ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ಮಂಗಳೂರಿನಲ್ಲಿ ನಡೆದಿದೆ.
ಮಾಜಿ ಸಚಿವ ನಾಗರಾಜ ಶೆಟ್ಟಿ ನೇತೃತ್ವದಲ್ಲಿ ಸುಮಾರು 50 ಮಂದಿ ಬಿಜೆಪಿ ಕಾರ್ಯಕರ್ತರ ಗುಂಪು ಇಂದು ಬೆಳಿಗ್ಗೆ ಮಂಗಳೂರಿನ ಮಲ್ಲಿಕಟ್ಟೆ ಬಳಿ ಇರುವ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿ, ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು. ತಕ್ಷಣವೇ ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಸ್ಥಳದಿಂದ ಕರೆದೊಯ್ದರು.
ಇದೇ ವೇಳೆ ಬಿಜೆಪಿ ಕಾರ್ಯಕರ್ತರ ಘೋಷಣೆಗೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಉಪ ಮೇಯರ್ ಪ್ರವೀಣ್ ಚಂದ್ರ ಆಳ್ವಾ ನೇತೃತ್ವದಲ್ಲಿ ತಮ್ಮ ಕಚೇರಿಯ ಎದುರು ನಿಂತು ಘೋಷಣೆ ಕೂಗಿದರು.