ಈ ದಿನ ಸಂಪಾದಕೀಯ | ಪ್ರಶ್ನಿಸದ ಸಂಸದರು, ಉತ್ತರಿಸದ ಪ್ರಧಾನಿ ಮತ್ತು ದಿಕ್ಕೆಟ್ಟ ದೇಶ

Date:

ಬಿಜೆಪಿಯ ‘ಪ್ರಶ್ನಾತೀತ’ ನಾಯಕ ಪ್ರಧಾನಿ ನರೇಂದ್ರ ಮೋದಿಯವರು, ಕಳೆದ ಹತ್ತು ವರ್ಷಗಳ ಕಾಲ ಒಂದೇ ಒಂದು ಪತ್ರಿಕಾಗೋಷ್ಠಿ ಕರೆಯಲಿಲ್ಲ, ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಲಿಲ್ಲ, ಉತ್ತರವನ್ನೂ ಕೊಡಲಿಲ್ಲ. ಪ್ರಜಾ ಸತ್ತೆಯ ಮೂಲ ಉದ್ದೇಶವೇ, ಪ್ರಶ್ನೆ ಮಾಡು ಉತ್ತರ ಪಡೆ. ಪ್ರಶ್ನಿಸುವ ವಿವೇಕವನ್ನು ಕಳೆದುಕೊಂಡ ಸಮಾಜ ಸಾಂಸ್ಕೃತಿಕವಾಗಿ ಜಡ್ಡುಗಟ್ಟಿ ಹೋಗಲಿದೆ. ಜಡ್ಡಾಗದ ಜನ ಈಗಲಾದರೂ ಪ್ರಭುತ್ವವನ್ನು ಪ್ರಶ್ನಿಸಬೇಕಾಗಿದೆ.

ರಾಜ್ಯದ ಎಲ್ಲ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಇದ್ದ ‘ಜ್ಞಾನದೇಗುಲ ಧೈರ್ಯವಾಗಿ ಪ್ರಶ್ನಿಸು’ ಎಂಬ ಘೋಷ ವಾಕ್ಯವನ್ನು ಬದಲಾಯಿಸಿರುವ ಸಮಾಜ ಕಲ್ಯಾಣ ಇಲಾಖೆ ಕ್ರಮ ಖಂಡಿಸಿ ಬಿಜೆಪಿಯ ರವಿಕುಮಾರ್, ವಿಧಾನ ಪರಿಷತ್ತಿನಲ್ಲಿ ‘ಏನು ಅಂತ ಪ್ರಶ್ನಿಸಬೇಕು?’ ಎಂದು ಭಾರೀ ಗದ್ದಲವೆಬ್ಬಿಸಿದ್ದರು.

ಆ ತಕ್ಷಣವೇ ಬಿಜೆಪಿ ಐಟಿ ಸೆಲ್, ‘ಜ್ಞಾನದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ಕುವೆಂಪು ಅವರ ಘೋಷವಾಕ್ಯವನ್ನು ವಿರೂಪಗೊಳಿಸಲಾಗಿದೆ, ಅವರಿಗೆ ಅವಮಾನ ಮಾಡಲಾಗಿದೆ ಎಂಬ ಪೋಸ್ಟರ್ ಮಾಡಿದರು. ಬಿಜೆಪಿಯ ಹಿರಿ-ಕಿರಿ-ಮರಿ ನಾಯಕರೆಲ್ಲ ಐಟಿ ಸೆಲ್ ಮಾಡಿದ ರೆಡಿಮೇಡ್ ಪೋಸ್ಟರ್‍‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿದರು. ಕುವೆಂಪು ಅವರಿಗೆ ಕಾಂಗ್ರೆಸ್ ಸರ್ಕಾರದಿಂದ ಅವಮಾನವಾಗಿದೆ ಎಂದು ಬೊಬ್ಬೆ ಹಾಕಿದರು. ಅದಕ್ಕೆ ಗೋದಿ ಮೀಡಿಯಾದ ಪತ್ರಕರ್ತರು ಅದನ್ನು ಸುದ್ದಿ ಮಾಡಿ, ಸದ್ದು ಮಾಡಿದರು.

ಅಸಲಿಗೆ ಅದು ಕುವೆಂಪು ಅವರ ಘೋಷ ವಾಕ್ಯವಲ್ಲ, ಬಿಜೆಪಿಗರಿಗೆ ಕುವೆಂಪು ಕಂಡರೆ ಪ್ರೀತಿ-ಗೌರವಗಳೂ ಇಲ್ಲ. ಕುವೆಂಪು ಹೆಸರನ್ನು ಮುಂದೆ ತಂದರೆ, ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ಇಕ್ಕಟ್ಟಿನ ಸಂದರ್ಭ ಸೃಷ್ಟಿಸಿದರೆ, ಅದರಿಂದ ರಾಜಕೀಯ ಲಾಭ ಪಡೆಯಬಹುದು ಎನ್ನುವುದಷ್ಟೇ ಅವರ ಉದ್ದೇಶವಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಸಲಿಗೆ, ‘ಧೈರ್ಯವಾಗಿ ಪ್ರಶ್ನಿಸು’ ಎನ್ನುವುದನ್ನು ಬಿಜೆಪಿ ನಾಯಕರು ವಿರೋಧಿಸಿರುವುದು ಸರಿಯಾಗಿಯೇ ಇದೆ. ಏಕೆಂದರೆ ಬಿಜೆಪಿಗರಿಗೆ ಪ್ರಶ್ನಿಸುವ ಧೈರ್ಯವೂ ಇಲ್ಲ, ಪ್ರಶ್ನಿಸುವುದು ಅವರ ಜಾಯಮಾನವೂ ಅಲ್ಲ.

