ಭಿನ್ನಮತ ಸ್ಫೋಟ ಹಾಗೂ ಬಿಜೆಪಿಯ ಆಪರೇಷನ್ ಕಮಲದ ತಂತ್ರದಿಂದಾಗಿ ತೂಗುಯ್ಯಾಲೆಯಲ್ಲಿ ಇರುವ ಹಿಮಾಚಲ ಪ್ರದೇಶ ಸರ್ಕಾರವನ್ನು ಉಳಿಸುವ ಜವಾಬ್ದಾರಿಯನ್ನು ಕರ್ನಾಟಕ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಹೆಗಲಿಗೆ ನೀಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ಇಂದು ಹಿಮಾಚಲ ಪ್ರದೇಶಕ್ಕೆ ತೆರಳಲಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನಗಳಂತೆ ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದೇನೆ. ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರು ಪಕ್ಷಕ್ಕೆ ನಿಷ್ಠರಾಗಿರುವ ಬಗ್ಗೆ ನನಗೆ ಆತ್ಮವಿಶ್ವಾಸವಿದೆ. ಅವರಿಗೆ ನೀಡಲಾದ ಜನಾದೇಶವನ್ನು ಉಳಿಸಿಕೊಳ್ಳುತ್ತಾರೆ” ಎಂದು ತಿಳಿಸಿದ್ದಾರೆ.
“ಆದಾಗ್ಯೂ ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಜಾಪ್ರಭುತ್ವವನ್ನು ಹಾಗೂ ಜನಾದೇಶ ಪ್ರಕ್ರಿಯೆಯನ್ನು ನಾಶಗೊಳಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಲು ಬಿಜೆಪಿ ಯಾವ ಅತಿರೇಕಕಕ್ಕೆ ಹೋಗುತ್ತದೆ ಎಂಬುದನ್ನು ಪ್ರಶ್ನಿಸಬೇಕಾಗಿದೆ ಮತ್ತು ಆತಂಕಕಾರಿಯಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯಸಭಾ ಚುನಾವಣೆ | ಹಿಮಾಚಲದಲ್ಲಿ ಬಿಜೆಪಿ ಗೆಲುವು; ‘ಕಾಂಗ್ರೆಸ್ ಸರ್ಕಾರಕ್ಕೆ ಜನಾದೇಶವಿಲ್ಲ’; ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ
ಅಪೃಪ್ತ 6 ಶಾಸಕರನ್ನು ಸಮಾಧಾನ ಪಡಿಸಿ ಭಿನ್ನಮತವನ್ನು ಸರಿಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ಹಿರಿಯ ನಾಯಕರಾದ ಭೂಪೇಂದರ್ ಸಿಂಗ್ ಹೂಡ ಹಾಗೂ ಡಿ ಕೆ ಶಿವಕುಮಾರ್ ಅವರನ್ನು ನೇಮಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ರಾಜ್ಯಸಭೆ ಚುನಾವಣೆಯಾದ ನಂತರ ಕಾಂಗ್ರೆಸ್‌ನ ಆರು ಶಾಸಕರನ್ನು ಚಂಡಿಗಢಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಆರೋಪಿಸಿದ್ದಾರೆ. ಅಡ್ಡ ಮತದಾನದ ಪರಿಣಾಮ ಕೈ ಪಕ್ಷದ ಅಭಿಷೇಕ್ ಮನು ಸಿಂಘ್ವಿ ಪರಾಭವಗೊಂಡಿದ್ದರು.
ಈ ಬೆಳವಣಿಗೆಯ ನಂತರ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಬಿಜೆಪಿ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿದರೆ, ವಿಧಾಸಭೆಯಲ್ಲಿ ಗದ್ದಲ ಉಂಟು ಮಾಡಿದ ಪರಿಣಾಮ ಬಿಜೆಪಿಯ 15 ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದರು. ಮುಖ್ಯಮಂತ್ರಿಯೊಂದಿಗಿನ ಭಿನ್ನಮತದಿಂದಾಗಿ ಕಾಂಗ್ರೆಸ್‌ನ ವಿಕ್ರಮದಿತ್ಯ ಸಿಂಗ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.