀಸ್ ಮುಖ್ಯಸ್ಥರು ಪತಿ-ಪತ್ನಿ ಅಂತರಜಿಲ್ಲಾ ವರ್ಗಾವಣೆ ಮಾಡುತ್ತಿಲ್ಲ. ಈ ಬಗ್ಗೆ ಕಳೆದ ಮೂರು ವರ್ಷಗಳಿಂದ ಮನವಿ ಮಾಡಿದರೂ ಕೂಡ ಬಾಯಿ ಮಾತಿನಲ್ಲೇ ವರ್ಗಾವಣೆ ಎಂದು ಹೇಳುತ್ತಿದ್ದಾರೆ. ಆದರೆ, ಈ ವಿಚಾರವಾಗಿ ಲಿಖಿತ ರೂಪದಲ್ಲಿ ಯಾವುದೇ ಆದೇಶ ಬರುತ್ತಿಲ್ಲ.
ಇದರಿಂದ ಪತಿ-ಪತ್ನಿ ಜೊತೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ನೆಮ್ಮದಿಯಾಗಿ ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ.
ಅಂತರ ಜಿಲ್ಲಾ ವರ್ಗಾವಣೆಯಾಗದೇ ದಂಪತಿ ಸಂಸಾರದಲ್ಲಿ ಬಿರುಕು ಮೂಡಿ ಎಷ್ಟೋ ಜನ ವಿಚ್ಛೇದನ ಪಡೆದಿದ್ದಾರೆ. ಇನ್ನು ಕೆಲವು ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿವೆ. ಇನ್ನೊಂದೆಡೆ ದಂಪತಿ ಮದುವೆಯಾಗಿ ಬೇರೆ ಬೇರೆ ಕಡೆ ಇರುವುದರಿಂದ 5 ವರ್ಷ ಕಳೆದರೂ ಕೂಡ ಮಕ್ಕಳಾಗುತ್ತಿಲ್ಲ.
ಈ ಸುದ್ದಿ ಓದಿದ್ದೀರಾ? ಆಸ್ತಿ ತೆರಿಗೆ | ಓಟಿಎಸ್ ಸೌಲಭ್ಯವನ್ನು ಆನ್‌ಲೈನ್ ಮೂಲಕ ಪಡೆದು ಪಾವತಿಸಲು ಅವಕಾಶ
ಬೇರೆ ಇಲಾಖೆಗಳಲ್ಲಿ ಅಂತರಜಿಲ್ಲಾ ವರ್ಗಾವಣೆ ನಡೆದಿದೆ. ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಬೇರೆ ಇಲಾಖೆಗಳಂತೆ ಪ್ರತಿಭಟನೆ ಮಾಡಲು ಅವಕಾಶವಿಲ್ಲ. ಪೊಲೀಸ್ ಇಲಾಖೆಯಲ್ಲಿ 2021ರಿಂದ ಯಾವುದೇ ವರ್ಗಾವಣೆ ಆಗಿಲ್ಲ. ಇದರಿಂದ ನಮಗೆ ನೆಮ್ಮದಿಯಾಗಿ ಕರ್ತವ್ಯ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ನೆಮ್ಮದಿ ಹಾಳಾಗಿ ಆರೋಗ್ಯದಲ್ಲಿ ತೊಂದರೆ ಉಂಟಾಗಿದೆ.
ಹಾಗಾಗಿ, ಸಾಮೂಹಿಕ ಮರಣ ಪಡೆಯಲು ದಯಾಮಾಡಿ ದಯಾಮರಣ ಕಲ್ಪಿಸಿಕೊಂಡಬೇಕು ಎಂದು ನೊಂದ ಮನಸ್ಸಿನಿಂದ ಬೇಡಿಕೊಳ್ಳುತ್ತೇವೆ ಎಂದು ಪೊಲೀಸ್ ಸಿಬ್ಬಂದಿ ಮುಖ್ಯಮಂತ್ರಿ ಮತ್ತು ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.