ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ನ ಅಜಯ್ ಮಾಕನ್, ಸೈಯದ್ ನಾಸಿರ್ ಹುಸೇನ್, ಜಿ.ಸಿ.ಚಂದ್ರಶೇಖರ್ ಮತ್ತು ಬಿಜೆಪಿಯ ನಾರಾಯಣ ಭಾಂಡಗೆ ಗೆಲುವು ಸಾಧಿಸಿದ್ದಾರೆ. ಗೆಲುವು ಸಾಧಿಸಿದ ಬಳಿಕ ಮಂಗಳವಾರ ವಿಧಾನಸೌಧದಲ್ಲಿ ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ಎನ್ನಲಾದ ವ್ಯಕ್ತಿಯೊಬ್ಬರು ‘ನಾಸೀರ್ ಸಾಬ್ ಜಿಂದಾಬಾದ್‘ ಎಂದು ಕೂಗಿದ್ದ ಘೋಷಣೆಯನ್ನು ಬಿಜೆಪಿ ಮತ್ತು ಕೆಲ ಮಾಧ್ಯಮಗಳು ‘ಪಾಕ್ ಪರ‘ ಘೋಷಣೆಯೆಂದು ತಿರುಚಿ, ಸುಳ್ಳು ಹಬ್ಬಿಸುತ್ತಿವೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಸ್ಪಷ್ಟನೆ, ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೂ, ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ಆರೋಪದ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಘೋಷಣೆಯನ್ನು ತಿರುಚಿ, ಸುಳ್ಳು ಹಬ್ಬಿಸುತ್ತಿದ್ದರೂ, ‘ಪಾಕ್ ಪರ ಘೋಷಣೆ’ ಕೂಗಲಾಗಿದೆಯೆಂದು ವಿಧಾನಸೌಧ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ ಸೆಕ್ಷನ್ 505(1)(B), 153B ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘೋಷಣೆ ಕೂಗಿದವರ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದಾರೆ.
ಒಂದು ತಂಡ ತಾಂತ್ರಿಕ ಮಾಹಿತಿ ಅಧರಿಸಿ ಪತ್ತೆ ಕಾರ್ಯದಲ್ಲಿ ತೊಡಗಿದೆ. ಮತ್ತೊಂದು ತಂಡ ವಿಧಾನಸೌಧಕ್ಕೆ ನಾಸೀರ್ ಹುಸೇನ್ ಜತೆಗೆ ಬಂದವರ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಇನ್ನೊಂದು ತಂಡ ಘಟನೆಯ ವಿಡಿಯೋ ಪರಿಶೀಲಿಸಿ ಅಪರಿಚಿತ ಆರೋಪಿಯ ಪತ್ತೆಗೆ ಹುಡುಕಾಟ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಹಿಳೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ನಾಲ್ವರು ಸಂಚಾರ ಪೊಲೀಸರ ಅಮಾನತು
ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖಾಧಿಕಾರಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಸಿರ್ ಹುಸೇನ್, “ಆ ರೀತಿ ಘೋಷಣೆ ಕೂಗಿಲ್ಲ. ಒಂದು ವೇಳೆ ಕೂಗಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ನಾನು ಅಲ್ಲಿದ್ದ ವೇಳೆ ನನಗೆ ಕೇಳಿಸಿಲ್ಲ. ಆ ರೀತಿ ಘೋಷಣೆ ಕೂಗಿದ್ದಲ್ಲಿ ಕ್ರಮ ಕೈಗೊಳ್ಳಬಹುದು” ಎಂದು ಹೇಳಿದ್ದಾರೆ.