ಒತ್ತುವರಿ ತೆರವು ಮಾಡಲು ಬಂದ ಜೆಸಿಬಿಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿದ ಘಟನೆ ಬೆಂಗಳೂರು ಉತ್ತರದ ಹೆಸರಘಟ್ಟ ಹೋಬಳಿಯ ಶಿವಕೋಟೆ ಗ್ರಾಮದಲ್ಲಿ ನಡೆದಿದೆ.
ಬಚ್ಚೇಗೌಡ ಜೆಸಿಬಿಗೆ ಬೆಂಕಿ ಹಚ್ಚಿದ ವ್ಯಕ್ತಿ. ಶಿವಕೋಟೆ ಗ್ರಾಮದ ನಿವಾಸಿ. ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಒತ್ತುವರಿ ಮಾಡಿದ ಆರೋಪದ ಮೇಲೆ ಶಿವಕೋಟೆ ಗ್ರಾಮ್ ಸರ್ವೆ ನಂ 10/7&8ರಲ್ಲಿ ಬಂಡಿದಾರಿ ಒತ್ತುವರಿ ತೆರುವು ಮಾಡುವಂತೆ ಯಲಹಂಕ ತಹಶೀಲ್ದಾರ್ಗೆ ಸ್ಥಳೀಯರು ದೂರು ನೀಡಿದ್ದರು.
ಈ ಹಿನ್ನಲೆ ಒತ್ತುವರಿ ತೆರವು ಮಾಡಲು ತಹಶೀಲ್ದಾರ್ ಅಧಿಕಾರಿಗಳನ್ನು ಕಳುಹಿಸಿದ್ದರು. ಆರ್ ಐ ರವಿಕುಮಾರ್ ನೇತೃತ್ವದಲ್ಲಿ ಬಂಡಿದಾರಿ ತೆರವುಗೊಳಿಸುವ ಕಾರ್ಯ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ನಡೆಯುತ್ತಿತ್ತು. ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಒತ್ತುವರಿದಾರ ಸಿ. ಬಚ್ಚೇಗೌಡ ಬಿನ್ ಬಿ. ಚನ್ನರಾಯಪ್ಪ ಮತ್ತು ಮಗ ಚೇತನ್ ಎಂಬುವವರು ಏಕಾಏಕಿ ಪೆಟ್ರೋಲ್ ತುಂಬಿದ ಗಾಜಿನ ಬಾಟಲ್‌ಗಳಿಗೆ ಬೆಂಕಿ ಹಚ್ಚಿ ಜೆಸಿಬಿ ಮೇಲೆ ಸರಣಿ ಬಾಟಲ್‌ಗಳನ್ನು ಎಸೆದಿದ್ದು, ಇದರಿಂದ ಬೆಂಕಿ ಹತ್ತಿಕೊಂಡಿದೆ. ಜೆಸಿಬಿ ಡ್ರೈವರ್ ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೂಡಲೇ ಬಚ್ಚೇಗೌಡನನ್ನು ರಾಜಾನುಕುಂಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳಾದ ಬಚ್ಚೇಗೌಡ ಮತ್ತು ಚೇತನ್ ವಿರುದ್ಧ ದೂರು ದಾಖಲಾಗಿದೆ.
“ಪ್ರಸ್ತಾಪಿತ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಿಗೆ ಓಡಾಡುವ ಜಾಗವನ್ನು ಒತ್ತುವರಿ ಮಾಡಿದ್ದು, ಒತ್ತುವರಿ ತೆರವು ಕಾರ್ಯದಲ್ಲಿ ತೊಡಗಿದ್ದ ಸರ್ಕಾರಿ ಅಧಿಕಾರಿಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಹಾಗಾಗಿ, ಒತ್ತುವರಿದಾರರಾದ ಸಿ. ಬಚ್ಚೇಗೌಡ ಬಿನ್ ಬಿ. ಚೆನ್ನರಾಯಪ್ಪ ಮತ್ತು ಮಗ ಚೇತನ್ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲು ಹಾಗೂ ಎಫ್.ಐ.ಆರ್ ದಾಖಲಿಸುವಂತೆ ಗ್ರಾಮಸ್ಥರು ಕೋರಿದ್ದಾರೆ. ಹಾಗಾಗಿ, ಇವರ ವಿರುದ್ಧ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಬೇಕು” ಎಂದು ಯಲಹಂಕ ತಹಶೀಲ್ದಾರರು ರಾಜಾನುಕುಂಟೆ ಪೊಲೀಸರಿಗೆ ಪತ್ರ ಬರೆದಿದ್ದಾರೆ.
Land encroacher in Bengaluru arrested.
Removal of road encroachment taken up by Revenue Dept. JCB was set on fire to stop clearance of encroachment. We will not be intimidated. Our resolve is firm. #revenue #gok #encroachment pic.twitter.com/juMsMoDio5— Krishna Byre Gowda (@krishnabgowda) February 28, 2024
“ಬೆಂಗಳೂರಿನಲ್ಲಿ ಭೂ ಒತ್ತುವರಿದಾರನ ಬಂಧನ. ಕಂದಾಯ ಇಲಾಖೆಯಿಂದ ನಡೆಸಲಾದ ರಸ್ತೆ ಒತ್ತುವರಿ ತೆರವು ಕಾಮಗಾರಿ ತಡೆದು ಜೆಸಿಬಿಗೆ ಬೆಂಕಿ ಹಚ್ಚಿದ ಕಿಡಿಗೇಡಿ ಪೊಲೀಸರ ವಶಕ್ಕೆ. ಇಂತಹ ಬೆದರಿಕೆಗಳಿಗೆ ನಾವು ಬೆದರುವುದಿಲ್ಲ. ನಮ್ಮ ಸಂಕಲ್ಪ ದೃಢವಾಗಿದೆ” ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡರು ಟ್ವೀಟ್ ಮಾಡಿದ್ದಾರೆ.