ರಾಯಚೂರು ಜಿಲ್ಲೆಯು ಮೆಗಾ ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಾಣಕ್ಕೆ ಸೂಕ್ತ ಸ್ಥಳವಾಗಿದ್ದು, ಈ ಬಗ್ಗೆ ಸಂಸದರು ಮುತುವರ್ಜಿ ವಹಿಸಿ ಹೇಳಬೇಕಿತ್ತು. ಕಲಬುರಗಿಯ ಜನಪ್ರತಿನಿಧಿಗಳ ಒತ್ತಡದಿಂದ ಕಲಬುರಗಿಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಸೂಕ್ತ ಸೌಲಭ್ಯಗಳಿಲ್ಲ ಜೊತೆಗೆ ಹತ್ತಿ ಹೆಚ್ಚಾಗಿ ಬೆಳೆಯುವುದಿಲ್ಲ. ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಿ ರಾಯಚೂರು 2ನೇ ಪ್ರಸ್ತಾವನೆ ಸಲ್ಲಿಸಬೇಕು. ಪ್ರಧಾನಿ ಬೇಟಿ ಮಾಡಿಸಲು ಮುಂದಾಗಬೇಕು ಎಂದು ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ವಿ ಲಕ್ಷ್ಮಿರೆಡ್ಡಿ ಒತ್ತಾಯಿಸಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, “ಇತ್ತೀಚಿಗೆ ಸಂಸದ ರಾಜಾ ಅಮರೇಶ್ವರ ನಾಯಕರು ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಕುರಿತು ಹೇಳಿಕೆ ನೀಡಿರುವುದು ಬಹಳ ಆಶ್ಚರ್ಯಕರವಾಗಿದೆ. ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರವು ತಿಳಿಸಿರುವ ಎಲ್ಲ ನಿಯಮಗಳಿದ್ದು, ಏಷ್ಯಾದಲ್ಲಿಯೇ ಇಲ್ಲಿಯ ಹತ್ತಿ ಮಾರುಕಟ್ಟೆಯು ಪ್ರಸಿದ್ಧಿಯನ್ನು ಪಡೆದುಕೊಂಡು 2ನೇ ಸ್ಥಾನದಲ್ಲಿದೆ. ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಜಿಲ್ಲೆಯು ಸೂಕ್ತ ಸ್ಥಳವಾಗಿದೆ. ಈ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದು, ಈ ವಿಷಯದ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ” ಎಂದರು.
“ಕಲಬುರಗಿಯ ಕೆಲ ರಾಜಕಾರಣಿಗಳ ಕುತಂತ್ರದಿಂದ ಆ ಪತ್ರವು ವಿಳಂಬವಾಗಿ ಒಂದು ವರ್ಷದ ನಂತರ ರಾಜ್ಯ ಸರ್ಕಾರಕ್ಕೆ ತಲುಪಿದೆ. ರಾಜ್ಯ ಸರ್ಕಾರ ಪತ್ರವನ್ನು ಬದಿಗಿಟ್ಟು ಡಿಸೆಂಬರ್‌ನಲ್ಲಿ ಟೆಕ್ಸ್‌ಟೈಲ್ ಇಲಾಖೆಗೆ ಪರಿಶೀಲನೆ ಮಾಡುವಂತೆ ಪತ್ರವನ್ನು ಬರೆದಿದ್ದಾರೆ. ರಾಯಚೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿತ್ತು” ಎಂದರು.
“ಸಂಸದರು ಲೋಕಸಭೆಯಲ್ಲಿ ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿಯವರ ಜೊತೆಗೆ ಮಾತನಾಡಿ, ರಾಯಚೂರಿನಲ್ಲಿಯೇ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಬೇಕೆಂದು ಮನವಿ ಮಾಡಿದ್ದರೆ, ರಾಯಚೂರಿನಲ್ಲಿಯೇ ಸ್ಥಾಪನೆಯಾಗುತ್ತಿತ್ತು. ಈ ಭಾಗದ ಯುವಜನರಿಗೆ ಕನಿಷ್ಟ 40 ಸಾವಿರ ಉದ್ಯೋಗಾವಕಾಶಗಳು ದೊರಕುತ್ತಿದ್ದವು” ಎಂದು ತಿಳಿಸಿದರು.
