ಬೆಳಗಾವಿ ಜಿಲ್ಲೆಯ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಎಸ್‌ಯುಸಿಐ(ಕಮ್ಯೂನಿಸ್ಟ್) ಪಕ್ಷದ ನೇತೃತ್ವದಲ್ಲಿ ರೈತರು, ಮನರೇಗಾ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆಯನ್ನು ತಯಾರಿಸಿ, ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಜಿಲ್ಲೆಯ ಸ್ಥಳೀಯರಿಗೆ ಶೀಘ್ರದಲ್ಲಿ ಕನಿಷ್ಟ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, “ಜಿಲ್ಲೆಯಲ್ಲಿ ತೀವ್ರವಾದ ಬರಗಾಲವಿದೆ. ರೈತರು-ಕೃಷಿ ಕೂಲಿ ಕಾರ್ಮಿಕರು ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಬರ ಪರಿಹಾರ ನೀಡಿಲ್ಲ. ತೀವ್ರ ಬರಗಾಲವಿರುವುದರಿಂದ ಬರಗಾಲ ಕಾಮಗಾರಿ ಆರಂಭಿಸಿ ಕೂಲಿ ಕಾರ್ಮಿಕರ ಗುಳೆಯನ್ನು ತಪ್ಪಿಸಬೇಕು. ಜಾನುವಾರುಗಳಿಗೆ ಮೇವು ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು” ಎಂದು ಆಗ್ರಹಿಸಿದರು.
“ಅಸಂಖ್ಯಾತ ಯುವಜನರು ನಿರುದ್ಯೋಗಿಗಳಾಗಿದ್ದು, ಸರ್ಕಾರದ ಹಲವು ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಉದ್ಯೋಗ ಸೃಷ್ಟಿಗೆ ಪೂರಕವಾದ ಉದ್ಯಮಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು. ಬೆಳಗಾವಿ ನಗರವು ರಾಜ್ಯದ ಎರಡನೇ ರಾಜಧಾನಿಯೆಂಬಂತೆ ಬಿಂಬಿತವಾಗಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಸಾಗಿದೆ. ಇಲ್ಲಿ ಸುವರ್ಣ ಸೌಧವೂ ನಿರ್ಮಾಣವಾಗಿ ವರ್ಷದಲ್ಲೊಮ್ಮೆ ಕಾಟಾಚಾರಕ್ಕೆಂಬಂತೆ ಅಧಿವೇಶನ ನಡೆಯುತ್ತದೆ. ಆದರೆ ಜನರು ಬೆಂಗಳೂರಿಗೆ ಅಲೆಯುವುದೇನೂ ತಪ್ಪಿಲ್ಲ. ಅದಕ್ಕೆ ಇತ್ತೀಚೆಗೆ ನಡೆದ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಹರಿದು ಬಂದ ಅರ್ಜಿಗಳೇ ಸಾಕ್ಷಿ” ಎಂದರು.
“ಸರ್ಕಾರದ ಅರ್ಧದಷ್ಟು ಇಲಾಖೆಗಳನ್ನಾದರೂ ಸುವರ್ಣಸೌಧಕ್ಕೆ ಸ್ಥಳಾಂತರಗೊಳಿಸುವ ಕೆಲಸ ತುರ್ತಾಗಿ ಆಗಬೇಕು. ಬೆಳಗಾವಿ ಜಿಲ್ಲೆಯಲ್ಲಿ ಮೂರ‍್ನಾಲ್ಕು ದೊಡ್ಡ ನದಿಗಳಿದ್ದರೂ ಜನರು ಕುಡಿಯುವ ನೀರಿಗೆ ಹಾಹಾಕಾರ ಪಡಬೇಕಾಗಿದೆ. ಬೆಳಗಾವಿ ನಗರದಲ್ಲಿ ಈಗ ಮೂರು ದಿನಕೊಮ್ಮೆ ನೀರು ಬಿಡಲಾಗುತ್ತಿದೆ. ಅದೂ ಕೂಡಾ ಜನರ ಅವಶ್ಯಕತೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಹಳ್ಳಿಗಳ ನೀರಿನ ವ್ಯವಸ್ಥೆಯಂತೂ ಅಯೋಮಯವಾಗಿದೆ. ಜಿಲ್ಲೆಯ ಬಹುತೇಕ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಕಸ ವಿಲೇವಾರಿ, ಚರಂಡಿ ಸ್ವಚ್ಛತೆ, ರಾಜಕಾಲುವೆಗಳ ಸ್ವಚ್ಛತೆ ನಿರಂತರವಾಗಿ ನಡೆಯುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಆದ್ಯತೆ ನೀಡಬೇಕು” ಎಂದು ಹೇಳಿದರು.
