ಸಂತಾನಹರಣ, ಗರ್ಭಕೋಶ ಚಿಕಿತ್ಸೆ ಹಾಗೂ ಸಿಸರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಸಾವನ್ನಪ್ಪಿದ್ದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಆಸ್ಪತ್ರೆಯಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವೈದ್ಯೆ ಹಾಗೂ ಇಬ್ಬರು ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ.
ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಫೆಬ್ರವರಿ 22 ರಂದು ಒಟ್ಟು ಏಳು ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ಪೈಕಿ ಮೂವರು ಮಹಿಳೆಯರು ಸಾವನ್ನಪ್ಪಿದ್ದರು. ಅವರಲ್ಲಿ, ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ವೀರ್ಲಗೊಂದಿ ಗ್ರಾಮದ ಅನಿತಾ ಎಂಬವರು ಅಂದೇ ಸಾವನ್ನಪ್ಪಿದ್ದರು.
ರಾಜವಂತಿ ಮೂಲದ ಅಂಜಲಿ ಎಂಬವರಿಗೆ ಸಿಸರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ, ಆಕೆಯನ್ನು ಬೆಂಗಳೂರಿಗೆ ರವಾನಿಸಲಾಗಿತ್ತು. ಆದರೆ, ಆಕೆ ಫೆ.24ರಂದು ಮೃತಪಟ್ಟಿದ್ದರು. ಬ್ಯಾಡನೂರು ಗ್ರಾಮದ ನರಸಮ್ಮ ಎಂಬವರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಫೆ.25ರಂದು ಮೃತಪಟ್ಟಿದ್ದರು.
ಮಹಿಳೆಯೆರ ಸಾವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯೆ ಡಾ. ಪೂಜಾ, ಶಸ್ತ್ರಚಿಕಿತ್ಸೆ ಘಟಕದ ಟೆಕ್ನಿಷಿಯನ್ ಕಿರಣ್ ಹಾಗೂ ಸ್ಟಾಫ್ ನರ್ಸ್ ಪದ್ಮಾವತಿ ಅವರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಲಾಗಿದೆ. ಹೀಗಾಗಿ, ಮೂವರನ್ನೂ ಕರ್ತವ್ಯ ಲೋಪ, ನಿರ್ಲಕ್ಷ್ಯ, ಬೇಜವಾಬ್ದಾರಿತನದ ಆರೋಪದ ಮೇಲೆ ಅಮಾನತು ಮಾಡಿ ತುಮಕೂರು ಜಿಲ್ಲಾ ವೈದ್ಯಾಧಿಕಾರಿ (ಡಿಎಚ್‌ಒ) ಆದೇಶ ಹೊರಡಿಸಿದ್ದಾರೆ.