ಪ್ರಶ್ನಾತೀತ ಪ್ರಪಂಚವೂ ಪ್ರಜ್ಞಾವಂತ ಸಮಾಜವೂ ಪ್ರಶ್ನಿಸುವ ವಿವೇಕವೂ: ನಾ ದಿವಾಕರ ಬರೆಹ

Date:

Advertisements
ಪ್ರಶ್ನಾತೀತತೆ ಬೇರೂರಿದಷ್ಟೂ ಸಮಾಜವು ತನ್ನ ವಿಮರ್ಶಾತ್ಮಕ ದೃಷ್ಟಿಕೋನವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಚಿಕಿತ್ಸಕ ಗುಣವನ್ನು ಕಳೆದುಕೊಳ್ಳುವ ಸಮಾಜದ ಬೌದ್ಧಿಕ ವಲಯ ಯಥಾಸ್ಥಿತಿವಾದಕ್ಕೆ ಅಂಟಿಕೊಳ್ಳುವ ಅಥವಾ ವೈಭವೀಕರಿಸಿದ ಪ್ರಾಚೀನತೆಯನ್ನೇ ಮೆರೆಸುವ ಮೂಲಕ ಭವಿಷ್ಯದ ಪೀಳಿಗೆಗೆ ಕತ್ತಲೆಯ ಹಾದಿಗಳನ್ನು ನಿರ್ಮಿಸುತ್ತಿರುತ್ತದೆ. ಈ ಹಾದಿಯನ್ನೇ ಕ್ರಮಿಸಿ ದೇಶ ಕಟ್ಟಬೇಕಾದ ಯುವ ಸಂಕುಲಕ್ಕೆ ವೈಚಾರಿಕತೆಯ ಅರಿವು ನೀಡುವುದರೊಂದಿಗೇ, ವಿವೇಕ ಮತ್ತು ವಿವೇಚನೆಯ ಜ್ಞಾನ ಮಾರ್ಗಗಳನ್ನೂ ತೆರೆಯುವುದು ಪ್ರಜ್ಞಾವಂತ ಸಮಾಜದ ಜವಾಬ್ದಾರಿಯಾಗಿದೆ.
ಪ್ರಾಚೀನ ಕಾಲದಿಂದಲೂ ಸಾಂಸ್ಕೃತಿಕವಾಗಿ, ಧಾರ್ಮಿಕ ನೆಲೆಗಳಲ್ಲಿ ಮತ್ತು ಸಾಮಾಜಿಕ ವಲಯದಲ್ಲೂ ಆರಾಧನಾ ಮನೋಭಾವವನ್ನು ವಿವಿಧ ಆಯಾಮಗಳಲ್ಲಿ ಪೋಷಿಸಿಕೊಂಡು ಬಂದಿರುವ ಭಾರತೀಯ ಸಮಾಜದಲ್ಲಿ ಗೌರವ, ಸಮ್ಮಾನ ಮತ್ತು ವ್ಯಕ್ತಿಗತ ಅಭಿಮಾನವನ್ನೂ ಸಹ ಸಾಮಾಜಿಕ ಔನ್ನತ್ಯ-ಸಾಂಸ್ಕೃತಿಕ ಮೇಲರಿಮೆಯ ನೆಲೆಯಲ್ಲೇ ನಿರ್ವಚಿಸುವ ಮೂಲಕ ಪೋಷಿಸಿಕೊಂಡು ಬರಲಾಗಿದೆ. ಘನತೆ ಗೌರವಗಳನ್ನೂ ಜಾತಿ ಶ್ರೇಣಿಗೆ ಅನುಗುಣವಾಗಿಯೇ ಮೇಲು ಕೀಳುಗಳ ಶ್ರೇಣೀಕರಣಕ್ಕೊಳಪಡಿಸಿರುವ ಭಾರತೀಯ ಸಮಾಜ ಕಟ್ಟಕಡೆಯ ವ್ಯಕ್ತಿ ಮತ್ತು ಉಚ್ಛಸ್ತರದ ವ್ಯಕ್ತಿಯ ನಡುವೆ ಭೂಮ್ಯಾಕಾಶದ ಅಂತರವನ್ನು ಕಾಪಾಡಿಕೊಂಡೇ ಬಂದಿದೆ. ಸಮಾಜ, ಸಂಸ್ಕೃತಿ ಹಾಗೂ ಸಾಮಾನ್ಯ ಜನಜೀವನವನ್ನು ನಿರ್ದೇಶಿಸುವ ನೀತಿ ಸಂಹಿತೆಗಳು, ನ್ಯಾಯಶಾಸ್ತ್ರಗಳೂ ಸಹ ಈ ಅಂತರದ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುತ್ತಲೇ, ಆಧುನಿಕತೆಯನ್ನು ಮೈಗೂಡಿಸಿಕೊಂಡಿವೆ.
ಹಾಗಾಗಿಯೇ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹೊದ್ದುಕೊಂಡಿದ್ದರೂ ಭಾರತದ ರಾಜಕೀಯ ವ್ಯವಸ್ಥೆ ಮತ್ತು ಸಾಮಾಜಿಕ ಚೌಕಟ್ಟು ಶ್ರೇಣೀಕೃತ ಸ್ತರಗಳ ನೆಲೆಯಲ್ಲೇ ನಿರ್ವಚಿಸಲ್ಪಡುತ್ತದೆ. 