2017 ರಿಂದ 2022ರವರೆಗೆ 275 ‘ಪೊಲೀಸ್ ಕಸ್ಟಡಿಯಲ್ಲಿ ಅತ್ಯಾಚಾರ’ ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಹೇಳಿವೆ. ಕಾನೂನು ಜಾರಿ ವ್ಯವಸ್ಥೆಗಳಲ್ಲಿ ಸಂವೇದನೆ ಮತ್ತು ಹೊಣೆಗಾರಿಕೆಯ ಕೊರತೆಯಿಂದಾಗಿ ಇಂತಹ ದುರ್ಘಟನೆಗಳು ನಡೆಯುತ್ತಿವೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ, ಈ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿ, ಸಾರ್ವಜನಿಕ ಸೇವಕರು, ಸಶಸ್ತ್ರ ಪಡೆಗಳ ನೌಕರರು ಮತ್ತು ಜೈಲುಗಳು, ರಿಮಾಂಡ್ ಹೋಮ್ ಮತ್ತು ಆಸ್ಪತ್ರೆಗಳ ಸಿಬ್ಬಂದಿಗಳು ಅಪರಾಧಿಗಳಾಗಿದ್ದಾರೆ.
“ಇತ್ತೀಚಿನ ವರ್ಷಗಳಲ್ಲಿ ಇಂತಹ ಪ್ರಕರಣಗಳಲ್ಲಿ ಸಂಖ್ಯೆ ಇಳಿಮುಖವಾಗಿದೆ. 2017ರಲ್ಲಿ 89, 2018ರಲ್ಲಿ 60, 2019ರಲ್ಲಿ 47, 2020ರಲ್ಲಿ 29, 2021ರಲ್ಲಿ 26 ಹಾಗೂ 2022ರಲ್ಲಿ 24 ಪ್ರಕರಣಗಳು ದಾಖಲಾಗಿವೆ” ಎಂದು ಅಂಕಿಅಂಶಗಳು ಹೇಳಿವೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 (2) ಅಡಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸೆಕ್ಷನ್ – ಪೊಲೀಸ್ ಅಧಿಕಾರಿ, ಜೈಲರ್ ಅಥವಾ ಮಹಿಳೆಯ ಕಾನೂನುಬದ್ಧ ಪಾಲನೆ ಮಾಡಬೇಕಾದ ಯಾವುದೇ ವ್ಯಕ್ತಿಯಿಂದ ಎಸಗಿದ ಅತ್ಯಾಚಾರ ಅಪರಾಧಕ್ಕೆ ಸಂಬಂಧಿಸಿದೆ. ಅಲ್ಲದೆ, ನಿರ್ದಿಷ್ಟವಾಗಿ ಅಪರಾಧಿಯು ಮಹಿಳೆಯ ವಿರುದ್ಧ ಅತ್ಯಾಚಾರದ ಅಪರಾಧವನ್ನು ಎಸಗಲು ಅವರ ಅಧಿಕಾರ ಅಥವಾ ಅವರ ಸ್ಥಾನದ ದುರ್ಬಳಕೆಯ ಪ್ರಕರಣಗಳನ್ನು ಒಳಗೊಂಡಿರುತ್ತದೆ.
2017ರಿಂದ ದಾಖಲಾಗಿರುವ 275 ಕಸ್ಟಡಿಯಲ್ ಅತ್ಯಾಚಾರ ಪ್ರಕರಣಗಳಲ್ಲಿ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲಿ, 92 ಪ್ರಕರಣಗಳು ದಾಖಲಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ಮಧ್ಯಪ್ರದೇಶದಲ್ಲಿ 43 ಪ್ರಕರಣಗಳು ದಾಖಲಾಗಿವೆ.
“ಕಸ್ಟೋಡಿಯಲ್ ಪ್ರಕರಣಗಳಲ್ಲಿ ಅಪರಾಧಿಗಳು ಮಹಿಳೆಯರನ್ನು ಲೈಂಗಿಕವಾಗಿ ಒತ್ತಾಯಿಸಲು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಕೌಟುಂಬಿಕ ಹಿಂಸಾಚಾರ, ಕಳ್ಳಸಾಗಾಣಿಕೆಗಳಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ರಕ್ಷಣೆಗಾಗಿ ಆಡಳಿತದ ಮೊರೆ ಹೋದಾಗ, ಅವರ ಅಸಹಾಯಕತೆಯನ್ನು ಬಳಸಿಕೊಂಡು, ರಕ್ಷಣೆಯ ನೆಪದಲ್ಲಿ ಎಸಗುವ ಕೃತ್ಯವನ್ನು ಈ ಪ್ರಕರಣಗಳು ಪ್ರತಿಬಿಂಬಿಸುತ್ತವೆ” ಎಂದು ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಪೂನಂ ಮುತ್ರೇಜಾ ಹೇಳಿದ್ದಾರೆ.
