ನೆರೆಯ ದೇಶಗಳಿಂದ ಭಾರತಕ್ಕೆ ಬಂದು ನೆಲಸಿರುವ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮುಂದಿನ ತಿಂಗಳು ಜಾರಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ನೋಂದಣಿಗೆ ಆನ್‌ಲೈನ್ ಪೋರ್ಟಲ್ ಹಾಗೂ ಕಾರ್ಯಾವಿಧಾನದ ಸ್ವರೂಪ ಕೇಂದ್ರ ಗೃಹ ಇಲಾಖೆಯಿಂದ ಈಗಾಗಲೇ ಸಿದ್ಧಪಡಿಸಲಾಗಿದ್ದು, ಲೋಕಸಭೆ ಚುನಾವಣೆಗೂ ಮೊದಲೇ ಕಾಯ್ದೆ ಜಾರಿಯಾಗಬಹುದು ಎಂದು ಹೇಳಲಾಗಿದೆ.
ಸಿಎಎ ಜಾರಿಯಿಂದ ನೆರೆಯ ದೇಶಗಳಿಂದ ವಲಸಿಗರಾಗಿ ಆಗಮಿಸಿ ದಾಖಲೆಯಿಲ್ಲದೆ ವಾಸಿಸುತ್ತಿರುವವರಿಗೆ ಅನುಕೂಲವಾಗಲಿದೆ. ಸಚಿವಾಲಯ ಸ್ವೀಕರಿಸಿದ ದೀರ್ಘಾವಧಿ ವೀಸಾಗಳಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಪಾಕಿಸ್ತಾನದಿಂದ ಬಂದಿವೆ.
ಸಿಎಎ ಜಾರಿಗೊಳಿಸಲು ಪೂರ್ವಗಾಮಿಯಾಗಿ ದೀರ್ಘಾವಧಿ ವೀಸಾಗಳಿಗೆ ನೀಡುವ ಅಧಿಕಾರವನ್ನು ಈಗಾಗಲೇ ಜಿಲ್ಲಾಡಳಿತಕ್ಕೆ ನೀಡಲಾಗಿದೆ.
1955ರ ಪೌರತ್ವ ಕಾಯ್ದೆಯಡಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಆಗಮಿಸಿದ ಹಿಂದುಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡುವ ಅಧಿಕಾರವನ್ನು ಕಳೆದ ಎರಡು ವರ್ಷಗಳಲ್ಲಿ 30 ಮ್ಯಾಜಿಸ್ಟ್ರೇಟರುಗಳು ಹಾಗೂ 9 ರಾಜ್ಯಗಳ ಗೃಹ ಕಾರ್ಯದರ್ಶಿಗಳಿಗೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸದ ಸಂಸದರು, ಉತ್ತರಿಸದ ಪ್ರಧಾನಿ ಮತ್ತು ದಿಕ್ಕೆಟ್ಟ ದೇಶ
ಗೃಹ ಇಲಾಖೆಯ ವಾರ್ಷಿಕ ವರದಿಯಂತೆ, ಏಪ್ರಿಲ್ 1, 2021ರಿಂದ ಡಿಸೆಂಬರ್ 31, 2021ರವರೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಬಂದ ಒಟ್ಟು 1414 ಮುಸ್ಲಿಮೇತರರಿಗೆ 1955ರ ಪೌರತ್ವ ಕಾಯ್ದೆಯಡಿ ಭಾರತೀಯ ಪೌರತ್ವ ನೀಡಲಾಗುತ್ತದೆ.
ನೂತನ ನಿಯಮಗಳು ಮುಸ್ಲಿಮರ ವಿರುದ್ಧ ತಾರತಮ್ಯ ಹಾಗೂ ಭಾರತೀಯ ಸಂವಿಧಾನದ ಜಾತ್ಯತೀತ ತತ್ವವನ್ನು ಉಲ್ಲಂಘಿಸುತ್ತವೆ ಎಂದು ವಿಪಕ್ಷಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ 2019ರಲ್ಲಿ ದೇಶಾದ್ಯಂತ ಪ್ರತಿಭಟನೆಯ ಬಿರುಗಾಳಿಯನ್ನು ಹಬ್ಬಿಸಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಪ್ರತಿಭಟನೆಗಳು ತಣ್ಣಗಾಗಿದ್ದವು. ಪ್ರತಿಭಟನೆಗಳು ಅಂತ್ಯಗೊಳ್ಳುವ ಮೊದಲು, ದೇಶಾದ್ಯಂತ ಹೊರತರಬೇಕಾಗಿದ್ದ ರಾಷ್ಟ್ರೀಯ ನಾಗರಿಕರ ನೋಂದಣಿ ಕಾಯ್ದೆಯನ್ನು ಕೇಂದ್ರವು ತಡೆಹಿಡಿದಿತ್ತು.
ಕಳೆದ ತಿಂಗಳು ಪೌರತ್ವ ಕಾಯ್ದೆ ಬಗ್ಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ದೇಶದ ಮುಸ್ಲಿಂ ಸಹೋದರರನ್ನು ದಾರಿತಪ್ಪಿಸಿ ಪ್ರಚೋದಿಸಲಾಗುತ್ತಿದೆ. ಕಾಯ್ದೆಯು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ದೌರ್ಜನ್ಯಕ್ಕೊಳಗಾಗಿ ಆಗಮಿಸಿದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತದೆ.ಇಲ್ಲಿನ ಭಾರತೀಯರ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಹಾಗಾಗಿ, ಲೋಕಸಭಾ ಚುನಾವಣೆಗೂ ಮುನ್ನವೇ ಇದು ಜಾರಿಯಾಗಲಿದೆ” ಎಂದು ತಿಳಿಸಿದ್ದರು.