12ನೆಯ ಶತಮಾನದ ಬಸವಣ್ಣನಿಂದ 20ನೆಯ ಶತಮಾನದ ಅಂಬೇಡ್ಕರ್‌ವರೆಗೂ ಈ ಶ್ರೇಣಿ ವ್ಯವಸ್ಥೆಯನ್ನು ಧಿಕ್ಕರಿಸುವ ಪರಂಪರೆಯನ್ನು ಗುರುತಿಸಬಹುದು. ಕ್ರಿಸ್ತಪೂರ್ವದ ಬೌದ್ಧ ಚಿಂತನೆಗಳಲ್ಲಿ ಕಾಣಬಹುದಾದ ವ್ಯವಸ್ಥೆಯನ್ನು ಧಿಕ್ಕರಿಸುವ ಧ್ವನಿಯನ್ನು ವಿಸ್ತರಿಸುವ ಚಾರ್ವಾಕ, ಲೋಕಾಯತ ಮುಂತಾದ ಬೌದ್ಧಿಕ ಚಿಂತನಾವಾಹಿನಿಗಳೂ ಸಹ ಭಾರತೀಯ ಸಮಾಜವನ್ನು ಹಲವು ಮಜಲುಗಳಲ್ಲಿ ಮೊನಚುಗೊಳಿಸುತ್ತಾ ಬಂದಿವೆ. 19ನೆಯ ಶತಮಾನದಿಂದ 20ನೆಯ ಶತಮಾನದುದ್ದಕ್ಕೂ ಕಾಣಬಹುದಾದ ಸಮಾಜ ಸುಧಾರಣೆಯ ಧ್ವನಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸ್ಥಾಪಿತ ವ್ಯವಸ್ಥೆಯನ್ನು ಅಥವಾ ಯಥಾಸ್ಥಿತಿವಾದವನ್ನು ಉಲ್ಲಂಘಿಸುವ, ಧಿಕ್ಕರಿಸುವ, ವಿರೋಧಿಸುವ ಬೌದ್ಧಿಕ ಚಿಂತನಾ ಕ್ರಮವನ್ನು ಗುರುತಿಸಲು ಸಾಧ್ಯ.
ಪ್ರತಿರೋಧದ ನೆಲೆಯಲ್ಲಿ ಸುಧಾರಣೆ
ರಾಜಾರಾಂ ಮೋಹನ್‌ ರಾಯ್‌ ಅವರಿಂದ ಅಂಬೇಡ್ಕರ್‌ವರೆಗೂ ವ್ಯಾಪಿಸುವ ಈ ಪ್ರತಿರೋಧದ ಧ್ವನಿಗಳಲ್ಲಿ ಧರ್ಮನಿಷ್ಠೆ, ಸಾಂಸ್ಕೃತಿಕ ಬದ್ಧತೆ ಮತ್ತು ಆಸ್ತಿಕತೆಯ ಛಾಯೆಯನ್ನು ಕಾಣುವಂತೆಯೇ ನಾಸ್ತಿಕತೆ, ನಿರೀಶ್ವರವಾದ ಮತ್ತು ಭಿನ್ನ ಸಾಂಸ್ಕೃತಿಕ ಚಿಂತನೆಗಳನ್ನೂ ಗುರುತಿಸಬಹುದು. ಸಮಾಜವನ್ನು ಭವಿಷ್ಯದತ್ತ ಕೊಂಡೊಯ್ಯಲು ಬೇಕಾದ ವಿವೇಕ ಮತ್ತು ವಿವೇಚನೆಗಳಿಗೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ಈ ಮಹಾನ್‌ ದಾರ್ಶನಿಕರು ಬಿಟ್ಟುಹೋಗಿದ್ದಾರೆ. ಮನುಷ್ಯನ ಆರೋಗ್ಯಕರ ನಿತ್ಯ ಬದುಕಿಗೆ ಅವಶ್ಯವಾದ ಜೀವನ ಮೌಲ್ಯಗಳಿಗೆ ಯಾವುದೇ ವ್ಯಕ್ತಿಗತ ಅಥವಾ ಸಾಂಘಿಕ/ಸಾಂಸ್ಥಿಕ ಶ್ರದ್ಧಾನಂಬಿಕೆಗಳು ಅಡ್ಡಿಯಾಗಬೇಕಿಲ್ಲ ಎಂಬ ವಾಸ್ತವವನ್ನು ಈ ಚಿಂತನೆಯ ನೆಲೆಗಳಲ್ಲಿ ನಾವು ಗುರುತಿಸಬಹುದು. ಸಮಾಜದ ಕೆಳಸ್ತರದಲ್ಲಿ ತಮ್ಮ ಶ್ರಮ ಮತ್ತು ಶ್ರಮಶಕ್ತಿಯನ್ನೇ ಅವಲಂಬಿಸಿ ಬದುಕುವ ಬಹುಸಂಖ್ಯಾತರು ನಿತ್ಯ ಬದುಕಿನಲ್ಲಿ ಎದುರಿಸುವ ಶೋಷಣೆ, ತಾರತಮ್ಯ, ದೌರ್ಜನ್ಯ ಮತ್ತು ಅಸಮಾನತೆಗಳು ಈ ಜನತೆಯಲ್ಲಿ ಸಹಜವಾಗಿಯೇ ಹಲವು ಜಟಿಲ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಮನುಷ್ಯ ಸಮಾಜದಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಹಕ್ಕು ಈ ಹಂತದಲ್ಲೇ ಮೊಳೆಯುತ್ತದೆ. ಇದನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ಮೇಲ್‌ಸ್ತರದ ಬಲ್ಲವರ/ಉಳ್ಳವರ ಸಮಾಜದ ಮೇಲಿರುತ್ತದೆ. ಸಮಾಜ ಸುಧಾರಕರು ಈ ಜವಾಬ್ದಾರಿಯನ್ನು ಅರಿತೇ ತಮ್ಮ ತಾತ್ವಿಕ ನೆಲೆಗಳನ್ನು ವಿಸ್ತರಿಸಲು ಯತ್ನಿಸಿದ್ದಾರೆ.