ಎಸ್‌ಯುಸಿಐ(ಕಮ್ಯೂನಿಸ್ಟ್) ಪಕ್ಷದ ನಾಯಕ ಲಕ್ಷ್ಮಣ ಜಡಗನ್ನವರ ಮಾತನಾಡಿ, “ಜಿಲ್ಲೆಯಲ್ಲಿ ಹೊಸದಾಗಿ ಬಹು ಸೌಲಭ್ಯಗಳುಳ್ಳ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಕಟ್ಟಡ ಉದ್ಘಾಟನೆಯಾಗಿ ವರ್ಷವೇ ಕಳೆದರೂ ಅದು ಕಾರ್ಯಾರಂಭವಾಗಿಲ್ಲ. ಕೂಡಲೇ ಪ್ರಾರಂಭಿಸಿ ತಜ್ಞವೈದ್ಯರ ನೇಮಕ ಮಾಡಬೇಕು. ಸಕಲ ಚಿಕಿತ್ಸೆ ಹಾಗೂ ಔಷಧಿಗಳು ಉಚಿತವಾಗಿ ಎಲ್ಲರಿಗೂ ನಿರಂತರವಾಗಿ ಸಿಗುವಂತಾಗಬೇಕು” ಎಂದರು.
“ರಾಜ್ಯದಲ್ಲಿಯೇ ಬೆಳಗಾವಿ ಅತಿ ದೊಡ್ಡ ಜಿಲ್ಲೆಯಾಗಿದ್ದು, ಗಡಿಭಾಗದ ಜನರು ಜಿಲ್ಲಾ ಕೇಂದ್ರಕ್ಕೆ ಬರಲು ಪರದಾಡುವಂತಾಗಿದೆ. ಆದ್ದರಿಂದ ಸರ್ಕಾರವು ವೈಜ್ಞಾನಿಕವಾಗಿ ಜಿಲ್ಲೆಯನ್ನು ವಿಭಜನೆ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲೆಯ ಪ್ರಮುಖ ಬೆಳೆ ಕಬ್ಬು ಆಗಿದ್ದು, ಬರಗಾಲದಿಂದಾಗಿ ಬೆಳೆಗಾರರಿಗೆ ಸೂಕ್ತ ಇಳುವರಿ ಸಿಗದೆ ನಷ್ಟಕ್ಕೊಳಗಾಗಿದ್ದಾರೆ. ಅವರಿಗೂ ಕೂಡ ಬೆಳೆ ಪರಿಹಾರ ನೀಡಬೇಕು. ಕಾರ್ಖಾನೆಗೆ ಕಬ್ಬು ಕಳಿಸಿದ 15 ದಿನಗಳೊಗಾಗಿ ರೈತರ ಖಾತೆಗಳಿಗೆ ಕಬ್ಬಿನ ಬಿಲ್ ಜಮಾ ಮಾಡಬೇಕು” ಎಂದು ಒತ್ತಾಯಿಸಿದರು.
“ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ ಶಾಲಾ ಕಾಲೇಜುಗಳಲ್ಲಿ ಬೋಧಕರ ಕೊರತೆ ತೀವ್ರವಾಗಿದ್ದು, ಕೂಡಲೇ ಖಾಯಂ ನೇಮಕಾತಿಗಳನ್ನು ಮಾಡಬೇಕು. ಶಾಲಾ ಕಾಲೇಜುಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಬೇಕು” ಎಂದು ಅವರು ಆಗ್ರಹಿಸಿದರು.
“ಬರಗಾಲದಲ್ಲಿ ಮನರೇಗಾ ಯೋಜನೆಯ ಮಾನವ ದಿನಗಳನ್ನು 150 ದಿನಗಳಿಗೆ ಹೆಚ್ಚಿಸಲು ಅವಕಾಶವಿದೆ. ಅದನ್ನು ಕೂಡಲೇ ಜಾರಿ ಮಾಡಬೇಕು. ಮನರೇಗಾ ಕೂಲಿಯನ್ನು ₹600ಕ್ಕೆ ಹಾಗೂ ಮಾನವ ದಿನಗಳನ್ನು 200ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಗುಳೆಯನ್ನು ತಪ್ಪಿಸಲು ತಕ್ಷಣ ಬರಗಾಲ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು” ಎಂದು ಒತ್ತಾಯಿಸಿದರು.