“ಪಿತೃಪ್ರಭುತ್ವದ ಸಾಮಾಜಿಕ ನಿಯಮಗಳು, ಕಾನೂನು ಜಾರಿಯಲ್ಲಿ ಲಿಂಗ-ಸೂಕ್ಷ್ಮತೆಯ ತರಬೇತಿ ಕೊರತೆ, ಮತ್ತು ಸಂತ್ರಸ್ತೆಯ ಮೇಲೆರಗುವ ಕಳಂಕಗಳು ಕಸ್ಟಡಿಯಲ್ ಅತ್ಯಾಚಾರಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ” ಎಂದು ಮುತ್ರೇಜಾ ಒತ್ತಿ ಹೇಳಿದ್ದಾರೆ.
“ಕಸ್ಟಡಿಯಲ್ ಅತ್ಯಾಚಾರದ ಕಾರಣಗಳು ಮತ್ತು ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಸಂತ್ರಸ್ತೆ ಕೇಂದ್ರಿತ ವಿಚಾರಣೆ, ಬಲವರ್ಧಿತ ಕಾನೂನು ಚೌಕಟ್ಟುಗಳು ಹಾಗೂ ಸಾಂಸ್ಥಿಕ ಸುಧಾರಣೆಗಳು ಸೇರಿದಂತೆ ಸರ್ಕಾರಗಳು ಬಹುಮುಖಿ ವಿಧಾನವನ್ನು ಅನುಸರಿಸುವ ತುರ್ತು ಅಗತ್ಯವಿದೆ” ಎಂದು ಅವರು ಗಮನ ಸೆಳೆದಿದ್ದಾರೆ.
“ಕಾನೂನು ಸುಧಾರಣೆ, ಕಾನೂನು ಜಾರಿಗಾಗಿ ಉತ್ತಮ ತರಬೇತಿ, ಸಾಮಾಜಿಕ ರೂಢಿಗಳಲ್ಲಿ ಬದಲಾವಣೆ – ಅದಕ್ಕಾಗಿ ಸಾಮಾಜಿಕ ಮತ್ತು ನಡವಳಿಕೆ ಬದಲಾವಣೆ ಹಾಗೂ ಸಂವಹನ ಮತ್ತು ಹೊಣೆಗಾರಿಕೆಯಲ್ಲಿ ಬಲವಾದ ಕಾರ್ಯವಿಧಾನಗಳನ್ನು ಒಳಗೊಳ್ಳಬೇಕಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸಂದೇಶ್‌ಖಾಲಿ ಪ್ರಕರಣ | ಟಿಎಂಸಿ ವಿರುದ್ಧ ಮತ ಚಲಾಯಿಸಿದ್ದಕ್ಕೆ ಆದಿವಾಸಿಗಳಿಗೆ ಚಿತ್ರಹಿಂಸೆ; ಎನ್‌ಸಿಎಸ್‌ಟಿ ವಿವರ
ಮಹಿಳಾ ನಾಯಕತ್ವದ ಸಂಘಟನೆ ‘ನ್ಗುವು’ದ ನಾಯಕಿ ಪಲ್ಲಬಿ ಘೋಷ್ ಅವರು ಪೊಲೀಸ್ ಅಧಿಕಾರಿಗಳಿಂದ ಅತ್ಯಾಚಾರಕ್ಕೆ ಒಳಗಾಗಿ, ಪ್ರಕರಣ ದಾಖಲಿಸಿದ ಸಂತ್ರಸ್ತೆಯರು ಎದುರಿಸುವ ತೊಂದರೆಗಳನ್ನು ವಿವರಿಸಿದ್ದಾರೆ.
“ಪೊಲೀಸ್ ಠಾಣೆಗಳಲ್ಲಿ ಕಸ್ಟಡಿಯಲ್ ಅತ್ಯಾಚಾರವು ತುಂಬಾ ಸಾಮಾನ್ಯವಾದ ಸನ್ನಿವೇಶವಾಗಿದೆ. ಕಿರಿಯ ಪೊಲೀಸ್ ಅಧಿಕಾರಿಗಳು, ಮಹಿಳಾ ಕಾನ್‌ಸ್ಟೆಬಲ್‌ಗಳು ಸಹ ಸಂತ್ರಸ್ತೆಯರ ಜೊತೆ ಮಾತನಾಡುವ ರೀತಿ, ಸಂತ್ರಸ್ತೆಯರ ಬಗ್ಗೆ ಅವರಿಗೆ ಯಾವುದೇ ಸಹಾನುಭೂತಿಯೂ ಇಲ್ಲ ಎಂಬುದನ್ನು ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.