ಒಂದು ಶಾಲೆ ಅಥವಾ ವಸತಿಶಾಲೆಯ ಮುಂದೆ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಘೋಷವಾಕ್ಯವನ್ನು “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು” ಎಂದು ಬದಲಾಯಿಸಿರುವ ಪ್ರಸಂಗ ನಮ್ಮ ಸಾರ್ವಜನಿಕ ವಲಯದಲ್ಲಿ ಸೃಷ್ಟಿಸಿರುವ ಸಂಕಥನಗಳನ್ನು ಗಮನಿಸಿದಾಗ, ‘ಪ್ರಶ್ನಿಸು’ ಎಂಬ ಪದ ಅಥವಾ ‘ಪ್ರಶ್ನಿಸುವುದು’ ಎಂಬ ಕ್ರಿಯೆ ಇಂದಿಗೂ ಸಹ ಸಂಪ್ರದಾಯವಾದಿಗಳಲ್ಲಿ ಎಂತಹ ಕಂಪನಗಳನ್ನು ಸೃಷ್ಟಿಸುತ್ತದೆ ಎಂದು ಅರ್ಥವಾಗುತ್ತದೆ. ಜಾತಿ ಶ್ರೇಣಿ ಮತ್ತು ಊಳಿಗಮಾನ್ಯ ಧೋರಣೆಯನ್ನು ಇಂದಿಗೂ ಸುಸ್ಥಿತಿಯಲ್ಲಿರಿಸಲು ಅಪೇಕ್ಷಿಸುವ ಸಾಂಪ್ರದಾಯಿಕ ಸಮಾಜಕ್ಕೆ ‘ಕೈ ಮುಗಿಯುವುದು’ ಮತ್ತು ‘ಪ್ರಶ್ನಿಸುವುದು’ ಎರಡೂ ಕ್ರಿಯೆಗಳು ಪರಸ್ಪರ ವಿರೋಧಿ ನೆಲೆಯಲ್ಲೇ ಕಾಣುತ್ತದೆ. ಕೈ ಮುಗಿಯುವ ಮನಸ್ಸಿಗೆ ಪ್ರಶ್ನಿಸುವ ಹಕ್ಕು ನೀಡುವುದನ್ನು ಈ ಸಮಾಜ ಎಂದಿಗೂ ಒಪ್ಪುವುದಿಲ್ಲ. ಹಾಗಾಗಿಯೇ ಸಾಂವಿಧಾನಿಕ ಪ್ರಜಾತಂತ್ರದ ನಡುವೆಯೂ ಆಳ್ವಿಕೆ ನಡೆಸುವವರು ಪ್ರಶ್ನಿಸುವವರ ಕೈ ಕಡಿಯುವ ಅಥವಾ ಬಾಯಿ ಮುಚ್ಚಿಸುವ ಮಾತುಗಳನ್ನು ಆಡುತ್ತಲೇ ಬಂದಿದ್ದಾರೆ.
ಯಜಮಾನಿಕೆಯ ಸಂಸ್ಕೃತಿಯ ನಡುವೆ
ಕೈ ಮುಗಿಯುವ ಒಂದು ಪ್ರಕ್ರಿಯೆಯನ್ನು ಗೌರವ ಸೂಚಕವಾಗಿ, ಶ್ರದ್ಧಾಭಕ್ತಿಯ ಸಂಕೇತವಾಗಿ, ಅಭಿಮಾನಪೂರ್ವಕವಾಗಿ ಕಾಣುವಂತೆಯೇ ದಾಸ್ಯದ ಸಂಕೇತವಾಗಿಯೂ ಕಾಣುವ ಪರಿಸರವನ್ನು ಭಾರತೀಯ ಸಮಾಜದಲ್ಲಿ ಇಂದಿಗೂ ಗುರುತಿಸಬಹುದು. ತಲೆ ಎತ್ತಿ ನೋಡದೆ ನಡುಬಗ್ಗಿಸಿ ಕೈ ಮುಗಿಯುವ ಊಳಿಗಮಾನ್ಯ ಪದ್ಧತಿಯಲ್ಲಿ ಯಜಮಾನಿಕೆಯ ದರ್ಪ ತಳಸಮಾಜವನ್ನು ಶಾಶ್ವತವಾಗಿ ಕೆಳಸ್ತರದಲ್ಲೇ ಇರಿಸಲು ಪ್ರಯತ್ನಿಸುತ್ತದೆ. ರಾಜಪ್ರಭುತ್ವಗಳ ಆಳ್ವಿಕೆಯಲ್ಲಿ ಆಳವಾಗಿ ಬೇರೂರಿದ ಈ ಪದ್ಧತಿ ಅನೇಕಾನೇಕ ಕೆಳಜಾತಿಗಳನ್ನು ಶೋಷಣೆಯ ಕೂಪಗಳನ್ನಾಗಿ ಮಾಡಿರುವುದನ್ನು ಚರಿತ್ರೆಯುದ್ದಕ್ಕೂ ಗಮನಿಸಬಹುದು. ಸಾಮಾಜಿಕ-ಆರ್ಥಿಕ ಯಜಮಾನಿಕೆಯನ್ನು ‘ಪ್ರಶ್ನಿಸುವುದು’ ದೈವತ್ವವನ್ನು ಪ್ರಶ್ನಿಸುವಷ್ಟೇ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. “ನನ್ನೆದುರು ನಿಂತು ಮಾತನಾಡಲು ನಿನಗೆಷ್ಟು ಧೈರ್ಯ” ಎಂಬ ಸಾಮಾನ್ಯ ಮಾತುಗಳಲ್ಲಿ ಇದರ ಒಳಸೂಕ್ಷ್ಮವನ್ನು ಗ್ರಹಿಸಬಹುದು.