ರಾಜ್ಯದಿಂದ ಆಯ್ಕೆಯಾಗಿರುವ 27 ಬಿಜೆಪಿ ಸಂಸದರು ರಾಜ್ಯದ ಪರ ವಕಾಲತ್ತು ವಹಿಸಿ, ತೆರಿಗೆ ವಂಚನೆ, ಬರ ಪರಿಹಾರ, ನಿರುದ್ಯೋಗ, ಬೆಲೆ ಏರಿಕೆ, ಹಿಂದಿ ಹೇರಿಕೆ, ಅಮುಲ್ ವಿಲೀನ, ಕನ್ನಡ ಶಾಸ್ತ್ರೀಯ ಸ್ಥಾನಮಾನ, ಅನುದಾನಕ್ಕಾಗಿ ಧೈರ್ಯವಾಗಿ ಪ್ರಶ್ನೆ ಮಾಡಿದ್ದಿದೆಯೇ? ಕೊನೆ ಪಕ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾದರೂ ಇದೆಯೇ?

ಬದಲಿಗೆ ಬಿಜೆಪಿಯ ‘ಪ್ರಶ್ನಾತೀತ’ ನಾಯಕ ನರೇಂದ್ರ ಮೋದಿಯವರೇ, ‘ಕಳೆದ ಐದು ವರ್ಷದಲ್ಲಿ ಒಟ್ಟು 1,354 ಗಂಟೆ ಅಧಿವೇಶನ ನಡೆದಿದೆ, ಅದರಲ್ಲಿ ಒಂಬತ್ತು ಲೋಕಸಭಾ ಸದಸ್ಯರು ಅಧಿವೇಶನಕ್ಕೆ ಹಾಜರಾಗಿದ್ದಾರೆ, ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಆ ಒಂಬತ್ತು ಸದಸ್ಯರಲ್ಲಿ ನಾಲ್ವರು ಕರ್ನಾಟಕದ ಸಂಸದರು’ ಎಂದಿದ್ದಾರೆ.

ಆ ಒಂಬತ್ತು ಮಹಾಮಹಿಮರಲ್ಲಿ ನಾಲ್ವರು ಸಂಸದರು- ಉತ್ತರ ಕನ್ನಡದ ಅನಂತಕುಮಾರ್ ಹೆಗಡೆ, ಬಿಜಾಪುರದ ರಮೇಶ್ ಜಿಗಜಿಣಗಿ, ಚಿಕ್ಕಬಳ್ಳಾಪುರದ ಬಿ.ಎನ್. ಬಚ್ಚೇಗೌಡ ಮತ್ತು ಚಾಮರಾಜನಗರದ ವಿ. ಶ್ರೀನಿವಾಸ ಪ್ರಸಾದ್- ಕರ್ನಾಟಕದವರೇ ಆಗಿರುವುದು ನಾಡಿನ ಮತದಾರರ ದೌರ್ಭಾಗ್ಯ. ಇವರನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿದ ಮತದಾರರು, ‘ಇವರು ನಮಗೆ ಬೇಕಾ’ ಎಂದು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ. ಐದು ವರ್ಷಗಳ ಕಾಲ ಪ್ರಶ್ನೆ ಕೇಳದೆ, ಕ್ಷೇತ್ರವನ್ನು ಕತ್ತಲೆಯಲ್ಲಿಟ್ಟ ಸಂಸದರಿಗೆ ಸೂಕ್ತ ‘ಮರ್ಯಾದೆ’ ಮಾಡಬೇಕಾಗಿದೆ.

