ಬೇಸಿಗೆಯ ಆರಂಭದಲ್ಲೇ ಬಿಸಿಲ ತಾಪಕ್ಕೆ ಉತ್ತರ ಕರ್ನಾಟಕದ ಜನ ಹೈರಾಣಾಗಿದ್ದು, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನಲ್ಲಿ ಜನರು ನೀರನ್ನು ತಂಪಾಗಿಡಲು ಮಣ್ಣಿನ ಪಾತ್ರೆಗಳ ಮೊರೆಹೋಗುತ್ತಿದ್ದಾರೆ.
ಪಟ್ಟಣದಲ್ಲಿ ಮಣ್ಣಿನ ಮಡಕೆಗಳ ವ್ಯಾಪಾರ ಜೋರಾಗಿದ್ದು, ಹಿಂದಿನ ವರ್ಷ ಮಾರ್ಚ್‌ನಲ್ಲಿ ಬೇಸಿಗೆಯ ಉರಿ ಆರಂಭವಾದರೆ, ಈ ಬಾರಿ ಮಳೆಯಾಗದೇ ಬೇಸಿಗೆಗೂ ಮುನ್ನವೇ ಬಿಸಿಲಿನ ಧಗೆ ಜನರನ್ನು ಸುಡುತ್ತಿದೆ.
ಜಿಲ್ಲೆಯಲ್ಲಿ ಪ್ರತಿ ನಿತ್ಯ 35ರಿಂದ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ಇನ್ನೂ ಬೇಸಿಗೆಯ ದಿನಗಳು ಆರಂಭವಾದರೆ ಈ ಧಗೆ ಇನ್ನೂ ಹೆಚ್ಚಾಗಬಹುದು ಎನ್ನುತ್ತಾರೆ ಸ್ಥಳೀಯರು. ಬಿಸಿಲಿನಿಂದಾಗಿ ಮಧ್ಯಾಹ್ನ 12 ಗಂಟೆ ನಂತರ ನಗರದ ರಸ್ತೆಯಲ್ಲಿ ಜನ ಸಂಚಾರ ದಿನೇ ದಿನೆ ವಿರಳವಾಗುತ್ತಿದೆ. ದೇಹವನ್ನು ತಂಪಾಗಿರಿಸಲು ಜನರು ತಂಪುಪಾನೀಯಗಳ ಮೊರೆಹೋಗುತ್ತಿದ್ದಾರೆ.
ಬೇಸಿಗೆಯಲ್ಲಿ ಮನೆಯಲ್ಲಿ ನೀರು ತಂಪಾಗಿರಿಸಲು ಮಾರುಕಟ್ಟೆಯಲ್ಲಿ ಮಣ್ಣಿನ ವಸ್ತುಗಳ ಮಾರಾಟ ಆರಂಭವಾಗಿದೆ. ಬಡವರ ಫ್ರಿಡ್ಜ್ ಎಂದು ಕರೆಸಿಕೊಳ್ಳುವ ಮಣ್ಣಿನ ಮಡಕೆ, ಹರವೆ ಮತ್ತು ಕೆಂಪು ಮಣ್ಣಿನ ಕೊಡಗಳಿಗೆ ಬೇಡಿಕೆ ಹೆಚ್ಚಾಗಿದೆ. ಮನೆಯಲ್ಲಿ ನೀರನ್ನು ತಂಪಾಗಿರಿಸಲು ಕೆಲವರು ಮಣ್ಣಿನ ಪಾತ್ರೆಗಳ ಖರೀದಿಗೆ ಮೊರೆಹೋಗಿದ್ದಾರೆ.
ಮಣ್ಣಿನ ಪಾತ್ರೆಗಳು ಮಾರಾಟವಾಗುತ್ತಿರುವುದರಿಂದ ಕುಂಬಾರರ ಮೊಗದಲ್ಲಿ ಕೊಂಚ ಸಂತಸ ಮೂಡಿದ್ದು, ಕಪ್ಪು ಮಣ್ಣಿನ ಹರವಿ 150ರೂ.ದಿಂದ 200 ರೂ.ಗೆ ಮಾರಾಟವಾಗುತ್ತಿವೆ. ಕೆಂಪು ಮಣ್ಣಿನ ಕೊಡ 250ರೂ.ಯಿಂದ 400ರೂ.ವರೆಗೂ ತನಕ ಮಾರಾಟವಾಗುತ್ತಿವೆ ಎನ್ನುತ್ತಿದ್ದಾರೆ ಕುಂಬಾರರು.
ಒಟ್ಟಿನಲ್ಲಿ ಬೇಸಿಗೆಯ ಬಿಸಿಗೆ ಸಾಕಾಗಿರುವ ಜನ ದೇಹವನ್ನು ತಂಪಾಗಿಡಲು ನಾನಾ ಮಾರ್ಗಗಳನ್ನು ಹುಡುಕುತ್ತಿದ್ದು, ಮಣ್ಣಿನ ಮಡಿಕೆಗಳಿಗೆ ಬೆಲೆಬಂದಿದೆ. ಇದು ಕುಂಬಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