ಪ್ರಶ್ನಿಸುವ ವಿವೇಕ1

ರಾಜಪ್ರಭುತ್ವವನ್ನು ಪೋಷಿಸಿ ಬೆಳೆಸಿದ ಊಳಿಗಮಾನ್ಯ ಸಮಾಜವೇ ಮತ್ತೊಂದು ಬದಿಯಲ್ಲಿ ಧಾರ್ಮಿಕ ಆಚರಣೆ-ನಡವಳಿಕೆಗಳ ಮೂಲಕ ಜನಸಾಮಾನ್ಯರಲ್ಲಿ ಅತೀತ ಶಕ್ತಿಗಳಲ್ಲಿನ ಶ್ರದ್ಧಾನಂಬಿಕೆಗಳನ್ನೂ ಬಳಸಿಕೊಂಡು, ಪ್ರಶ್ನಾತೀತತೆಯ ಪರಂಪರೆಯನ್ನೂ ಹುಟ್ಟುಹಾಕಿದೆ. ಈ ಸಾಂಪ್ರದಾಯಿಕ ಸಮಾಜವೇ ದೈವತ್ವ ಅಥವಾ ಅತೀತತೆಯನ್ನು ಪ್ರಶ್ನಿಸುವ ನಿರೀಶ್ವರವಾದಿಗಳನ್ನು-ನಾಸ್ತಿಕ ಪರಂಪರೆಗಳನ್ನು ವಿರೋಧಿಸುತ್ತಾ ಬಂದಿದೆ. ದೈವತ್ವವನ್ನು ಪ್ರಶ್ನಿಸುವುದಕ್ಕೂ ದೈವ ವಿರೋಧಿ ನಿಲುವಿಗೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗಮನಿಸದೆಯೇ, ಪ್ರಶ್ನಾತೀತವಾಗಿ ‘ಕೈ ಮುಗಿದು’ ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಸೃಷ್ಟಿಸುವ ನಿಟ್ಟಿನಲ್ಲಿ ವೈದಿಕ ಸಂಸ್ಕೃತಿಯೂ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಧರ್ಮ ಸಂಹಿತೆಗಳು ಮತ್ತು ಆಚರಣಾ ವಿಧಿ ವಿಧಾನಗಳನ್ನು ನಿರ್ವಚಿಸುವ ಧರ್ಮಶಾಸ್ತ್ರಗಳು ಸಮಾಜದಲ್ಲಿ ಈ ಮನೋವೃತ್ತಿಯನ್ನು ಶಾಶ್ವತಗೊಳಿಸುವ ಸಲುವಾಗಿಯೇ ಹಲವು ನಿರ್ದೇಶನಗಳನ್ನೂ ಸಹ ದಾಖಲಿಸುತ್ತಾ ಬಂದಿವೆ. ಹಾಗಾಗಿಯೇ ಜನಪದೀಯ ನೆಲೆಗಳಲ್ಲಿ ದೈವಶಕ್ತಿಯನ್ನು ಸಮೀಪಿಸುವಷ್ಟು ಸುಲಭವಾಗಿ ಸ್ಥಾಪಿತ ಧರ್ಮಗಳ ಸಾಂಸ್ಥಿಕ ನೆಲೆಗಳಲ್ಲಿ ಸಾಧ್ಯವಾಗುವುದಿಲ್ಲ. ಗರ್ಭಗುಡಿ ಸಂಸ್ಕೃತಿಗೂ ಪ್ರಶ್ನಾತೀತತೆಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಇಲ್ಲಿ ಗುರುತಿಸಬಹುದು.
ಜಾತಿ ಶ್ರೇಣಿಯ ವಿರುದ್ಧ, ಶ್ರೇಣೀಕೃತ ಸಮಾಜವನ್ನು ಧಿಕ್ಕರಿಸಿ, ಶ್ರೇಣಿಯಾಧಾರಿತ ತಾರತಮ್ಯಗಳಿಗೆ ಪ್ರತಿರೋಧ ಒಡ್ಡಿದ ಸಾಮಾಜಿಕ ಚಿಂತಕರೆಲ್ಲರೂ ಪ್ರಶ್ನಾತೀತೆಯನ್ನು ಧಿಕ್ಕರಿಸುತ್ತಲೇ ಬಂದಿರುವುದನ್ನು ಭಾರತದ ಚರಿತ್ರೆಯುದ್ದಕ್ಕೂ ಗುರುತಿಸಬಹುದು. ಸ್ಥಾಪಿತ ವ್ಯವಸ್ಥೆಯ ಕಬ್ಬಿಣದ ಸರಳುಗಳನ್ನು ತುಂಡರಿಸಿ ಹೊರನಡೆದ ಅನೇಕ ಚಿಂತಕರನ್ನು ಆಯಾ ಕಾಲಘಟ್ಟಗಳಲ್ಲಿ ಸಮಾಜ ವಿರೋಧಿಗಳಂತೆಯೂ ಬಿಂಬಿಸಲಾಗಿದೆ. ಈ ಆರೋಪಕ್ಕೆ ರಾಮಮೋಹನ್‌ ರಾಯ್‌, ವಿದ್ಯಾಸಾಗರ್‌, ವಿವೇಕಾನಂದ, ಠಾಗೋರ್ ಗುರಿಯಾದಂತೆಯೇ ಫುಲೆ ದಂಪತಿಗಳು, ಪೆರಿಯಾರ್‌, ಅಂಬೇಡ್ಕರ್‌, ಕುವೆಂಪು ಮೊದಲಾದವರೂ ಗುರಿಯಾಗಿದ್ದಾರೆ. ಆದರೆ ಈ ಎಲ್ಲ ದಾರ್ಶನಿಕರು ಸಮಕಾಲೀನ ಭಾರತದ ಸಾಮಾಜಿಕ-ಸಾಂಸ್ಕೃತಿಕ ಚಿಂತನೆಗಳಿಗೆ ಹೊಸ ಆಯಾಮವನ್ನು ನೀಡಿದ್ದಾರೆ. ಈ ದಾರ್ಶನಿಕ ಧ್ವನಿಗಳಿಗೆ ವರ್ತಮಾನದ ಯುವ ಸಮಾಜ ದ್ವನಿಗೂಡಿಸಬೇಕಿದೆ.
ಏಕೆ ಪ್ರಶ್ನಿಸಬೇಕು?
ಈ ದೃಷ್ಟಿಯಿಂದ ನೋಡಿದಾಗ ಶಾಲೆಯಲ್ಲಾಗಲೀ ಇತರ ಯಾವುದೇ ಸಾಂಸ್ಥಿಕ ನೆಲೆಯಲ್ಲಾಗಲೀ “ಧೈರ್ಯವಾಗಿ ಪ್ರಶ್ನಿಸು” ಎಂಬ ನಿರ್ದೇಶನ ಆಪ್ಯಾಯಮಾನವಾಗಿಯೇ ಕಾಣಬೇಕು. ಸಾಂಪ್ರದಾಯಿಕ, ಆಧುನಿಕ ಸಮಾಜವೂ ಸಹ ಶಾಲಾ ಮಕ್ಕಳಲ್ಲಿ ಗುರುಹಿರಿಯರ ಬಗ್ಗೆ ಗೌರವ-ಸಮ್ಮಾನ-ಆದರಗಳನ್ನು ಅಪೇಕ್ಷಿಸುವುದು ಸಹಜ. ಪ್ರಶ್ನಿಸು ಎಂದು ನಿರ್ದೇಶಿಸುವ ಮೂಲಕ ಈ ಗೌರವಾದರಗಳಿಗೆ ಚ್ಯುತಿ ಉಂಟಾಗಬಹುದು ಎಂಬ ಆತಂಕ ಸಾಂಪ್ರದಾಯಿಕ ಸಮಾಜವನ್ನು ಸಹಜವಾಗಿಯೇ ಕಾಡುತ್ತದೆ. ಪ್ರಶ್ನೆ ಕೇಳುವುದಕ್ಕೆ ಅಲ್ಪಾವಕಾಶ ನೀಡುವ ಶಿಕ್ಷಣ ವ್ಯವಸ್ಥೆ ಪ್ರಶ್ನಿಸುವುದಕ್ಕೂ ಅವಕಾಶ ನೀಡಬಾರದೇಕೆ? ಪ್ರಶ್ನೆ ಕೇಳುವುದೆಂದರೆ ಒಂದು ನಿರ್ದಿಷ್ಟ ಅನುಮಾನ ಪರಿಹರಿಸಿಕೊಳ್ಳಲು ಉತ್ತರ ಬಯಸುವ ಪ್ರಕ್ರಿಯೆ. ಪ್ರಶ್ನಿಸುವುದು ಎಂದರೆ ಸ್ಥಾಪಿತ ಅಥವಾ ಸ್ವೀಕೃತ ಮನಸ್ಥಿತಿಯ ಔಚಿತ್ಯ-ಔನ್ನತ್ಯವನ್ನು ಭೇದಿಸುವ ಒಂದು ಪ್ರಕ್ರಿಯೆ.

