ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಕೀಲರೊಬ್ಬರಿಗೆ ಬೈಕ್ ಡಿಕ್ಕಿಯಾಗಿ ಮೃತಪಟ್ಟ ಘಟನೆ ಬೆಂಗಳೂರಿನ ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ಕೆ.ಟಿ.ಡಾಕಪ್ಪ ಮೃತಪಟ್ಟವರು. ಶಿವಮೊಗ್ಗದ ತೀರ್ಥಹಳ್ಳಿಯ ಕೌರಿ ಮೂಲದವರಾದ ಇವರು ಹೈಕೋರ್ಟ್ ಹಾಗೂ ಇತರ ನ್ಯಾಯಾಲಯದಲ್ಲಿ ಹಿರಿಯ ವಕೀಲರಾಗಿದ್ದರು. ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತ ಇಲ್ಲಿಯೇ ನೆಲೆಸಿದ್ದರು.
ಫೆ.26ರ ರಾತ್ರಿ 9 ಗಂಟೆ ಸುಮಾರಿಗೆ ಬಸವನಗುಡಿಯ ಗಾಂಧಿ ಬಜಾರ್ ರಸ್ತೆಯಲ್ಲಿ ಕೆ.ಟಿ.ಡಾಕಪ್ಪ ಅವರು ಕಾರು ನಿಲ್ಲಿಸಿ ಡಿವಿಜಿ ರಸ್ತೆಯ ಕಚೇರಿಗೆ ಹೋಗಿದ್ದರು. ಬಳಿಕ, ಮನೆಗೆ ಹೋಗಲು ವಾಪಸ್ ಕಾರ್ ಬಳಿ ನಡೆದುಕೊಂಡು ಬರುವಾಗ ಕೆಟಿಎಂ ಬೈಕ್‌ನಲ್ಲಿ ವೇಗವಾಗಿ ಬಂದ ಆದಿತ್ಯ ಎಂಬ 21 ವರ್ಷದ ಯುವಕ ವಕೀಲರಿಗೆ ಗುದ್ದಿದ್ದಾನೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ವಕೀಲರು ಕೆಳಗೆ ಬಿದ್ದಿದ್ದು, ಈ ಅಪಘಾತದಲ್ಲಿ ವಕೀಲರಿಗೆ ತೀವ್ರ ಪೆಟ್ಟು ಬಿದ್ದಿದೆ.
ಕೂಡಲೇ ಸ್ಥಳೀಯರು ಡಾಕಪ್ಪ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ, ಫೆ.27ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ವಕೀಲರು ಸಾವನ್ನಪ್ಪಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಾತೃಭಾಷೆ ಕಡ್ಡಾಯವಾಗಬೇಕೆಂಬ ಕುವೆಂಪು ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ: ನ್ಯಾ. ಎನ್ ವಿ ಅಂಜಾರಿಯ
ವಕೀಲರಿಗೆ ಗುದ್ದಿದ ಬೈಕ್ ಸವಾರ ಆದಿತ್ಯ ಎಂಬ ಯುವಕನಿಗೂ ಗಂಭೀರ ಗಾಯಗಳಾಗಿವೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನಾ ಸ್ಥಳಕ್ಕೆ ಬಸವನಗುಡಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.