ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಹಲವು ಪಾರ್ಕ್‌ಗಳನ್ನು ಭೂಗಳ್ಳರು ಹಾಗೂ ಪಾಲಿಕೆಯ ಕಂದಾಯ ಅಧಿಕಾರಿಗಳು ನಕಲಿ ದಾಖಲಿಗಳನ್ನು ಸೃಷ್ಟಿಸಿ ಅಮಾಯಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್ ದೇವರಮನೆ ಹೇಳಿದರು.
ದಾವಣಗೆರೆ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ವಾರ್ಡ್ ನಂ.23 ಶಾಮನೂರು ಗ್ರಾಮದ ರಿ.ಸ.ನಂ.78/2ರ ಪೈಕಿ 2 ಎಕರೆ ಪ್ರದೇಶವನ್ನು ಜಿಲ್ಲಾಧಿಕಾರಿಯವರಿಂದ ವಾಸೋಪಯೋಗಕ್ಕಾಗಿ ಅಲಿನೇಷನ್ ಮಾಡಿಸಿ, ಡೈರೆಕ್ಟರ್ ಆಫ್ ಟೌನ್ ಪ್ಲಾನಿಂಗ್ ಬೆಂಗಳೂರು ಇವರಿಂದ ಅಪ್ರೂವಲ್ ಮಾಡಿಸಿ, ನಗರಸಭೆಯಿಂದ ಡೋರ್ ನಂಬರ್ ನೀಡಲಾಗಿದೆ” ಎಂದರು.
“ಅನುಮೋದನೆಯಾಗಿರುವ ನಕ್ಷೆಯಲ್ಲಿನ ಓಪನ್ ಸ್ಪೇಸ್ ಖಾಲಿ ಜಾಗಕ್ಕೆ ಹೆಚ್ಚುವರಿಯಾಗಿ ಉಪ ಅಸ್ತಿ ನಂಬರ್ ನೀಡಿ, ಎಂಎಆರ್-19, ಕೆಎಂಎಫ್-24 ಪುಸ್ತಕದಲ್ಲಿ ವಿಷಯ ನಿರ್ವಾಹಕರು ಮಹಾನಗರ ಪಾಲಿಕೆ ಮತ್ತು ಕಂದಾಯಾಧಿಕಾರಿಗಳು ಮಹಾನಗರ ಪಾಲಿಕೆ ದಾವಣಗೆರೆ ಇವರು ಖಾತೆ ತೆರೆದು ಖಾತಾ ಎಂಡಾಸ್ಮೆಂಟ್ ನೀಡಿ ನೋಂದಣಿ ಪಕ್ರಿಯೆಗೆ ಅನೂಕೂಲ ಮಾಡಿಕೊಟ್ಟಿದ್ದಾರೆ” ಎಂದು ಆರೋಪಿಸಿದರು.
“ಒಟ್ಟು 30+40 ಅಳತೆಯ ನಾಲ್ಕು ಖಾಲಿ ನಿವೇಶನಗಳು ಬೇರೆಬೇರೆ ಹೆಸರಿಗೆ ನೋಂದಣಿಯಾಗಿರುತ್ತದೆ. ಓಪನ್ ಸ್ಪೇಸ್ ಖಾಲಿ ಜಾಗದ ಮೌಲ್ಯ ಇಂದು ಕೋಟ್ಯಾಂತರ ರೂಪಾಯಿ ಆಗಿದೆ” ಎಂದು ಹೇಳಿದರು.
“ವಾರ್ಡ್ ನಂ. 28 ಭಗತ್ ಸಿಂಗ್ ನಗರ ನಿಟ್ಟುವಳ್ಳಿ ರಿ.ಸ.ನಂ-123/5ರ ಪೈಕಿ 2ಎಕರೆ 38 ಗುಂಟೆ ಪ್ರದೇಶಕ್ಕೆ ನಗರ ಯೋಜನಾ ಪ್ರಾಧಿಕಾರ ದಾವಣಗೆರೆ- ಹರಿಹರ ಸ್ಥಳೀಯ ಯೋಜನ ಪ್ರದೇಶ ಇವರಿಂದ ಅಂತಿಮ ಅನುಮೋದನೆಯಾಗಿರುವ ನಕ್ಷೆಯಲ್ಲಿನ ಪಾರ್ಕ್‌ನ ಖಾಲಿ ಜಾಗಕ್ಕೆ ಹೆಚ್ಚುವರಿಯಾಗಿ ಉಪ ಅಸ್ತಿ ನಂಬರ್ ನೀಡಿ ಮಹಾನಗರ ಪಾಲಿಕೆ ಮತ್ತು ಕಂದಾಯ ಅಧಿಕಾರಿಗಳು, ನೋಂದಾಣಿ ಪ್ರಕ್ರಿಯೆಗೆ ಅನೂಕೂಲ ಮಾಡಿಕೊಟ್ಟಿದ್ದಾರೆ” ಎಂದು ಆರೋಪಿಸಿದರು.
“ಹಲವು ಬಡಾವಣೆಗಳಲ್ಲಿ ಹೀಗೆ ಮಾಡಲಾಗಿದೆ. ದಾವಣಗೆರೆ ನಗರದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಭೂ ಮಾಫಿಯಾದಲ್ಲಿ ಉದ್ಯಾನವನಗಳು, ಸಿ ಎ ಸೈಟ್‌ಗಳಿಗೆ ಸರ್ಕಾರದಿಂದ ಮೀಸಲಿಟ್ಟಿರುವ ಹಲವಾರು ನಿವೇಶನಗಳು ಅಧಿಕಾರಿಗಳ ಸಹಕಾರದಿಂದ ಭೂಗಳ್ಳರ ಕೈಗೆ ಸಿಕ್ಕಿ, ಅಮಾಯಕರಿಗೆ ಮಾರಾಟವಾಗಿ, ಆಮಾಯಕರು ಲಕ್ಷಾಂತರ ರೂಗಳನ್ನು ಕಳೆದುಕೊಂಡು ಪರದಾಡುವ ಪರಿಸ್ಥಿತಿ ಹೆಚ್ಚಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾತೃಭಾಷೆ ಕಡ್ಡಾಯವಾಗಬೇಕೆಂಬ ಕುವೆಂಪು ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ: ನ್ಯಾ. ಎನ್ ವಿ ಅಂಜಾರಿಯ
“ಜಿಲ್ಲಾಧಿಕಾರಿ, ಆಯುಕ್ತರು, ಜನಪ್ರತಿನಿಧಿಗಳು ಕೂಡಲೇ ತನಿಖೆ ನಡೆಸಿ ಒತ್ತುವರಿಯಾಗಿರುವ ಮೀಸಲು ಸರ್ಕಾರಿ ನಿವೇಶನಗಳನ್ನು ವಶಪಡಿಸಿಕೊಂಡು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಬೇಕಾಗಿದೆ. ಜಿಲ್ಲಾಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ” ಎಂದು ಎಚ್ಚರಿಸಿದರು.
ಕರುನಾಡ ಕನ್ನಡ ಸೇನೆಯ ಅಧ್ಯಕ್ಷ ಕೆ ಟಿ ಗೋಪಾಲಗೌಡರು, ಪರಿಸರ ಸಂರಕ್ಷಣಾ ವೇದಿಕೆ ನಾಗರಾಜ್ ಸುರ್ವೆ, ಪ್ರಸನ್ನ ಬೆಳಕೆರೆ, ಮಾರುತಿ, ಪ್ರವೀಣ್ ಸೇರಿದಂತೆ ಇತರರು ಇದ್ದರು.