ಇದನ್ನು ಓದಿದ್ದೀರಾ?: ಹಿಂದೂಸ್ಥಾನ್ ಕೋ ಲೀಡರೋ ಸೆ ಬಚಾವೋ: ಎಲ್ಲ ಕಾಲಕ್ಕೂ ಸಲ್ಲುವ ಮಂಟೋ ಚಿಂತನೆ 

ಶಾಲಾ ಮಕ್ಕಳಲ್ಲಿ ಈ ಪ್ರಶ್ನಿಸುವ ಮನೋಭಾವ ಬೆಳೆಸುವುದರಿಂದ ಸಮಾಜಕ್ಕೆ ಯಾವುದೇ ಅಪಾಯವಾಗುವುದಿಲ್ಲ. ಬದಲಾಗಿ ತಮ್ಮ ಸುತ್ತಲಿನ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಮತ್ತಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ಸೇತುವೆಗಳಾಗುತ್ತವೆ. ಪ್ರಶ್ನಿಸುವುದೆಂದರೆ ಉದ್ಧಟತನವೆಂದೋ ಅಥವಾ ಗೌರವಾದರಗಳನ್ನು ಮೀರಿದ ವರ್ತನೆ ಎಂದೋ ಭಾವಿಸಬೇಕಿಲ್ಲ. ಒಂದು ಜ್ವಲಂತ ನಿದರ್ಶನ ನೀಡುವುದಾದರೆ, ಶಾಲಾ ಹೆಣ್ಣುಮಕ್ಕಳಲ್ಲಿ ಪಿತೃಪ್ರಧಾನತೆಯನ್ನು ಪ್ರಶ್ನಿಸುವ ಮನೋಭಾವ ಇದ್ದುದೇ ಆದರೆ, ಆ ಬಾಲೆಯರು ತಮ್ಮ ಶಿಕ್ಷಕರಿಂದಲೇ ಅತ್ಯಾಚಾರ-ಲೈಂಗಿಕ ದೌರ್ಜನ್ಯಕ್ಕೊಳಗುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಅಥವಾ ಜಾತಿ ಮೇಲರಿಮೆಯನ್ನು ಪ್ರಶ್ನಿಸಲಾಗಿದ್ದಲ್ಲಿ ನೀರು ಕುಡಿದ ಅಸ್ಪೃಶ್ಯ ಬಾಲಕ ದೈಹಿಕ ಶಿಕ್ಷೆಗೊಳಗಾಗುತ್ತಿರಲಿಲ್ಲ. ಇಲ್ಲಿ ಪ್ರಶ್ನೆಗೊಳಗಾಗಬೇಕಿರುವುದು ನಮ್ಮ ಸಮಾಜ ಅಪ್ಪಿಕೊಂಡಿರುವ ಶೋಷಣೆಯ ಆಳ ಮತ್ತು ವಿಸ್ತಾರ ಹಾಗೂ ಅದನ್ನು ಯಥಾಸ್ಥಿತಿಯಲ್ಲಿರಿಸಲು ಹೆಣಗಾಡುವ ಸಾಂಸ್ಥಿಕ ಯಥಾಸ್ಥಿತಿವಾದದ ಸಮಾಜ.
ಬಸವಣ್ಣ, ಅಲ್ಲಮ, ಕನಕ, ಠಾಗೋರ್‌, ಕುವೆಂಪು ಮೊದಲಾದ ದಾರ್ಶನಿಕರು ತಮ್ಮ ರಚನೆಗಳಲ್ಲಿ ಹೇಳಬಯಸುವುದೂ ಇದನ್ನೇ. ಬಸವಣ್ಣ ತನ್ನ ವಚನವೊಂದರಲ್ಲಿ “ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ…” ಎಂದು ಹೇಳಿದರೆ ತತ್ವಪದಕಾರರು ಸ್ವ-ಅರಿವಿಗಿಂತಲೂ ಅನ್ಯ ದೇವರಿಲ್ಲ ಎಂದು ಹೇಳುತ್ತಾರೆ. ಕನಕ ಜಾತಿವ್ಯವಸ್ಥೆಯ ಬೇರನ್ನೇ ಅಲುಗಾಡಿಸುವಂತೆ ಕುಲದ ನೆಲೆಯನ್ನೇ ಪ್ರಶ್ನಿಸುತ್ತಾನೆ. ಕುವೆಂಪು ತಮ್ಮ ಕವಿತೆಯೊಂದರಲ್ಲಿ “ನೂರು ದೇವರನೆಲ್ಲ ನೂಕಾಚೆ ದೂರ…” ಎಂದು ಹೇಳುವ ಮೂಲಕ ಆಸ್ತಿಕ ನೆಲೆಯಲ್ಲಿ ನಿಂತು ದೈವತ್ವದ ಸಾಂಸ್ಥಿಕತೆಯನ್ನು ಪ್ರಶ್ನಿಸುತ್ತಾರೆ. “ಎಲ್ಲೋ ಹುಡುಕಿದೆ ಇಲ್ಲದ ದೇವರ…” ಎನ್ನುವ ಮೂಲಕ ಜಿ.ಎಸ್.‌ ಶಿವರುದ್ರಪ್ಪ ದೈವತ್ವದ ಪರಿಕಲ್ಪನೆಗೆ ಹೊಸ ಆಯಾಮವನ್ನು ನೀಡುತ್ತಾರೆ. ಮಂಗಳೂರಿನ ಗೆರೋಸಾ ಶಾಲೆಯ ವಿವಾದಕ್ಕೆ ಸಿಲುಕಿರುವ ಠಾಗೋರರ ‘ಕಾಯಕವೇ ಪೂಜೆ’ ಕವಿತೆಯಲ್ಲಿ ನಾಸ್ತಿಕತೆಗಿಂತಲೂ ಹೆಚ್ಚಾಗಿ ಕಾಣುವುದು ಮೂರ್ತಿಪೂಜೆ ಅಥವಾ ಆರಾಧನೆಗೆ ವಿರೋಧ.
