ಲೋಕಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಉಳಿದಿವೆ. ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಎರಡನೇ ಬಾರಿಗೆ ಕೇರಳದ ವಯನಾಡ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಅನಿಶ್ಚಿತತೆ ಇದೆ. ಈ ಬಾರಿಯೂ ರಾಹುಲ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ. ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರ ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇನ್ನು, ಮತ್ತೊಂದು ಕ್ಷೇತ್ರವಾಗಿ ಕೇರಳದ ವಯನಾಡ್ ಬದಲಿಗೆ ಕರ್ನಾಟಕ ಅಥವಾ ತೆಲಂಗಾಣದಿಂದ ಸ್ಪರ್ಧಿಸುವಂತೆ ಪಕ್ಷವು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.
ಕೇರಳದಲ್ಲಿ ಇಂಡಿಯಾ ಮೈತ್ರಿಕೂಟದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನೊಂದಿಗೆ ಕಾಂಗ್ರೆಸ್ ಕ್ಷೇತ್ರ ಹಂಚಿಕೆಗೆ ಕಸರತ್ತು ನಡೆಸುತ್ತಿದೆ. ಆ ಪಕ್ಷವು ವಯನಾಡ್ ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದೆ ಎನ್ನಲಾಗಿತ್ತು. ಹೀಗಾಗಿ, ಅಲ್ಲಿ ರಾಹುಲ್ ಸ್ಪರ್ಧಿಸದಿದ್ದರೆ, ಆ ಕ್ಷೇತ್ರವನ್ನು ಮುಸ್ಲಿಂ ಲೀಗ್‌ಗೆ ಬಿಟ್ಟುಕೊಡಲು ಕಾಂಗ್ರೆಸ್ ಚಿಂತಿಸಿದೆ.
ಸೋಮವಾರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್ ಅವರು ಕೇರಳದ ಅಲೆಪ್ಪಿಯಿಂದ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಒಂದೇ ರಾಜ್ಯದಲ್ಲಿ ಇಬ್ಬರು ಪ್ರಮುಖ ನಾಯಕರು ಸ್ಪರ್ಧಿಸಿದರೆ ಪಕ್ಷದ ಪ್ರಾಬಲ್ಯ ತೆಳುವಾಗುತ್ತದೆ ಎಂಬ ಭಾವನೆಯೂ ಕಾಂಗ್ರೆಸ್‌ನಲ್ಲಿದೆ. ಇದಲ್ಲದೆ, ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಅಥವಾ ತೆಲಂಗಾಣದಲ್ಲಿ ರಾಹುಲ್ ಸ್ಪರ್ಧಿಸಿದರೆ, ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಕೈ ಪಡೆ ಯೋಜಿಸಿದೆ.
ಏತನ್ಮಧ್ಯೆ, ‘ಇಂಡಿಯಾ’ ಕೂಟದ ಭಾಗವಾಗಿರುವ ಸಿಪಿಐ, ವಯನಾಡ್‌ನಲ್ಲಿ ತನ್ನ ಅಭ್ಯರ್ಥಿಯಾಗಿ ಅನ್ನಿ ರಾಜಾ ಅವರನ್ನು ಘೋಷಿಸಿದೆ. ಅವರು ಕೇರಳದ ಆಡಳಿತಾರೂಢ ಎಲ್‌ಡಿಎಫ್‌ನ ಮೈತ್ರಿ ಅಭ್ಯರ್ಥಿಯೂ ಆಗಿದ್ದಾರೆ. ಅವರು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರ ಪತ್ನಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ಹೀಗಾಗಿ ಇಂಡಿಯಾ ಒಕ್ಕೂಟದ ಇಬ್ಬರು ನಾಯಕರು ಪರಸ್ಪರ ಹೋರಾಡುವುದು ಮೈತ್ರಿಗೆ ಕೆಟ್ಟ ಹೆಸರು ತರುತ್ತದೆ. ಮೈತ್ರಿಕೂಟದ ಮೇಲೆ ದಾಳಿ ಮಾಡಲು ಬಿಜೆಪಿಗೆ ಮದ್ದುಗುಂಡುಗಳನ್ನು ನೀಡುತ್ತದೆ ಎಂದು ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಡಿ ರಾಜಾ, “ಸಿಪಿಐ-ಕಾಂಗ್ರೆಸ್ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ವಯನಾಡ್ ಸಿಪಿಐ ಕ್ಷೇತ್ರ. ನಾವು ರಾಹುಲ್ ಅಥವಾ ಕಾಂಗ್ರೆಸ್ ಜೊತೆ ಸೀಟಿನ ಬಗ್ಗೆ ಚರ್ಚಿಸಿಲ್ಲ. ನಾವು ನಮ್ಮ ಎಲ್‌ಡಿಎಫ್ ಕೂಟದ ಮಿತ್ರಪಕ್ಷಗಳೊಂದಿಗೆ ಮಾತ್ರ ಚರ್ಚಿಸಿದ್ದೇವೆ” ಎಂದು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ನ್ಯಾಯ ಯಾತ್ರೆ | ಸೀಟು ಹಂಚಿಕೆಯಾದ ಬೆನ್ನಲ್ಲೇ ರಾಹುಲ್ ಜೊತೆ ಹೆಜ್ಜೆ ಹಾಕಿದ ಅಖಿಲೇಶ್
2019ರ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿ 4.31 ಲಕ್ಷ ಮತಗಳ ಅಂತರದಿಂದ ಸಿಪಿಐ ಅಭ್ಯರ್ಥಿ ಪಿ.ಪಿ ಸುನೀರ್ ಅವರನ್ನು ಸೋಲಿಸಿದರು. ಆದಾಗ್ಯೂ, ತಮ್ಮ ನೆಲೆಯಾಗಿದ್ದ ಕ್ಷೇತ್ರ ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತರು.
ಅಮೇಥಿಯಲ್ಲಿ ಇರಾನಿ ವಿರುದ್ಧ ರಾಹುಲ್ ಕಣಕ್ಕಿಳಿಯುತ್ತಾರೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೂ, ಅಲ್ಲಿನ ಕಾಂಗ್ರೆಸ್ ಮಿತ್ರ ಪಕ್ಷವಾದ ಸಮಾಜವಾದಿ ಪಕ್ಷವು ರಾಹುಲ್ ಅವರೇ ಅಲ್ಲಿ ಸ್ಪರ್ಧಿಸಬೇಕೆಂದು ಬಯಸುತ್ತಿದೆ ಎಂದು ವರದಿಯಾಗಿದೆ.