ಇತ್ತೀಚಿಗೆ ಕೇರಳ ದ ವಯನಾಡಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ಸಂತ್ರಸ್ತ ಕುಟುಂಬ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ನೀಡಿದ 15 ಲಕ್ಷ ರೂ. ನೆರವನ್ನು ನಿರಾಕರಿಸಿದೆ. ಬಿಜೆಪಿಯ ಸಂಕುಚಿತ ರಾಜಕೀಯಕ್ಕೆ ಬೇಸರ ವ್ಯಕ್ತಪಡಿಸಿ ಹಣ ಬೇಡವೆಂದು ಹೇಳಿದೆ.
ಫೆ.10ರಂದು ವಯನಾಡಿನ ಮನಾಂತವಾಡಿ ಬಳಿಯ ಪಯ್ಯಂಪ್ಪಲ್ಲಿ ಎಂಬಲ್ಲಿ ಬೇಲೂರಿನ ಮಾಕ್ನಾ ಎಂಬ ಕಾಡಾನೆ ತುಳಿತದಿಂದ ಅಜೀಶ್ ಜೋಸೆಫ್ ಮನಚಿಯಿಲ್(42) ಎಂಬುವವರು ಮೃತಪಟ್ಟಿದ್ದರು.
ಫೆ.26ರಂದು ಸಾರ್ವಜನಿಕಗೊಳಿಸಿದ ಪತ್ರದಲ್ಲಿ ಅಜೀಶ್ ಜೋಸೆಫ್ ಕುಟುಂಬ, “ಮಧ್ಯಸ್ಥಿಕೆ ವಹಿಸಿದ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ. ಆದಾಗ್ಯೂ ನಮಗಾದ ನಷ್ಟವನ್ನು ಯಾರೊಬ್ಬರು ತಂದುಕೊಡಲು ಸಾಧ್ಯವಿಲ್ಲ. ಇಂತಹ ಸಂಕಷ್ಟದ ಸಮಯದಲ್ಲೂ ಪ್ರತಿಯೊಬ್ಬರು ನಮ್ಮ ಜೊತೆಗೆ ಇರುವರೆಂದು ಭಾವಿಸುತ್ತೇವೆ. ಆದರೆ ಕರ್ನಾಟಕದಲ್ಲಿ ಬಿಜೆಪಿಯು ಈ ವಿವಾದವನ್ನು ರಾಜಕೀಯಗೊಳಿಸುವುದನ್ನು ಕೇಳಿ ನಮಗೆ ದುಃಖವಾಗಿದೆ. ಇವರ ಪ್ರತಿಕ್ರಿಯೆ ಅಮಾನವೀಯವಾಗಿದೆ. ಈ ಸಂದರ್ಭದಲ್ಲಿ ನಾವು ಹಣಕಾಸು ನೆರವನ್ನು ಗೌರವಿತವಾಗಿ ನಿರಾಕರಿಸುತ್ತೇವೆ” ಎಂದು ತಿಳಿಸಿದ್ದಾರೆ.
ಫೆ.19ರಂದು ವಯನಾಡ್ ಸಂಸದ ಹಾಗೂ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅಜೀಶ್ ಕುಟುಂಬಕ್ಕೆ ಕರೆ ಮಾಡಿ ಕರ್ನಾಟಕ ನೇತೃತ್ವದ ಕಾಂಗ್ರೆಸ್ ಸರ್ಕಾರ 15 ಲಕ್ಷ ರೂ. ನೆರವು ನೀಡಿದೆ ಎಂದು ತಿಳಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸದ ಸಂಸದರು, ಉತ್ತರಿಸದ ಪ್ರಧಾನಿ ಮತ್ತು ದಿಕ್ಕೆಟ್ಟ ದೇಶ
ಇದೇ ದಿನದಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜೆಯೇಂದ್ರ ಸಾಮಾಜಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ರಾಹುಲ್ ಗಾಂಧಿಯವರನ್ನು ಸಂತೈಸಲು ಸಂತ್ರಸ್ತ ಕುಟುಂಬಕ್ಕೆ ನೆರವು ನೀಡಿರುವ ಕರ್ನಾಟಕದ ನಿರ್ಧಾರ ಕರ್ನಾಟಕ ತೆರಿಗೆ ಪಾವತಿದಾರರ ಹಣವನ್ನು ಅತಿರೇಕವಾಗಿ ದುರ್ಬಳಕೆ ಮಾಡುವುದಾಗಿದೆ. ಕರ್ನಾಟಕದ ಆನೆಯ ಮೇಲೆ ಸುಳ್ಳು ಆರೋಪ ಹೊರಿಸುತ್ತಿರುವುದು ವಿಶ್ವಾಸ ದ್ರೋಹವಾಗಿದೆ” ಎಂದು ತಿಳಿಸಿದ್ದರು.
ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಕರ್ನಾಟಕದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಬಿಜೆಪಿಯು ಮಾನವೀಯತೆಯ ವಿರುದ್ಧವಾಗಿದೆ. ಆನೆ ಕರ್ನಾಟಕದ ಕಣ್ಗಾವಲಿಯಲ್ಲಿ ಇದ್ದ ಕಾರಣ ಮಾನವೀಯತೆಯ ನೆಲೆಯಲ್ಲಿ ನೆರವನ್ನು ನೀಡಲಾಗಿತ್ತು ಎಂದಿದ್ದರು.
ಈ ನಡುವೆ ಕೇರಳ ಸರ್ಕಾರ ಶನಿವಾರ(ಫೆ.24) ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂ. ನೆರವು ನೀಡಿದೆ. ಇತರ ಸ್ವಯಂಸೇವಾ ಸಂಸ್ಥೆಗಳು ಹಾಗೂ ಕುಟುಂಬಗಳು ಕುಟುಂಬಕ್ಕೆ ನೆರವು ನೀಡುವುದಾಗಿ ತಿಳಿಸಿವೆ.