ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ) ಹಾಗೂ ದೆಹಲಿ ವಿಶೇಷ ಪೊಲೀಸ್ ಜಂಟಿ ಕಾರ್ಯಾಚರಣೆಯಿಂದ ಅಂತಾರಾಷ್ಟ್ರೀಯ ಡ್ರಗ್ ಜಾಲವನ್ನು ಪತ್ತೆ ಹಚ್ಚಿದ್ದು ಸುಮಾರು 50 ಕೆಜಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಮೂವರನ್ನು ಬಂಧಿಸಲಾಗಿದೆ.
ಪತ್ತೆಹಚ್ಚಲಾದ ಡ್ರಗ್ ಜಾಲವು ಭಾರತ ಮಾತ್ರವಲ್ಲದೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ಮಲೇಷಿಯಾದಲ್ಲೂ ಜಾಲ ಹೊಂದಿದೆ. ಪ್ರಕರಣದ ಪ್ರಮುಖ ರೂವಾರಿ ತಮಿಳು ನಿರ್ಮಾಪಕನಾಗಿದ್ದು, ಈತ ಸದ್ಯ ತಲೆಮರೆಸಿಕೊಂಡಿದ್ದಾನೆ.
ವಶಪಡಿಸಿಕೊಳ್ಳಲಾದ ಸ್ಯೂಡೋಫೆಡ್ರಿನ್ ಮಾದಕ ವಸ್ತುವು ಮೆಥಂಪಟಮೈನ್ ತಯಾರಿಸಲು ಬಳಸುತ್ತಾರೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು ವ್ಯಸನಕಾರಿ ಸಂಷ್ಲೇಷಿತ ಮಾದಕ ದ್ರವ್ಯವಾಗಿದೆ. ಈ ದ್ರವ್ಯವು ಕಾನೂನಿನ ಕೆಲ ಬಳಕೆಯನ್ನು ಹೊಂದಿದ್ದರೂ ಭಾರತದಲ್ಲಿ ನಿಯಂತ್ರಿತ ವಸ್ತುವಾಗಿ ವರ್ಗಿಕರಿಸಲಾಗಿದೆ.ಇವುಗಳ ಉತ್ಪಾದನೆ,ಮಾರಾಟ, ರಫ್ತು ಹಾಗೂ ಬಳಕೆಯ ಮೇಲೆ ಕಟ್ಟುನಿಟ್ಟಾದ ನಿಯಂತ್ರಣವಿದೆ.
ಈ ಮಾದಕ ವಸ್ತುವನ್ನು ಅಕ್ರಮವಾಗಿ ಉತ್ಪಾದನೆ ಹಾಗೂ ಮಾರಾಟ ಮಾಡಿದರೆ ಎನ್‌ಡಿಪಿಎಸ್ ಕಾಯ್ದೆ 1985ರ ಪ್ರಕಾರ 10 ವರ್ಷಗಳ ಕಾಲ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಪಕ್ಷ ನಾಯಕ ಅಶೋಕ್ ಮತ್ತು ಸಾರ್ವಜನಿಕ ಸಭ್ಯತೆ
ನಿಷೇಧಿತ ಮಾದಕ ವಸ್ತುವನ್ನು ಅಡುಗೆ ಸಾಮಗ್ರಿಗಳ ರೀತಿಯಲ್ಲಿ ವಿಮಾನ ಹಾಗೂ ಸಮುದ್ರ ಸಂಚಾರದ ಮೂಲಕ ಕಳ್ಳಸಾಗಣೆ ಮಾಡಲಾಗುತ್ತಿತ್ತು.
ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳಿಗೆ ಸ್ಯೂಡೋಫೆಡ್ರಿನ್ ಮಾದಕ ವಸ್ತುವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ನ್ಯೂಜಿಲೆಂಡ್ ಕಸ್ಟಮ್ಸ್ ಹಾಗೂ ಆಸ್ಟ್ರೇಲಿಯಾ ಪೊಲೀಸರು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ಅವರಿಗೆ ಮಾಹಿತಿ ನೀಡಿದ್ದರು.
ಇವೆರೆಡು ದೇಶಗಳಿಗೆ ಸ್ಯೂಡೋಫೆಡ್ರಿನ್ ಮಾದಕ ವಸ್ತುವನ್ನು ಒಂದು ಕೆಜಿಗೆ ಅಂದಾಜು 1.5 ಕೋಟಿ ರೂ.ಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ಅಡ್‌ಮಿನಿಸ್ಟ್ರೇಷನ್ ಕೂಡ ಈ ಡ್ರಗ್ ಜಾಲದ ಮೂಲ ದೆಹಲಿ ಎಂದು ತಿಳಿಸಿದೆ. ಜಾಲದ ಬಗ್ಗೆ ಮಾಹಿತಿ ಪಡೆದ ನಂತರ ದೆಹಲಿ ಪೊಲೀಸ್ ಹಾಗೂ ಎನ್‌ಸಿಬಿ ಕಾರ್ಯಾಚರಣೆ ನಡೆಸಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿವೆ.
ಬಂಧಿತ ಮೂವರು ತಮಿಳುನಾಡಿನವರಾಗಿದ್ದು, ಇವರ ಆರಂಭಿಕ ವಿಚಾರಣೆಗೊಳಪಡಿಸಿದ ನಂತರ ಕಳೆದ ಮೂರು ವರ್ಷಗಳಲ್ಲಿ 2 ಸಾವಿರ ಕೋಟಿ ಮೊತ್ತದ 3500 ಕೆಜಿ ಸ್ಯೂಡೋಫೆಡ್ರಿನ್ ಮಾದಕ ವಸ್ತುವನ್ನು 45 ಸಾಗಣೆಗಳ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
