ಗುಜರಾತ್‌ನ ದ್ವಾರಕಾ ಜಿಲ್ಲೆಯ ಬೇಟ್ ದ್ವಾರಕಾ ದ್ವೀಪದಿಂದ ಓಖಾ ಪ್ರದೇಶಕ್ಕೆ ಸಂಪರ್ಕಿಸುವ, ಅರಬ್ಬಿ ಸಮುದ್ರದ ಮೇಲೆ ನಿರ್ಮಿಸಲಾಗಿರುವ ಕೇಬಲ್-ಸ್ಟೇಯ್ಡ್ ಸೇತುವೆ ‘ಸುದರ್ಶನ್ ಸೇತು’ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ಸೇತುವೆ 2.32 ಕಿ.ಮೀ ಉದ್ದವಿದ್ದು, ದೇಶದ ಅತಿ ಉದ್ದದ ಸೇತುವೆಯಾಗಿದೆ.
2.32 ಕಿಮೀ ಉದ್ದದ ಸೇತುವೆ, 900 ಮೀಟರ್ ಕೇಂದ್ರ ಡಬಲ್ ಸ್ಪ್ಯಾನ್ ಕೇಬಲ್-ಸ್ಟೇಯ್ಡ್ ಭಾಗ ಮತ್ತು 2.45 ಕಿಮೀ ಉದ್ದದ ಅಪ್ರೋಚ್ ರಸ್ತೆಯನ್ನು 979 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ನಾಲ್ಕು ಪಥದ 27.20 ಮೀಟರ್ ಅಗಲದ ಸೇತುವೆಯು ಪ್ರತಿ ಬದಿಯಲ್ಲಿ 2.50 ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
‘ಸಿಗ್ನೇಚರ್ ಸೇತುವೆ’ ಎಂದು ಕರೆಯಲಾಗುತ್ತಿದ್ದ ಸೇತುವೆಯನ್ನು ‘ಸುದರ್ಶನ ಸೇತು’ ಎಂದು ಮರುನಾಮಕರಣ ಮಾಡಲಾಗಿದೆ.
ಬೇಟ್ ದ್ವಾರಕಾ ಓಖಾ ಪ್ರದೇಶವು ಸಣ್ಣ ದ್ವೀಪವಾಗಿದ್ದು, ಇದು ದ್ವಾರಕಾ ಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಅಲ್ಲಿ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ್ ದೇವಾಲಯವಿದೆ.
ಪ್ರಸ್ತುತ, ಬೇಟ್ ದ್ವಾರಕಾದಲ್ಲಿರುವ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಹಗಲಿನಲ್ಲಿ ಮಾತ್ರ ದೋಣಿಯಲ್ಲಿ ಪ್ರಯಾಣಿಸಬಹುದಿತ್ತು. ಸೇತುವೆಯ ನಿರ್ಮಾಣದಿಂದಾಗಿ, ಈಗ ಎಲ್ಲ ಸಮಯದಲ್ಲೂ ಪ್ರಯಾಣಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.