“ಜಾನುವಾರುಗಳಿಗೆ ಮೇವು ಕೇಂದ್ರ ಸ್ಥಾಪನೆ ಮಾಡಬೇಕು. ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ವಿತರಿಸಬೇಕು. ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಭತ್ಯೆಯನ್ನು ಹೆಚ್ಚು ಮಾಡಬೇಕು. ಯುವಜನರಿಗೆ ಉದ್ಯೋಗ ನೀಡಲು ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
ಕಾರ್ಖಾನೆಗಳಿಗೆ ಕಳಿಸಿದ ಕಬ್ಬಿನ ಬಿಲ್ಲನ್ನು ರೈತರಿಗೆ ಸಕಾಲದಲ್ಲಿ ಪಾವತಿಸಬೇಕು. ಬರಗಾಲದಿಂದ ಹಾನಿಯಾದ ಕಬ್ಬಿಗೆ ಸೂಕ್ತ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
“ಬೇಸಿಗೆಯಲ್ಲಿ ಬೆಳಗಾವಿ ನಗರ ಸೇರಿದಂತೆ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಎಲ್ಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ವ್ಯವಸ್ಥೆಯಾಗಬೇಕು. ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ದುರಸ್ತಿ ಮಾಡಬೇಕು ಮತ್ತು ಸ್ವಚ್ಛತೆಯನ್ನು ಕಾಪಾಡಬೇಕು. ಸಿವಿಲ್ ಆಸ್ಪತ್ರೆಯ ನೂತನ ಕಟ್ಟಡ ಕೂಡಲೇ ಕಾರ್ಯಾರಂಭ ಮಾಡಬೇಕು. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗಬೇಕು. ಬೆಳಗಾವಿ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳು, ಕಾಲೇಜುಗಳು, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲ ಶಿಕ್ಷಕರ/ಭೋದಕ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಜತೆಗೆ ಹೆಚ್ಚಿನ ವಸತಿ ನಿಲಯಗಳನ್ನು ತೆರೆಯಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ
“ಜಿಲ್ಲೆಯ ಎಲ್ಲ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಅವಶ್ಯಕತೆಗನುಗುಣವಾಗಿ ತಜ್ಞ ವೈದ್ಯ, ಸಿಬ್ಬಂದಿ ನೇಮಕಾತಿ ಮಾಡಬೇಕು.
ಧಾರವಾಡದಿಂದ ಸವದತ್ತಿ ಮಾರ್ಗವಾಗಿ ಕುಡಚಿಯನ್ನು ಸೇರುವಂತೆ ರೈಲು ಮಾರ್ಗವನ್ನು ನಿರ್ಮಾಣ ಮಾಡಬೇಕು. ಬೆಳಗಾವಿ ನಗರದ ನಗರ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕು ಹಾಗೂ ವಿವಿಧ ಮಾರ್ಗಗಳ ಮತ್ತು ಬಸ್ಸುಗಳ ಓಡಾಟದ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಬಸ್ಸುಗಳನ್ನು ಬಿಡಬೇಕು. ಜಿಲ್ಲೆಗೆ ಮಂಜೂರಾದ ವಿವಿಧ ನೀರಾವರಿ ಯೋಜನೆಗಳನ್ನು ಕೂಡಲೇ ಕಾರ್ಯಾರಂಭ ಮಾಡಿ, ಕಾಲಮಿತಿಯೊಳಗೆ ಮುಗಿಸಬೇಕು. ಎಲ್ಲ ಕೆರೆಗಳನ್ನು ತುಂಬಿಸಬೇಕು. ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಇಲಾಖೆಗಳು ಸ್ಥಳಾಂತರವಾಗಬೇಕು” ಎಂದು ಆಗ್ರಹಿಸಿದರು.
ಪಕ್ಷದ ಸದಸ್ಯರುಗಳಾದ ಲಕ್ಕಪ್ಪ ಬಿಜ್ಜನ್ನವರ, ರಾಜು ಗಾಣಗಿ ಸೇರಿದಂತೆ ಇತರರು ಇದ್ದರು.