ಈ ನಾಲ್ವರು ಸಂಸದರಲ್ಲಿ ಮೂವರು- ಶ್ರೀನಿವಾಸ ಪ್ರಸಾದ್, ಜಿಗಜಿಣಗಿ ಮತ್ತು ಬಚ್ಚೇಗೌಡ- ವಯಸ್ಸಾಗಿ, ನಿವೃತ್ತಿಯ ಅಂಚಿನಲ್ಲಿದ್ದಾರೆ. ಇವರಿಗೆ ಯಾವ ಪಕ್ಷವಾದರೂ, ಯಾರು ಪ್ರಧಾನಿಯಾದರೂ ಏನೂ ಆಗಬೇಕಾದ್ದಿಲ್ಲ. ಇಂತಹವರನ್ನು ಮತದಾರರು ಕಸಕ್ಕಿಂತ ಕಡೆಯಾಗಿ ಕಂಡು ತಿರಸ್ಕರಿಸಬೇಕಿದೆ. ಇನ್ನು ಉತ್ತರ ಕನ್ನಡದ ಸಂಸದ ಅನಂತಕುಮಾರ್ ಹೆಗಡೆಯಂತೂ, ಸಂವಿಧಾನವನ್ನು ಬದಲಾಯಿಸಲು ಬಂದಿದ್ದೇವೆ ಎಂದಿದ್ದರು. ಸಮಯ ಸಿಕ್ಕಾಗಲೆಲ್ಲ ಮುಸ್ಲಿಮರ ವಿರುದ್ಧ ಬೆಂಕಿ ಕಾರಿದ್ದರು. ಸನಾತನ ಶ್ರೇಷ್ಠ ಎನ್ನುತ್ತಲೇ ಸಹಬಾಳ್ವೆಗೆ ಸಂಚಕಾರ ತಂದಿದ್ದರು. ಆದರೆ ಆಡಬೇಕಾದ ಕಡೆ ಆಡದೆ, ಉತ್ತರ ಕುಮಾರನಾಗಿದ್ದರು.

ಸಂಸತ್ತಿನಲ್ಲಿ ಮಾತನಾಡದ ಈ ಬಿಜೆಪಿ ಸಂಸದರಾದ ರಮೇಶ್ ಜಿಗಜಿಣಗಿ, ಸಿದ್ದೇಶ್ವರ್, ಸದಾನಂದಗೌಡ, ಪ್ರಲ್ಹಾದ್ ಜೋಶಿ, ಅನಂತಕುಮಾರ್ ಹೆಗಡೆಯವರ ಆಸ್ತಿ ಮಾತ್ರ ದುಪ್ಪಟ್ಟಾಗಿದೆ. ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿಯೇ ಬಿಜೆಪಿಗರ ಬಂಡವಾಳವನ್ನು ಬಯಲಿಗಿಟ್ಟಿದೆ. ಕೇವಲ 20 ವರ್ಷಗಳ ಹಿಂದೆ ಸಾಮಾನ್ಯರಂತಿದ್ದ ಇವರು ಇಂದು ನೂರಾರು ಕೋಟಿಗಳ ಒಡೆಯರಾಗಿದ್ದು ಹೇಗೆ, ಇವರ ಮೇಲೆ ಐಟಿ, ಇಡಿ, ಸಿಬಿಐ ದಾಳಿಗಳೇಕಿಲ್ಲ?

ಇನ್ನು ಬಿಜೆಪಿಯ ‘ಪ್ರಶ್ನಾತೀತ’ ನಾಯಕ ನರೇಂದ್ರ ಮೋದಿಯವರು, ಕಳೆದ ಹತ್ತು ವರ್ಷಗಳ ಕಾಲ ಒಂದೇ ಒಂದು ಪತ್ರಿಕಾಗೋಷ್ಠಿ ಕರೆಯಲಿಲ್ಲ, ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಲಿಲ್ಲ, ಉತ್ತರವನ್ನೂ ಕೊಡಲಿಲ್ಲ.

ಪ್ರಜಾ ಸತ್ತೆಯ ಮೂಲ ಉದ್ದೇಶವೇ, ಪ್ರಶ್ನೆ ಮಾಡು ಉತ್ತರ ಪಡೆ. ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ, ಬಡವರ ಸಂಖ್ಯೆ ಹೆಚ್ಚಾಗುತ್ತಿರುವುದು; ಈ ದೇಶದ ಸಂಪತ್ತೆಲ್ಲವೂ ಕೇವಲ ಕೆಲವರ ಪಾಲಾಗುತ್ತಿರುವುದು; ಅವರ ರಕ್ಷಣೆಗೆ ಇಡೀ ಸರಕಾರ ಟೊಂಕ ಕಟ್ಟಿ ನಿಲ್ಲುತ್ತಿರುವುದು; ಇದನ್ನು ದೇಶದ ಜನತೆ ಗುರುತಿಸದೇ ಇದ್ದರೆ ದೇಶ ಇನ್ನಷ್ಟು ಅಪಾಯಕ್ಕೆ ತುತ್ತಾಗಲಿದೆ.

ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕನ್ನು ನಮ್ಮ ಸಂವಿಧಾನವೇ ನಮಗೆ ಕಲ್ಪಿಸಿಕೊಟ್ಟಿದೆ. ಪ್ರಶ್ನಿಸುವ ವಿವೇಕವನ್ನು ಕಳೆದುಕೊಂಡ ಸಮಾಜ ಸಾಂಸ್ಕೃತಿಕವಾಗಿ ಜಡ್ಡುಗಟ್ಟಿ ಹೋಗಲಿದೆ. ಜಡ್ಡಾಗದ ಜನ ಪ್ರಶ್ನಿಸಬೇಕಾಗಿದೆ. ಈಗ ಪ್ರಭುತ್ವ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಸಮಯವೂ ಬಂದಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...