“ಎಲ್ಲ ರಾಜ್ಯಗಳಿಗಿಂತ ರಾಯಚೂರಿನಲ್ಲಿ ಉದ್ದಿಮೆದಾರರು ಹೆಚ್ಚಿನ ಬೆಲೆಯಲ್ಲಿ ಹತ್ತಿಯನ್ನು ಖರೀದಿ ಮಾಡಿದ್ದಾರೆ. ರಾಯಚೂರು ಮತ್ತು ಯಾದಗಿರ ಜಿಲ್ಲೆಗಳಿಗೆ 34 ಸಾವಿರ ಕೋಟಿ ರೂ. ಅನುದಾನ ಬಂದಿದೆ ಎಂದು ಹೇಳಿರುವುದು ಬಹಳ ಆಶ್ಚರ್ಯಕರವಾಗಿದೆ. 5 ಸಾವಿರ ಕೋಟಿ ಖರ್ಚು ಮಾಡಿದ್ದರೆ ರಾಯಚೂರು ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಅವಕಾಶವಿತ್ತು. ಆದರೆ ಅಭಿವೃದ್ಧಿಯಾಗಿಲ್ಲ” ಎಂದು ಆರೋಪಿಸಿದರು.
“ಕೇಂದ್ರ ಸರ್ಕಾರದ ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಉದ್ಯೋಗ ಯೋಜನೆ ಆಯಾ ಜಿಲ್ಲೆಗಳ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಜಿಲ್ಲೆಗಳಲ್ಲಿ ಸರ್ವೇ ಮಾಡಬೇಕಾಗಿತ್ತು. ಆದರೆ ಅಂತಹ ಯಾವುದೇ ಕೆಲಸಗಳನ್ನು ಸಂಸದರು ಮಾಡಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಲೋಕಸಭಾ ಚುನಾವಣೆ; ಚುನಾವಣಾ ಕಾರ್ಯ ನಿರ್ವಹಣೆಗೆ ಸಮಿತಿ ರಚನೆ
ಕಲಬುರಗಿಯ ಸಂಸದ ಉಮೇಶ ಜಾಧವ್ ಮತ್ತು ಮಾಜಿ ಸಚಿವ ಮುರುಗೇಶ್ ಆರ್ ನಿರಾಣಿ ಇವರ ಒತ್ತಡಕ್ಕೆ ಮಣಿದು ಹತ್ತಿ ಬೆಳೆ ಬೆಳೆಯದಂತಹ ಸ್ಥಳದಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಸ್ಥಳ ಸೂಚಿಸಿದ್ದಾರೆ. ಹತ್ತಿಯನ್ನೇ ಬೆಳೆಯದ ಜಿಲ್ಲೆಯಲ್ಲಿ ಸ್ಥಾಪನೆ ಮಾಡಬಾರದು, ಮೆಗಾ ಟೆಕ್ಸ್‌ಟೈಲ್ ಪಾರ್ಕ್ ರಾಯಚೂರಿನಲ್ಲಿಯೇ ಸ್ಥಾಪನೆಯಾಗಬೇಕು. ಸಂಸದರು 2ನೇ ಪ್ರಸ್ತಾವನೆ ಸಲ್ಲಿಸಿ ಜಿಲ್ಲೆಯಲ್ಲಿರುವ ಹತ್ತಿಗೆ ಸಂಭವಿಸಿದ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಹಾಗೂ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಮುಂದಾಗಬೇಕು” ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಆನಂದ ರೆಡ್ಡಿ, ತಾನಾಜಿ ಇದ್ದರು.
ವರದಿ : ಹಫೀಜುಲ್ಲ