ಈ ದಾರ್ಶನಿಕರು ಪ್ರತಿಪಾದಿಸುವ ಪ್ರಶ್ನಾತೀತತೆಯ ಸಾಂಸ್ಕೃತಿಕ-ಧಾರ್ಮಿಕ ನೆಲೆಗಳನ್ನು ಶಾಲಾವಸ್ಥೆಯಿಂದಲೇ ಮಕ್ಕಳಿಗೆ ತಲುಪಿಸಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ. ಇದಕ್ಕೆ ಬೇಕಿರುವುದು ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವ, ಜೊತೆಗೊಂದಿಷ್ಟು ವಿವೇಕ. ಕೈ ಮುಗಿಯಬೇಕಾದರೆ ಇರಬೇಕಾದ ವಿವೇಕ ಮತ್ತು ವಿವೇಚನೆಯೇ ಸಮಾಜದ ದಾಸ್ಯ ಪ್ರವೃತ್ತಿಯನ್ನೂ ನಿಯಂತ್ರಿಸಲು ಸಾಧ್ಯವಾಗುತ್ತದೆ. ಅಂಧಾಭಿಮಾನದಿಂದ ಅಥವಾ ವಿವೇಕವಿಲ್ಲದ ಅನುಕರಣೆ/ಅನುಸರಣೆಯಿಂದ ಆಜ್ಞಾನುಪಾಲನೆಯ ಮಾರ್ಗವನ್ನು ಅನುಸರಿಸಿದಷ್ಟೂ ಸಮಾಜವು ಹಿಮ್ಮುಖ ಚಲನೆಗೆ ಒಳಗಾಗುತ್ತದೆ ಎಂಬ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ  “ಎಲ್ಲವನ್ನೂ ಪ್ರಶ್ನಿಸು – ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳದಿರು” ಎಂಬ ಸಂದೇಶದ ಹಿಂದೆ ಈ ವಿವೇಕದ ಹೊಳಹು, ವೈಚಾರಿಕತೆಯ ಸೂಕ್ಷ್ಮತೆ ಅಡಗಿರುವುದನ್ನು ಗುರುತಿಸಬಹುದು. ಸಮಕಾಲೀನ ಚರಿತ್ರೆಯಲ್ಲೇ ಲೆನಿನ್‌ ಅವರಿಂದ ಅಂಬೇಡ್ಕರ್-ಕುವೆಂಪು ಅವರವರೆಗೂ ಈ ಸಂದೇಶವನ್ನು ಪ್ರಖರವಾಗಿ ಪ್ರಸರಿಸಲಾಗಿದೆ.
ಯಾರೂ ಯಾವುದೂ ಪ್ರಶ್ನಾತೀತವಾಗಕೂಡದು
ಆದರೆ 21ನೆಯ ಶತಮಾನದ ಭಾರತವನ್ನು ಪ್ರಾಚೀನತೆಯೆಡೆಗೆ ಕೊಂಡೊಯ್ಯಲು ಯತ್ನಿಸುತ್ತಿರುವ ಸಾಂಪ್ರದಾಯಿಕ-ಧಾರ್ಮಿಕ ಶಕ್ತಿಗಳು ಜನಸಾಮಾನ್ಯರ ನಡುವೆ ಈ ವೈಚಾರಿಕ ವಿವೇಕವನ್ನು ಬೆಳೆಸಲು ಅಡ್ಡಿಪಡಿಸುತ್ತವೆ. ಪ್ರವಾದಿ ಅಥವಾ ದೈವತ್ವವನ್ನು ಪ್ರಶ್ನಿಸುವುದೇ ಮಹಾಪರಾಧವಾಗಿರುವ ಇಸ್ಲಾಮಿಕ್‌/ಕ್ರೈಸ್ತ/ಹಿಂದೂ ಸಮಾಜಗಳಲ್ಲಿ ಹೇಗೆ ಸಾಂಪ್ರದಾಯಿಕ ಶಕ್ತಿಗಳು ತಮ್ಮ ಪಾರಮ್ಯ-ಪ್ರಾಬಲ್ಯವನ್ನು ಸಾಧಿಸಿವೆ, ಸಮಾಜವನ್ನು ಹೇಗೆ ಸೀಮಿತ ಅರಿವಿನ ಕೋಶಗಳೊಳಗೆ ಬಂಧಿಸಿವೆ ಎನ್ನುವುದನ್ನು ಚರಿತ್ರೆಯೇ ನಿರೂಪಿಸಿದೆ. ಜ್ಞಾನಾರ್ಜನೆಯ ಹಾದಿಯಲ್ಲಿ ಯುವ ಸಂಕುಲವು ಈ ಕೋಶಗಳನ್ನು ಭೇದಿಸಿ ಹೊರಬಂದಾಗ ಮಾತ್ರ ವೈಚಾರಿಕ ವಿವೇಕವನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ವೈಚಾರಿಕತೆಯ ನೆಲೆಗಳು ಶಿಥಿಲವಾದಷ್ಟೂ ವಿವೇಕ ನೇಪಥ್ಯಕ್ಕೆ ಸರಿಯುತ್ತಾ ಇಡೀ ಸಮಾಜವೇ ಪ್ರಶ್ನಾತೀತತೆಯನ್ನು ವೈಭವೀಕರಿಸುವ ಹಂತ ತಲುಪುತ್ತದೆ. ಮತ್ತೊಂದು ಕೋನದಿಂದ ನೋಡಿದಾಗ ಪ್ರಶ್ನಾತೀತತೆಯನ್ನು ಸಾಂಸ್ಥೀಕರಣಗೊಳಿಸಿದಷ್ಟೂ ಸಮಾಜದಲ್ಲಿ ವಿವೇಕ ಮತ್ತು ವಿವೇಚನೆಗಳು ಹಿಂಬದಿಗೆ ಸರಿಯುತ್ತಾ, ವೈಚಾರಿಕತೆ ಕ್ಷೀಣಿಸುತ್ತಾ, ಸಾಮಾಜಿಕ-ಸಾಂಸ್ಕೃತಿಕ ಹಿಮ್ಮುಖ ಚಲನೆಗೆ ಕಾರಣವಾಗುತ್ತದೆ.

