ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರ, ಓಬಳಾಪೂರ ಗ್ರಾಮ ಪಂಚಾಯತಿಗಳಲ್ಲಿನ ಭ್ರಷ್ಟಾಚಾರ ಸಾಬೀತಾಗಿದ್ದು, ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದ್ದರೂ, ತಾಲೂಕು, ಜಿಲ್ಲಾ ಪಂಚಾಯತಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಾಮಾಜಿ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ್ ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಮುದೇನೂರ, ಓಬಳಾಪೂರ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಭ್ರಷ್ಟಾಚಾರ ಸಾಬೀತಾಗಿದೆ. 78 ಲಕ್ಷ ರೂ. ವಸೂಲಿ ಮಾಡುವಂತೆ ಹಾಗೂ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳವಂತೆ ಸರ್ಕಾರ ಸೂಚಿಸಿದೆ. ಅಲ್ಲದೆ, ರಾಮದುರ್ಗ ತಾಲೂಕಿನ 37 ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಯಂತೆ 28 ಕೋಟಿ ರೂ. ಬಾಕಿ ವಸೂಲಾತಿ ತಿರುವಳಿಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ನೀಡಿದ್ದ ಸುತ್ತೋಲೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ, ಕರ್ತವ್ಯಲೋಪ ಎಸಗಿದ್ದಾರೆ. ಅವರೆಲ್ಲರ ವಿರುದ್ಧ ಕ್ರಮ ಕೈಗೊಂಡು, ಸೇವೆಯಿಂದ ವಜಾಗೊಳಿಸಬೇಕು. ಅದಕ್ಕಾಗಿ, ಬೆಳಗಾವಿ ಜಿಲ್ಲಾ ಪಂಚಾಯತಿ ಎದುರು ಮಾರ್ಚ್ 4ರಿಂದ ಅನಿರ್ಧಿಷ್ಟಾವಧಿ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಅರಂಭಿಸುತ್ತೇನೆ” ಎಂದು ಶ್ರೀನಿವಾಸಗೌಡ ಪಾಟೀಲ ಹೇಳಿದ್ದಾರೆ.
“ಈ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಧರಣಿ ಆರಂಭಿಸಿದ್ದೆ. ಆಗ, 10 ದಿನಗಳ ಒಳಗೆ ಕ್ರಮ ಕೈಗೊಳ್ಳುವುದುದಾಗಿ ಬೆಳಗಾವಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದಾರೆ.