ಕೆರೆಯ ಜಾಗವನ್ನು ಮಣ್ಣು ತುಂಬಿಸಿಕೊಂಡು ಒತ್ತುವರಿ ಮಾಡುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಕೆರೆಯ ಒತ್ತುವರಿ ತೆರವು ಮಾಡಿ ಕೆರೆಯನ್ನು ಕೆರೆಯನ್ನಾಗಿಯೇ ಉಳಿಸಬೇಕು ಎಂದು ಬೈಚೇನಹಳ್ಳಿ ಗ್ರಾಮಸ್ಥರು ಗ್ರೇಡ್ 2 ತಹಶೀಲ್ದಾರ್ ಶಶಿಕಲಾ ಅವರಿಗೆ ಮನವಿ ಸಲ್ಲಿಸಿದರು.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಕಚೇರಿಗೆ ಗ್ರಾಮಸ್ಥರು ಆಗಮಿಸಿದ್ದು, ಸ್ಥಳೀಯ ಮಂಜುನಾಥ್ ಎಂಬುವವರು ಮಾತನಾಡಿ, “ಬೈಚೇನಹಳ್ಳಿ ಗ್ರಾಮದಲ್ಲಿ 18 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಕೆರೆ ಇದ್ದು, ಕೆರೆಯ ಸುತ್ತಲಿನ ರೈತರ ಪೈಕಿ ಕೆಲವರು ಕೆರೆಯಂಚಿನಲ್ಲಿ ಮಣ್ಣು ಹಾಕಿಕೊಂಡು ಎತ್ತರ ಪ್ರದೇಶ ಮಾಡಿಕೊಂಡು ಕೆರೆಯ ಜಾಗವನ್ನು ಒತ್ತುವರಿ ಮಾಡಲು ಆರಂಭಿಸಿದ್ದಾರೆ. ಕೆರೆಯ ಮುಳುಗಡೆ ಪ್ರದೇಶದಲ್ಲಿದ್ದ ರೈತರಿಗೆ ಈಗಾಗಲೇ ಸರ್ವೇ ನಂಬರ್ 52 ರಲ್ಲಿ 12.32 ಎಕರೆ ಪರ್ಯಾಯ ಜಮೀನು ಸರ್ಕಾರ ನೀಡಿದೆ. ಆದರೆ ಕೆರೆಯಲ್ಲಿ ನೀರಿಲ್ಲ ಎಂಬ ನೆಪದಲ್ಲಿ ಈ ಜಮೀನು ಸಹ ನಮ್ಮದು ಎಂದು ಕೆರೆಯ ಹಳ್ಳದ ಜಾಗವನ್ನು ಮಣ್ಣು ತುಂಬಿ ಕಬಳಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಕೆರೆಯಲ್ಲಿ ನೀರು ಇದ್ದರೆ ಇಲ್ಲಿನ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಈ ಬಗ್ಗೆ ತಿಳಿದೂ ಸಹ ಕೆರೆಯನ್ನೇ ಒತ್ತುವರಿ ಮಾಡಲಾಗುತ್ತಿದೆ. ಕೆರೆಯನ್ನು ಚಿಕ್ಕದಾಗಿಸುತ್ತಾ ಹೋದಲ್ಲಿ ಮುಂದಿನ ಪೀಳಿಗೆಗೆ ಈ ಕೆರೆಯೇ ಇಲ್ಲವಾಗುತ್ತದೆ. ಈ ಕಬಳಿಕೆ ಮಾಡುವವರ ಜಮೀನಿನಲ್ಲಿನ ಕೊಳವೆ ಬಾವಿಯಲ್ಲಿ ಸಹ ನೀರು ಇಲ್ಲವಾಗುತ್ತಿದೆ. ಈ ಬಗ್ಗೆ ತಿಳಿದಿದ್ದರೂ ಕೂಡ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಕ್ರಮ ವಹಿಸಿ ಕೂಡಲೇ ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕು” ಎಂದು ಸ್ಥಳೀಯ ಗಂಗರಾಜ್ ಮನವಿ ಮಾಡಿದರು.
“ಈಗಾಗಲೇ ಭಾರೀ ಬಿಸಿಲು ಎದುರಾಗಿದೆ. ನಾಲ್ಕು ತಿಂಗಳ ಬೇಸಿಗೆ ರೈತರನ್ನು ಕಂಗೆಡಿಸುತ್ತಿರುವ ಈ ಸಮಯದಲ್ಲಿ ಇರುವ ಕೆರೆಯ ಜಾಗವನ್ನು ಕಬಳಿಸಿದರೆ ರೈತರ ಉಳಿವಿಲ್ಲ. ರೈತರ ಜೀವನಾಡಿ ಕೆರೆಯನ್ನು ಮತ್ತೊಬ್ಬ ರೈತನೇ ಒತ್ತುವರಿ ಮಾಡಿದರೆ ಯಾರಿಗೆ ನಮ್ಮ ಕಷ್ಟ ಹೇಳುವುದು ಎನ್ನಿಸುತ್ತಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಕೆರೆಯ ಅಳತೆ ನಡೆಸಿ ಉಳಿಸಿಕೊಡಬೇಕು” ಎಂದು ಸ್ಥಳೀಯ ಮರುಳಪ್ಪ ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ತಾಲೂಕು ಘಟಕ ಉದ್ಘಾಟನೆ
ಈ ಸಂದರ್ಭದಲ್ಲಿ ಬೈಚೇನಹಳ್ಳಿ ಗ್ರಾಮಸ್ಥರಾದ ಪುಟ್ಟಗಂಗಯ್ಯ, ಕೃಷ್ಣಪ್ಪ, ರಾಮಚಂದ್ರಯ್ಯ, ರಂಗಯ್ಯ, ಕುಮಾರ್, ಆನಂದ್, ವಿಶ್ವನಾಥ್, ಪ್ರಸನ್ನ, ರಮೇಶ್, ಶಂಕರ್ ಸೇರಿದಂತೆ ಇತರರು ಇದ್ದರು.