ಇದನ್ನು ಓದಿದ್ದೀರಾ?: ವೈಚಾರಿಕ ನಿಲುವು, ಬರಹಗಳ ಮೂಲಕ ಕನ್ನಡಿಗರಿಗೆ ಓದುವ ಅಭಿರುಚಿ ಪೋಷಿಸಿದವರು ‘ಕೆ.ಟಿ.ಗಟ್ಟಿ’

ನವ ಭಾರತ ಇಂದು ಈ ಸಂದಿಗ್ಧತೆಯನ್ನು ಎದುರಿಸುತ್ತಿದೆ. ತಳಮಟ್ಟದ ರಾಜಕಾರಣದಿಂದ ಅತ್ಯುನ್ನತ ಸಂಸತ್‌ವರೆಗೂ ವಿಸ್ತರಿಸುವ ಆಳ್ವಿಕೆಯ ಹರವಿನಲ್ಲಿ ಪ್ರಶ್ನಾತೀತತೆಯೇ ಮೇಳೈಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನವು ಪ್ರಶ್ನಿಸುವ ಮೂಲಭೂತ ಹಕ್ಕನ್ನು ಎತ್ತಿಹಿಡಿಯುವುದಾದರೂ, ಆಳ್ವಿಕೆಯ ವಾರಸುದಾರರನ್ನು ಪ್ರಶ್ನಿಸುವುದು ಶಿಕ್ಷಾರ್ಹ ಅಪರಾಧವಾಗಿ ಪರಿಣಮಿಸುವ ಒಂದು ಪರಿಸ್ಥಿತಿಯನ್ನು ದೇಶ ಎದುರಿಸುತ್ತಿದೆ. ಸಾಂವಿಧಾನಿಕ ಅಂಗಗಳಷ್ಟೇ ಅಲ್ಲದೆ ಸೇನೆಯನ್ನೂ ಒಳಗೊಂಡಂತೆ ಇಡೀ ಆಡಳಿತ ವ್ಯವಸ್ಥೆಯೇ ಪ್ರಶ್ನಾತೀತವಾಗುತ್ತಿದೆ, ಸಾಂಸ್ಥೀಕರಣಗೊಂಡ ಧಾರ್ಮಿಕ ನೆಲೆಗಳೂ, ಅದರೊಳಗಿನ ಪೌರಾಣಿಕ-ಕಾಲ್ಪನಿಕ ವ್ಯಕ್ತಿಗಳೂ, ಆಚರಣಾತ್ಮಕ ವಿಧಿವಿಧಾನಗಳೂ ಪ್ರಶ್ನಾತೀತವಾಗುತ್ತಿವೆ. ಪ್ರಜಾಪ್ರಭುತ್ವದಲ್ಲಿ ನಾಯಕತ್ವವು ಆರಾಧನೆಯಿಂದ ಮುಕ್ತವಾಗಿರಬೇಕು ಅಥವಾ ಪ್ರಶ್ನಾತೀತವಾಗಿರಕೂಡದು ಎಂಬ ಅಂಬೇಡ್ಕರ್ ಅವರ ದಾರ್ಶನಿಕ ನುಡಿಗಳೂ ಸಹ ಇಂದು ಅವಗಣನೆಗೊಳಗಾಗುತ್ತಿವೆ. ಒಂದು ನೆಲೆಯಲ್ಲಿ ಸ್ವತಃ ಅಂಬೇಡ್ಕರರನ್ನೂ ಪ್ರಶ್ನಾತೀತರನ್ನಾಗಿ ನೋಡುವ ಧೋರಣೆಯೂ ಬೆಳೆಯುತ್ತಿದೆ. ‌

ಪ್ರಶ್ನಿಸುವ ವಿವೇಕ2

ಇಲ್ಲಿ ಗಮನಿಸಲೇಬೇಕಾದ ಅಂಶ ಎಂದರೆ ಯಾವುದೇ ನೆಲೆಯಲ್ಲಿನ ಆರಾಧನಾ ಮನೋಭಾವ ಮನುಷ್ಯನ ವಿವೇಕ ಮತ್ತು ವಿವೇಚನೆಯನ್ನು ಶಿಥಿಲಗೊಳಿಸುತ್ತಾ ಹೋಗುತ್ತದೆ. ತತ್ವ ಸಿದ್ದಾಂತಗಳ ಚೌಕಟ್ಟಿನಲ್ಲಿ ವ್ಯಕ್ತಿ ಅಥವಾ ವ್ಯಕ್ತಿತ್ವಗಳನ್ನು ಉಚ್ಛಸ್ಥಾನದಲ್ಲಿರಿಸಿ ಅತೀತರನ್ನಾಗಿಸುವುದರಿಂದ ತಳಮಟ್ಟದ ಸಮಾಜದಲ್ಲಿ ಪ್ರಶ್ನಿಸುವ ಮನೋಭಾವ ಕ್ಷೀಣಿಸುತ್ತಾ ವೈಚಾರಿಕ ಪ್ರಜ್ಞೆ ನಶಿಸುತ್ತಾ ಹೋಗುತ್ತದೆ. ತತ್ಪರಿಣಾಮವಾಗಿ ಇಡೀ ಸಮಾಜ ಮತ್ತೆ ಮತ್ತೆ ಅಂಧಕಾರದತ್ತ ಚಲಿಸಲಾರಂಭಿಸುತ್ತದೆ. ಶ್ರದ್ಧೆ, ನಂಬಿಕೆ ಮತ್ತು ಆಚರಣೆಗಳ ಮೂಲಕ ಈ ಅಂಧಕೂಪಗಳನ್ನು ಯಥಾಸ್ಥಿತಿಯಲ್ಲಿರಿಸಲು ಸಾಂಪ್ರದಾಯಿಕ ಸಮಾಜ ತನ್ನದೇ ಆದ ನಿಯಂತ್ರಕ ಸೂತ್ರಗಳನ್ನು ಪೋಣಿಸುತ್ತಲೇ ಇರುತ್ತದೆ. ವಿವೇಕ ವಿವೇಚನೆಯನ್ನು ಕಳೆದುಕೊಂಡ ಸಮಾಜ ಅವೈಚಾರಿಕತೆಯನ್ನೇ ಶ್ರದ್ಧಾಪೂರ್ವಕವಾಗಿ ಅನುಸರಿಸುತ್ತಾ, ತನ್ನ ಬಾಹ್ಯರೂಪಿ ಆಧುನಿಕತೆಯೊಂದಿಗೇ ಬೌದ್ಧಿಕವಾಗಿ ಪ್ರಾಚೀನತೆಯತ್ತ ಸಾಗುತ್ತದೆ.
ಪ್ರಶ್ನಾತೀತತೆ ಬೇರೂರಿದಷ್ಟೂ ಸಮಾಜವು ತನ್ನ ವಿಮರ್ಶಾತ್ಮಕ ದೃಷ್ಟಿಕೋನವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಚಿಕಿತ್ಸಕ ಗುಣವನ್ನು ಕಳೆದುಕೊಳ್ಳುವ ಸಮಾಜದ ಬೌದ್ಧಿಕ ವಲಯ ಯಥಾಸ್ಥಿತಿವಾದಕ್ಕೆ ಅಂಟಿಕೊಳ್ಳುವ ಅಥವಾ ವೈಭವೀಕರಿಸಿದ ಪ್ರಾಚೀನತೆಯನ್ನೇ ಮೆರೆಸುವ ಮೂಲಕ ಭವಿಷ್ಯದ ಪೀಳಿಗೆಗೆ ಕತ್ತಲೆಯ ಹಾದಿಗಳನ್ನು ನಿರ್ಮಿಸುತ್ತಿರುತ್ತದೆ. ಈ ಹಾದಿಯನ್ನೇ ಕ್ರಮಿಸಿ ದೇಶ ಕಟ್ಟಬೇಕಾದ ಯುವ ಸಂಕುಲಕ್ಕೆ ವೈಚಾರಿಕತೆಯ ಅರಿವು ನೀಡುವುದರೊಂದಿಗೇ, ವಿವೇಕ ಮತ್ತು ವಿವೇಚನೆಯ ಜ್ಞಾನ ಮಾರ್ಗಗಳನ್ನೂ ತೆರೆಯುವುದು ಪ್ರಜ್ಞಾವಂತ ಸಮಾಜದ ಜವಾಬ್ದಾರಿಯಾಗಿದೆ. ಈ ಅರಿವಿನ ನೊಗ ಮತ್ತು ಜ್ಞಾನದ ಹೊರೆಯನ್ನು ಹೊತ್ತುಕೊಂಡೇ ನವ ಭಾರತದ ಪ್ರಜ್ಞಾವಂತ ಜನತೆ, ಕಟ್ಟಕಡೆಯ ವ್ಯಕ್ತಿಯಲ್ಲೂ ಪ್ರಶ್ನಿಸುವ ಮನೋಭಾವವನ್ನು ಮೂಡಿಸುವ ರೀತಿಯಲ್ಲಿ ವೈಚಾರಿಕತೆಯನ್ನು, ವೈಜ್ಞಾನಿಕತೆಯನ್ನು, ವಿವೇಕ ಮತ್ತು ವಿವೇಚನೆಯನ್ನು ಬೆಳೆಸಬೇಕಿದೆ. ಇಲ್ಲಿ “ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ” ಎಂಬ ಕುವೆಂಪು ಅವರ ಚಿಂತನೆಯನ್ನು ವಿಸ್ತರಿಸಿ “ಇಲ್ಲಿ ಯಾರೂ ಪ್ರಶ್ನಾತೀತರಲ್ಲ ಯಾವುದೂ ಪ್ರಶ್ನಾತೀತವಲ್ಲ” ಎನ್ನುವ ಧ್ಯೇಯವಾಕ್ಯವನ್ನು ನಮಗೆ ನಾವೇ ಅರ್ಪಿಸಿಕೊಳ್ಳಬೇಕಿದೆ. ಇದು ವರ್ತಮಾನದ ತುರ್ತು ಎನ್ನುವಷ್ಟೇ ಭವಿಷ್ಯದ ಅನಿವಾರ್ಯತೆಯೂ ಹೌದು.
ನಾ. ದಿವಾಕರ
ನಾ. ದಿವಾಕರ
+ posts

