- ಮೊದಲ ಬಾರಿಗೆ ಅರವಿಂದ್ ಕೇಜ್ರಿವಾಲ್ ವಿಚಾರಣೆ
- ಆಪ್ ನಾಯಕರಿಂದ ಸಿಬಿಐ ನಡೆಗೆ ತೀವ್ರ ವಿರೋಧ
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುಮಾರು ಒಂಬತ್ತು ಗಂಟೆಗಳ ಕಾಲ ಸಿಬಿಐ ವಿಚಾರಣೆ ಎದುರಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ವಿಚಾರಣೆ ಖಂಡಿಸಿ, “ತನಿಖಾ ಸಂಸ್ಥೆಗಳು ಬಿಜೆಪಿಯ ತಾಳಕ್ಕೆ ಕುಣಿಯುತ್ತಿವೆ” ಎಂದು ಆರೋಪಿಸಿ ಆಪ್ ಕಾರ್ಯಕರ್ತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ಹಿಂದೆ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗಿತ್ತು. ಆದರೆ, ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆದಿರುವುದು ಇದೇ ಮೊದಲು.
ಅರವಿಂದ್ ಕೇಜ್ರಿವಾಲ್ ಅವರಿಗೆ ಸಿಬಿಐ ಅಧಿಕಾರಿಗಳು 56 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಕುರಿತು ಮಾತನಾಡಿದ ಕೇಜ್ರಿವಾಲ್, “ಅಧಿಕಾರಿಗಳು ನಯವಾಗಿ ಪ್ರಶ್ನಿಸಿದರು. ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸಿದೆ. ಅಬಕಾರಿ ನೀತಿಯನ್ನೇಕೆ ಜಾರಿಗೆ ತಂದಿರಿ. ಅದನ್ನು ಯಾವಾಗ ಸಿದ್ಧಪಡಿಸಲಾಗಿದೆ ಎಂಬೆಲ್ಲಾ ಪ್ರಶ್ನೆ ಕೇಳಿದರು. ಅವರ ಬಳಿ ಒಂದು ಚೂರು ಸಾಕ್ಷ್ಯಗಳಿಲ್ಲ” ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಸಿಬಿಐ ವಕ್ತಾರ ಆರ್ ಸಿ ವಕ್ತಾರ, “ಸೆಕ್ಷನ್ 160 ಸಿಆರ್‌ಪಿಸಿ ಅಡಿ ಕೇಜ್ರಿವಾಲ್‌ಗೆ ನೋಟಿಸ್ ನೀಡಲಾಗಿದೆ. ನಮ್ಮ ಬಳಿ ಇರುವ ಸಾಕ್ಷ್ಮಿಗಳನ್ನು ಒಂದೆಡೆ ಸಂಗ್ರಹಿಸಲಾಗುತ್ತಿದೆ. ತನಿಖೆ ಮುಂದುವರೆಯಲಿದೆ” ಎಂದು ತಿಳಿಸಿದ್ದಾರೆ.
ಸಿಬಿಐ ಕಚೇರಿಯಿಂದ ಕೇಜ್ರಿವಾಲ್ ಹೊರಬರುತ್ತಿದ್ದಂತೆಯೇ ಆಪ್ ನಾಯಕರು ಅವರನ್ನು ಸುತ್ತುವರೆದರು. “ನಾವು ಪ್ರಾಮಾಣಿಕರು. ಪ್ರಾಮಾಣಿಕತೆ ನಮ್ಮ ಮೂಲ ಸಿದ್ದಾಂತ. ನಾವು ಸಾಯುತ್ತೇವೆ ಹೊರತು ಭ್ರಷ್ಟಾಚಾರ ಮಾಡುವುದಿಲ್ಲ. ಆಪ್ ವೇಗವಾಗಿ ಬೆಳೆಯುತ್ತಿದೆ. ಇದನ್ನು ಸಹಿಸದ ಕೇಂದ್ರ ಬಿಜೆಪಿ ಸರ್ಕಾರ ನಮಗೆ ತೊಂದರೆ ಕೊಡುತ್ತಿದೆ. ಇಡೀ ದೇಶದ ಜನರು ನಮ್ಮೊಂದಿಗಿದ್ದಾರೆ. ಆಪ್ ನಾಶ ಮಾಡುವುದು ಅಸಾಧ್ಯ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾನು ಲಿಂಗಾಯತ ನಾಯಕ ಎನ್ನುವ ಕಾರಣಕ್ಕೆ ಕಡೆಗಣಿಸಿದರು: ಜಗದೀಶ್ ಶೆಟ್ಟರ್
ಆಪ್‌ನಿಂದ ಬೃಹತ್ ಪ್ರತಿಭಟನೆ
ಅರವಿಂದ್ ಕೇಜ್ರಿವಾಲ್ ಅವರ ವಿಚಾರಣೆ ಖಂಡಿಸಿ ಆಪ್ ನಾಯಕರು ದೆಹಲಿಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. “ಬಿಜೆಪಿಯ ಆಜ್ಞೆಯಂತೆ ಸಿಬಿಐ ಕಾರ್ಯನಿರ್ವಹಿಸುತ್ತಿದೆ” ಎಂದು ಆರೋಪಿಸಿದ್ದಾರೆ.
ಸುಮಾರು 1350 ಆಪ್ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ. ಪಂಜಾಬ್‌ನ ಸುಮಾರು 50-60 ನಾಯಕರು ಮತ್ತು ಮಂತ್ರಿಗಳನ್ನು ದೆಹಲಿಗೆ ಪ್ರವೇಶಿಸದಂತೆ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ತಡೆಯಲಾಗಿದೆ ಎಂದು ಎಎಪಿ ಆರೋಪಿಸಿದೆ.
ದೆಹಲಿ ಪ್ರವೇಶಕ್ಕೆ ಅನುಮತಿ ಪಡೆದವರನ್ನು ಹೊರ ದೆಹಲಿ ಅಥವಾ ದಕ್ಷಿಣ ದೆಹಲಿಯಲ್ಲಿ ಬಂಧಿಸಲಾಗಿದೆ.
ಪೊಲೀಸರು ಬಂಧಿಸುವ ಮೊದಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ರಾಜ್ಯಸಭಾ ಸಂಸದರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ, ಸೌರಭ್ ಭಾರದ್ವಾಜ್ ಮತ್ತು ಅತಿಶಿ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಗಾಲ್ಫ್ ಲಿಂಕ್ಸ್ ಪ್ರದೇಶದ ಬಳಿ ಧರಣಿ ಪ್ರತಿಭಟನೆ ನಡೆಸಿದರು.