ಮೂಲತಃ ಕೋಲಾರ ಜಿಲ್ಲೆಯ ಚಿಂತಾಮಣಿಯವರಾದ ನಾ.ದಿವಾಕರ ಅವರು ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ. ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಸ್ವಯಂ ನಿವೃತ್ತಿ ಪಡೆದ ಬಳಿಕ ಸಂಪೂರ್ಣವಾಗಿ ಬರಹ ಮತ್ತು ಜನಚಳವಳಿಗಳ ಜೊತೆ ತೊಡಗಿಸಿಕೊಂಡಿದ್ದಾರೆ. ತುರ್ತುಪರಿಸ್ಥಿತಿ ಹೇರಿದ ಕಾಲದಿಂದಲೂ ಪ್ರಜಾಪ್ರಭುತ್ವದ ಪರ ಹೋರಾಟಗಳಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ರಾಜಕೀಯ ವಿಶ್ಲೇಷಣೆ, ಆರ್ಥಿಕ ಒಳನೋಟ, ಅನುವಾದ- ಹೀಗೆ ವಿವಿಧ ಬರಹಗಳಲ್ಲಿ ನಿರತರು. ಹೊಸತು, ಸಂವಾದ, ಕನ್ನಡ ಪ್ರಭ, ವಾರ್ತಾಭಾರತಿ, ಆಂದೋಲನ, ಉದಯವಾಣಿ, ಪ್ರಜಾವಾಣಿ- ಹೀಗೆ ಹಲವು ಪತ್ರಿಕೆಗಳಲ್ಲಿ ಅವರ ಚಿಂತನೆಗಳು ಪ್ರಕಟವಾಗುತ್ತಿವೆ. ಒಟ್ಟು 1000ಕ್ಕೂ ಹೆಚ್ಚು ಲೇಖನಗಳು ನೂರಕ್ಕೂ ಹೆಚ್ಚು ಕವನಗಳು, ಐದಾರು ಕಥೆಗಳನ್ನು ಬರೆದಿದ್ದಾರೆ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ನಾ. ದಿವಾಕರ
ನಾ. ದಿವಾಕರ
ಮೂಲತಃ ಕೋಲಾರ ಜಿಲ್ಲೆಯ ಚಿಂತಾಮಣಿಯವರಾದ ನಾ.ದಿವಾಕರ ಅವರು ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ. ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಸ್ವಯಂ ನಿವೃತ್ತಿ ಪಡೆದ ಬಳಿಕ ಸಂಪೂರ್ಣವಾಗಿ ಬರಹ ಮತ್ತು ಜನಚಳವಳಿಗಳ ಜೊತೆ ತೊಡಗಿಸಿಕೊಂಡಿದ್ದಾರೆ. ತುರ್ತುಪರಿಸ್ಥಿತಿ ಹೇರಿದ ಕಾಲದಿಂದಲೂ ಪ್ರಜಾಪ್ರಭುತ್ವದ ಪರ ಹೋರಾಟಗಳಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. ರಾಜಕೀಯ ವಿಶ್ಲೇಷಣೆ, ಆರ್ಥಿಕ ಒಳನೋಟ, ಅನುವಾದ- ಹೀಗೆ ವಿವಿಧ ಬರಹಗಳಲ್ಲಿ ನಿರತರು. ಹೊಸತು, ಸಂವಾದ, ಕನ್ನಡ ಪ್ರಭ, ವಾರ್ತಾಭಾರತಿ, ಆಂದೋಲನ, ಉದಯವಾಣಿ, ಪ್ರಜಾವಾಣಿ- ಹೀಗೆ ಹಲವು ಪತ್ರಿಕೆಗಳಲ್ಲಿ ಅವರ ಚಿಂತನೆಗಳು ಪ್ರಕಟವಾಗುತ್ತಿವೆ. ಒಟ್ಟು 1000ಕ್ಕೂ ಹೆಚ್ಚು ಲೇಖನಗಳು ನೂರಕ್ಕೂ ಹೆಚ್ಚು ಕವನಗಳು, ಐದಾರು ಕಥೆಗಳನ್ನು ಬರೆದಿದ್ದಾರೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಹಕಾರ ಖಾತೆ | ಡಿಕೆ ಶಿವಕುಮಾರ್ ಗುಂಪಿಗೋ, ಜಾರಕಿಹೊಳಿ ಗುಂಪಿಗೋ?

ಕೆ.ಎನ್. ರಾಜಣ್ಣ ಅವರ ಸಹಕಾರ ಖಾತೆ ತೆರವಾಗಿದೆ. ಯಾರಿಗೆ ಎನ್ನುವುದು ಪ್ರಶ್ನೆಯಾಗಿದೆ....

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

Download Eedina App Android / iOS

X